ಸರ್ಕಾರ ಮುಂಚೆಯೇ ಪಟಾಕಿ ನಿಷೇಧದ ಬಗ್ಗೆ ತಿಳಿಸಿದ್ದರೆ ನಾವ್ಯಾರೂ ಪಟಾಕಿ ಮಾರಾಟಕ್ಕೆ ಮುಂದಾಗುತ್ತಿರಲಿಲ್ಲ. – ಡಿ.ಎಸ್. ಸಿದ್ದಣ್ಣ, ಪಟಾಕಿ ವರ್ತಕರ ಹಾಗೂ ಬಳಕೆದಾರರ ಸಂಘದ ಅಧ್ಯಕ್ಷ
ದಾವಣಗೆರೆ, ನ. 6 – ದೀಪಾವಳಿ ಹಬ್ಬ ಹೊಸ್ತಿಲಲ್ಲೇ ಇರುವಾಗ ರಾಜ್ಯ ಸರ್ಕಾರ ಪಟಾಕಿ ನಿಷೇಧಕ್ಕೆ ಮುಂದಾಗುವುದಾಗಿ ಹೇಳಿರುವುದು ಪಟಾಕಿ ವರ್ತಕರಿಗೆ ಆಘಾತ ನೀಡಿದೆ. ಶುಕ್ರವಾರವಷ್ಟೇ ಹೈಸ್ಕೂಲ್ ಮೈದಾನದಲ್ಲಿ ಪಟಾಕಿ ಮಾರಾಟಕ್ಕೆ ಶೆಡ್ ಹಾಕಲು ಸಿದ್ಧತೆ ನಡೆಸಿದ್ದ ವರ್ತಕರು, ಮುಂದಿನ ದಾರಿ ಏನೆಂದು ತಿಳಿಯದೇ ಅತಂತ್ರರಾಗಿದ್ದಾರೆ.
ಶೆಡ್ ಹಾಕಲು ತೆರಳಿದ ಸಂದರ್ಭದಲ್ಲಿಯೇ ನಿಷೇಧದ ಹೇಳಿಕೆ ಹೊರ ಬಿದ್ದಿದೆ. ಈ ಹಿನ್ನೆಲೆಯಲ್ಲಿ ಅಧಿಕಾರಿಗಳ ಮೌಖಿಕ ಸೂಚನೆಯಂತೆ ವ್ಯಾಪಾರಿಗಳು ಶೆಡ್ ಹಾಕುವುದನ್ನು ಸದ್ಯಕ್ಕೆ ಕೈ ಬಿಟ್ಟಿದ್ದಾರೆ.
ಕೊರೊನಾ ಹಿನ್ನೆಲೆಯಲ್ಲಿ ಪಟಾಕಿ ವ್ಯಾಪಾರ ಹಿಂದಿನಂತೆ ನಡೆಯುವ ಬಗ್ಗೆ ಯೇ ಅನುಮಾನಗಳಿದ್ದವು. ಹೀಗಾಗಿ ಕಳೆದ ವರ್ಷಕ್ಕೆ ಹೋಲಿಸಿದರೆ ಸಾಕಷ್ಟು ಕಡಿಮೆ, 52 ವರ್ತಕರು ಮಾತ್ರ ಪಟಾಕಿ ಮಾರಾಟಕ್ಕೆ ಅನುಮತಿ ಪಡೆದಿದ್ದರು. ಕೊನೆ ಕ್ಷಣದವರೆಗೂ ಅಳೆದೂ, ತೂಗಿ ವರ್ತಕರು ಪಟಾಕಿ ಅಂಗಡಿ ಇಡಲು ಮುಂದಾಗಿದ್ದರು.
ದೀಪಾವಳಿ ಹಬ್ಬ ಮುಂದಿನ ಶನಿವಾರ ನ. 14ರಿಂದ ಆರಂಭವಾ ಗಲಿದೆ. ಶೆಡ್‌ಗಳ ಅಳವಡಿಕೆಗೆ ಕನಿಷ್ಠ ಒಂದು ವಾರ ಸಮಯವಾದರೂ ಬೇಕಾಗುತ್ತದೆ. ಹೀಗಾಗಿ ಸೋಮವಾರದ ಒಳಗೆ ಸರ್ಕಾರ ತನ್ನ ನಿಲುವು ಬದಲಿಸದೇ ಹೋದರೆ ವ್ಯಾಪಾರಿಗಳು ತೀವ್ರ ಸಂಕಷ್ಟಕ್ಕೆ ಸಿಲುಕಲಿದ್ದಾರೆ.
