ಕಡಿಮೆ ಸ್ಥಾನ ಗೆದ್ದಿದ್ದರೂ ಬಿಜೆಪಿ ಬೆಂಬಲದಿಂದ 2ನೇ ಬಾರಿ ಅಧ್ಯಕ್ಷ ಸ್ಥಾನ ಪಡೆದ ಜೆಡಿಎಸ್
ಮಲೇಬೆನ್ನೂರು, ನ.6- ಇಲ್ಲಿನ ಪುರಸಭೆಯ 2ನೇ ಅವಧಿಯ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳು ಶುಕ್ರವಾರ ನಡೆದ ಚುನಾವಣೆಯಲ್ಲಿ ನಿರೀಕ್ಷೆಯಂತೆ ಜೆಡಿಎಸ್ ಪಾಲಾಗಿವೆ.
ಅಧ್ಯಕ್ಷರಾಗಿ 22ನೇ ವಾರ್ಡಿನ ಜೆಡಿಎಸ್ ಸದಸ್ಯರಾದ ಶ್ರೀಮತಿ ನಾಹೀದಾ ಅಂಜುಂ ಸೈಯದ್ ಇಸ್ರಾರ್ ಮತ್ತು ಉಪಾಧ್ಯಕ್ಷರಾಗಿ 8ನೇ ವಾರ್ಡಿನ ಜೆಡಿಎಸ್ ಸದಸ್ಯರಾದ ಶ್ರೀಮತಿ ಅಂಜಿನಮ್ಮ ವಿಜಯಕುಮಾರ್ ಅವರು ಜೆಡಿಎಸ್‌ನ 5, ಬಿಜೆಪಿಯ 7, ಪಕ್ಷೇತರರು 2 ಮತ್ತು ಸಂಸದ ಜಿ.ಎಂ.ಸಿದ್ದೇಶ್ವರ ಅವರ 1 ಮತ ಸೇರಿ ಒಟ್ಟು 15 ಮತಗಳನ್ನು ಪಡೆದು ಆಯ್ಕೆಯಾದರು.
ಕಾಂಗ್ರೆಸ್‌ನಿಂದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ 20ನೇ ವಾರ್ಡಿನ ಸದಸ್ಯರಾದ ಮಮ್ತಾಜ್ ಬೇಗಂ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ 11ನೇ ವಾರ್ಡಿನ ಶ್ರೀಮತಿ ಮಂಜುಳಾ ಭೋವಿಕುಮಾರ್ ಅವರು ತಲಾ 9 ಮತಗಳನ್ನು ಪಡೆದು ಪರಾಭವಗೊಂಡರು.
ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮತ್ತು ಉಪಾಧ್ಯಕ್ಷ ಸ್ಥಾನ ಎಸ್ಸಿ ಮಹಿಳೆಗೆ ಮೀಸಲಾಗಿತ್ತು.
ತಹಶೀಲ್ದಾರ್ ಕೆ.ಬಿ.ರಾಮಚಂದ್ರಪ್ಪ ಅವರು ಚುನಾವಣಾಧಿಕಾರಿಯಾಗಿದ್ದರು. ಚುನಾವಣಾ ಶಿರಸ್ತೇದಾರ್ ಪ್ರಶಾಂತ್, ಪುರಸಭೆ ಮುಖ್ಯಾಧಿಕಾರಿ ಧರಣೇಂದ್ರಕುಮಾರ್, ಉಪತಹಶೀಲ್ದಾರ್ ಆರ್.ರವಿ, ಕಂದಾಯ ನಿರೀಕ್ಷಕ ಸಮೀರ್ ಮತ್ತಿತರೆ ಅಧಿಕಾರಿಗಳು ಹಾಜರಿದ್ದು ಸಹಕರಿಸಿದರು.
ಸಂಸದರ ಬೆಂಬಲ : ಮಲೇಬೆನ್ನೂರು ಪುರಸಭೆಯ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆಗಾಗಿ ಇದೇ ಮೊದಲ ಬಾರಿಗೆ ಪಾಲ್ಗೊಂಡಿದ್ದ ಸಂಸದ ಜಿ.ಎಂ.ಸಿದ್ದೇಶ್ವರ ಅವರು ಸಭೆಯಲ್ಲಿ ಸದಸ್ಯರ ಜೊತೆ ಕುಳಿತು ಬಿಜೆಪಿ-ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳಿಗೆ ಕೈ ಎತ್ತಿ ಬೆಂಬಲ ಸೂಚಿಸಿದರು.
ಜೆಡಿಎಸ್‌ಗೆ ಬಂಪರ್ ಲಾಟರಿ : ಹರಿಹರ ನಗರಸಭೆಯಲ್ಲಿ ಅಧ್ಯಕ್ಷ ಸ್ಥಾನ ಪಡೆದುಕೊಂಡಿರುವ ಜೆಡಿಎಸ್, ಇಲ್ಲಿನ ಪುರಸಭೆಯಲ್ಲೂ ಅಧ್ಯಕ್ಷ-ಉಪಾಧ್ಯಕ್ಷ ಎರಡೂ ಸ್ಥಾನಗಳನ್ನು ಪಡೆದುಕೊಳ್ಳುವ ಮೂಲಕ ದೀಪಾವಳಿಯ ಡಬ್ಬಲ್ ಧಮಾಕ ಸಿಕ್ಕಂತಾಗಿದೆ.