ಸರ್ಕಾರ ಕನಿಷ್ಠ 2-3 ತಿಂಗಳು ಮುಂಚೆ ಪಟಾಕಿ ನಿಷೇಧದ ಬಗ್ಗೆ ತಿಳಿಸಿದ್ದರೆ ನಾವ್ಯಾರೂ ಪಟಾಕಿ ಮಾರಾಟಕ್ಕೆ ಮುಂದಾಗುತ್ತಿರಲಿಲ್ಲ. ಆದರೆ, ಕೊನೆ ಕ್ಷಣದಲ್ಲಿ ಕೊರೊನಾ ಹಿನ್ನೆಲೆಯಲ್ಲಿ ಪಟಾಕಿ ಮಾರಾಟ ನಿಷೇಧ ಮಾಡುವುದಾಗಿ ಮಾಧ್ಯಮಗಳಲ್ಲಿ ಬಂದಿದೆ. ಈ ಬಗ್ಗೆ ಇನ್ನೂ ಆದೇಶ ಪತ್ರ ಸಿಕ್ಕಿಲ್ಲ. ಮುಂದೇನು ಎಂಬುದು ಅತಂತ್ರವಾಗಿದೆ ಎಂದು ಪಟಾಕಿ ವರ್ತಕರ ಹಾಗೂ ಬಳಕೆದಾರರ ಸಂಘದ ಅಧ್ಯಕ್ಷ ಡಿ.ಎಸ್. ಸಿದ್ದಣ್ಣ ಹೇಳಿದ್ದಾರೆ. ನಗರದಲ್ಲಿ ಸುಮಾರು ಒಂದರಿಂದ 1.5 ಕೋಟಿ ರೂ.ಗಳವರೆಗೆ ಪಟಾಕಿ ವಹಿವಾಟು ನಡೆಯುತ್ತದೆ ಎಂದು ಹೇಳಿರುವ ಪಟಾಕಿ ವ್ಯಾಪಾರಿ ಎಂ.ಆರ್. ರಾಜು, ಸರ್ಕಾರದ ಹಠಾತ್ ಕ್ರಮದಿಂದ ಆಘಾತವಾಗಿದೆ. ಸರ್ಕಾರ ಪಟಾಕಿ ಮಾರಾಟಕ್ಕೆ ಅನುಮತಿ ನೀಡಬೇಕೆಂದು ಮನವಿ ಸಲ್ಲಿಸಲಿದ್ದೇವೆ ಎಂದಿದ್ದಾರೆ.
ನಗರದ ಹಲವಾರು ಕುಟುಂಬಗಳು ಪಟಾಕಿ ವ್ಯಾಪಾರವನ್ನೇ ಜೀವನೋಪಾಯಕ್ಕಾಗಿ ಅವಲಂಬಿಸಿದ್ದಾರೆ. ತಮಿಳುನಾಡಿನಲ್ಲಿ ಪಟಾಕಿ ಉತ್ಪಾದನಾ ಘಟಕಗಳು ಹೆಚ್ಚಾಗಿದ್ದು, ಅಲ್ಲೂ ಲಕ್ಷಾಂತರ ಜನರು ಪಟಾಕಿ ಅವಲಂಬಿಸಿದ್ದಾರೆ. ದೇಶದ ಉತ್ತರ ಭಾಗದ ಕೆಲ ರಾಜ್ಯಗಳು ನಿಷೇಧ ಹೇರಿದವೆಂದು ಇಲ್ಲೂ ನಿಷೇಧ ಹೇರಿದರೆ ಜನರ ಜೀವನಕ್ಕೆ ಹೊಡೆತ ಬೀಳುತ್ತದೆ ಎಂದು ಹಿರಿಯ ಪಟಾಕಿ ವ್ಯಾಪಾರಿ ಜಿ. ರಾಘವೇಂದ್ರ ರಾವ್ ಹೇಳಿದ್ದಾರೆ.
ಪಟಾಕಿ ಖರೀದಿಗೆ ಹಣ ಪಾವತಿಸಿ ಖರೀದಿ ಮುಗಿದಿದೆ. ಇಂತಹ ಸಂದರ್ಭದಲ್ಲಿ ಮುಂದೇನು ಎಂಬುದು ದಿಕ್ಕು ತೋಚದಂತಾಗಿದೆ. ವರ್ಷವಿಡೀ ಮಾರುವ ಸರಕೂ ಇದಲ್ಲ ಎಂದು ಮಲೇಬೆನ್ನೂರಿನ ಪಟಾಕಿ ವ್ಯಾಪಾರಿ ಸುಧೀರ್ ಗುಪ್ತ ತಿಳಿಸಿದ್ದಾರೆ.
ವರ್ಷಾರಂಭದಲ್ಲೇ ಕೊರೊನಾ ಬಂದು, ಸೆಪ್ಟೆಂಬರ್ ವೇಳೆಗೆ ಉಲ್ಬಣಿಸಿತ್ತು. ಇಷ್ಟೆಲ್ಲಾ ಸಮಯದಲ್ಲಿ ಸುಮ್ಮನಿದ್ದ ರಾಜ್ಯ ಸರ್ಕಾರ, ದೀಪಾವಳಿ ಹೊಸ್ತಿಲಲ್ಲಿ ನಿಷೇಧ ಹೇರುವ ಮಾತನಾಡಿದೆ. ಮತ್ತೊಂದೆಡೆ ಹಸಿರು ಪಟಾಕಿಗೆ ಹಸಿರು ನಿಶಾನೆಯನ್ನೂ ತೋರಿಸಿದೆ. ಹೀಗಾಗಿ ಸದ್ಯಕ್ಕೆ ವರ್ತಕರು ಗೊಂದಲಕ್ಕೆ ಸಿಲುಕಿದ್ದಾರೆ.