ನೂತನ ಅಧ್ಯಕ್ಷೆ ನಾಹೀದಾ ಅಂಜುಂ ಅವರು ಇತ್ತೀಚಿಗೆ ನಿಧನರಾದ ಜೆಡಿಎಸ್ ಮುಖಂಡ ಎಸ್.ಕೆ.ಅಲ್ತಾಫ್ ಅವರ ಸೊಸೆ. ಆದರೆ, ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ನಂತರ ಪುರಸಭೆ ಮುಂಭಾಗದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಹನಗವಾಡಿ ವೀರೇಶ್, ಜಿ.ಪಂ. ಸದಸ್ಯ ಬಿ.ಎಂ.ವಾಗೀಶ್ ಸ್ವಾಮಿ, ತಾ. ಬಿಜೆಪಿ ಅಧ್ಯಕ್ಷ ಹಿಂಡಸಘಟ್ಟ ಲಿಂಗರಾಜ್, ಬಿಜೆಪಿ ಮುಖಂಡರಾದ ಚಂದ್ರಶೇಖರ್ ಪೂಜಾರ್, ಕೆ.ಜಿ.ವೀರನಗೌಡ್ರು, ಐರಣಿ ಅಣ್ಣಪ್ಪ ಸೇರಿದಂತೆ ಬಿಜೆಪಿ ಕಾರ್ಯಕರ್ತರು, ಬಿಜೆಪಿಯ ಪುರಸಭೆೆ ಸದಸ್ಯರೇ ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದು, ಸಂಭ್ರಮಿಸಿದ್ದು, ವಿಶೇಷವಾಗಿತ್ತು.
ಜೆಡಿಎಸ್ ಪಕ್ಷದ ಜಿಲ್ಲಾಧ್ಯಕ್ಷರಾಗಲಿ, ಮಾಜಿ ಶಾಸಕರಾಗಲಿ, ಮುಖಂಡರಾಗಲಿ ಅಲ್ಲಿ ಕಂಡು ಬರಲಿಲ್ಲ. ಗ್ರಾಮಾಂತರ ಡಿವೈಎಸ್ಪಿ ನರಸಿಂಹ ತಾಮ್ರಧ್ವಜ, ಪಿಎಸ್‌ಐ ವೀರಬಸಪ್ಪ ಅವರ ನೇತೃತ್ವದಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿತ್ತು.
ಒಲಿದ ಅಧ್ಯಕ್ಷ : ಈ ಹಿಂದಿನ ಅವಧಿಯಲ್ಲಿ 30 ತಿಂಗಳು ಅಧ್ಯಕ್ಷರಾಗಿದ್ದ ಶ್ರೀಮತಿ ಅಂಜಿನಮ್ಮ ವಿಜಯಕುಮಾರ್ ಈಗ ಮತ್ತೆ ಉಪಾಧ್ಯಕ್ಷರಾಗಿದ್ದಾರೆ. ಬಿಜೆಪಿಯಲ್ಲಿ ಎಸ್ಸಿ ಮಹಿಳೆ ಇಲ್ಲದ ಕಾರಣ ಸಹಜವಾಗಿಯೇ ಅಂಜಿನಮ್ಮನವರಿಗೆ ಅದೃಷ್ಟ ಒಲಿದು ಬಂತು. ಕಳೆದ ಅವಧಿಯಲ್ಲಿ ಸ್ವಲ್ಪ ತಿಂಗಳಾದರೂ ಅಧ್ಯಕ್ಷರಾಗಬೇಕೆಂಬ ಯತ್ನ ವಿಫಲರಾಗಿದ್ದ ಕಾಂಗ್ರೆಸ್‌ನ ಶ್ರೀಮತಿ ಮಂಜುಳಾ ಭೋವಿಕುಮಾರ್ ಅವರಿಗೆ ಈ ಬಾರಿ ಉಪಾಧ್ಯಕ್ಷ ಸ್ಥಾನಕ್ಕಾಗಿ ಪಟ್ಟ ಏನೆಲ್ಲಾ ಪ್ರಯತ್ನವೂ ಕೈ ಹಿಡಿಯಲಿಲ್ಲ.
ಕಾಂಗ್ರೆಸ್ ಪಕ್ಷಕ್ಕೆ ಜೆಡಿಎಸ್ ಬೆಂಬಲ ನೀಡಿದರೆ ಅಧ್ಯಕ್ಷರಾಗಬೇಕೆಂದು ಶ್ರಮವಹಿಸಿದ್ದ ಆಕಾಂಕ್ಷಿಗಳಿಗೂ ನಿರಾಸೆ ಉಂಟಾಯಿತು.