ಲಾರಿ ಮಾಲೀಕರು-ಎಪಿಎಂಸಿ ವರ್ತಕರ ರಾಜೀ ಸಂಧಾನ ಸಫಲ

ದಾವಣಗೆರೆ, ನ.5- ಕೃಷಿ ಉತ್ಪನ್ನಗಳ ಸಾಗಾಟದ ವಿಚಾರದಲ್ಲಿ ಲಾರಿ ಮಾಲೀಕರು ಹಾಗೂ ಎಪಿಎಂಸಿ ವರ್ತಕರ ನಡುವೆ ರಾಜೀ ಸಂಧಾನ ಸಫಲವಾಗಿದ್ದು, ಈ ಇಬ್ಬರ ಸಂಘರ್ಷ ತೆರೆ ಕಂಡಿದೆ.

ದಾವಣಗೆರೆಯಿಂದ ಬೆಂಗಳೂರಿಗೆ ಕ್ವಿಂಟಾಲ್ ಗೆ 115 ರೂ. ಬಾಡಿಗೆಯನ್ನು ಲಾರಿ ಮಾಲೀಕರು ನಿಗದಿ ಮಾಡಿದ್ದರು. ಆದರೆ ಮೆಕ್ಕೆಜೋಳ ಸಾಗಿಸಲು ಕಡಿಮೆ ಬಾಡಿಗೆಗೆ ಅನ್ಯ ಜಿಲ್ಲೆಗಳಿಂದ ವರ್ತಕರು ಲಾರಿ ಕರೆಸಿದ್ದರು ಹಾಗೂ ಇದನ್ನು ಆಕ್ಷೇಪಿಸಿ, ಓವರ್‌ ಲೋಡ್‌ ಕಾರಣಕ್ಕೆ ಅನ್ಯ ಜಿಲ್ಲೆ ಲಾರಿಗಳಿಗೆ ಜಿಲ್ಲಾ ಲಾರಿ ಮಾಲೀಕರು ಆರ್ ಟಿಓ ಅಧಿಕಾರಿಗಳನ್ನು ಕರೆಸಿ ದಂಡ ವಿಧಿಸಿದ್ದು, ಈ ವಿಚಾರ ಇಬ್ಬರ ನಡುವಿನ ಗುದ್ದಾಟಕ್ಕೆ ಕಾರಣವಾಗಿತ್ತು. ಮೊನ್ನೆ ಎಪಿಎಂಸಿ ಪ್ರಾಂಗಣದಲ್ಲಿ ವರ್ತಕರು, ಲಾರಿ ಮಾಲೀಕರ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದರು. 

ಮೆಕ್ಕೆಜೋಳ ವರ್ತಕರ ಸಂಘದ ಕಾರ್ಯದರ್ಶಿ ಕೆ. ಜಾವೀದ್‌ ಸಾಬ್ ಅವರು ಲಾರಿ ಮಾಲೀಕರು ಕಳ್ಳರು ಎಂಬುದಾಗಿ ಹೇಳಿದ್ದು ಲಾರಿ ಮಾಲೀಕರ ಅಸಮಾಧಾನಕ್ಕೆ ಕಾರಣವಾಗಿ ತಮ್ಮ ಲಾರಿಗಳನ್ನು ರಸ್ತೆಗಿಳಿಸದೇ ಸರಕು ಸಾಗಾಟ ಸ್ಥಗಿತಗೊಳಿಸಿದ್ದರು.

ನಗರದ ಹೊಸ ಬಸ್‌ ನಿಲ್ದಾಣದ ಎದುರಿನ ಮೆಕ್ಕೆಜೋಳ ವರ್ತಕರ ಸಂಘದ ಕಚೇರಿಯಲ್ಲಿ ಇಂದು ನಡೆದ ಸಂಧಾನ ಸಭೆಯಲ್ಲಿ ಲಾರಿ ಮಾಲೀಕರು ಹಾಗೂ ವರ್ತಕರ ಮಧ್ಯೆ ಇದ್ದ ಸಂಘರ್ಷ ರಾಜೀ ಸಂಧಾದ ಮುಖೇನ ಸುಖಾಂತ್ಯ ಕಂಡಿತು.

ಸಭೆಯಲ್ಲಿ ಮಾತನಾಡಿದ ಮೆಕ್ಕೆಜೋಳ ವರ್ತಕರ ಸಂಘದ ಕಾರ್ಯದರ್ಶಿ ಕೆ. ಜಾವೀದ್‌ ಸಾಬ್, ಲಾರಿ ಮಾಲೀಕರ ಬಗ್ಗೆ ನಾನು ಅರಿವಿಲ್ಲದೇ ಆವೇಷದಲ್ಲಿ ಮಾತುಗಳನ್ನಾಡಿದ್ದು ತಪ್ಪಾಗಿದೆ ಎಂದು ಕ್ಷಮೆ ಕೋರಿದ್ದಾರೆ. ಅಲ್ಲದೇ ಎಲ್ಲರೂ ಹೊಂದಿಕೊಂಡು ಹೋಗೋಣ ಎಂದಿದ್ದಾರೆ.

ಇದಕ್ಕೆ ಜಿಲ್ಲಾ ಲಾರಿ ಮಾಲೀಕರ ಹಾಗೂ ಟ್ರಾನ್ಸ್‌ಪೋರ್ಟ್‌ ಏಜೆಂಟರ ಸಂಘದ ಅಧ್ಯಕ್ಷ ಸೈಯದ್‌ ಸೈಫುಲ್ಲಾ ಒಪ್ಪಿಗೆ ಸೂಚಿಸಿದರು. ಕೆಲ ಬೇಡಿಕೆ ಸಂಬಂಧ ಸಭೆಯಲ್ಲಿ ಒಪ್ಪಿಗೆ ಸೂಚಿಸಲಾಯಿತು. ವಿವಾದ ಮುಂದುವರೆಸದಂತೆ ಎಲ್ಲರೂ ತೀರ್ಮಾನ ಕೈಗೊಂಡರು.

ಲಾರಿ ಮಾಲೀಕರು ಕಳ್ಳರು ಎಂಬುದಾಗಿ ಹಿರಿಯ ವರ್ತಕ ಜಾವಿದ್ ಅವರು ಹೇಳಿದ್ದ ಮಾತುಗಳು ನೋವುಂಟು ಮಾಡಿತ್ತು. ಹಾಗಾಗಿ ಲಾರಿಗಳ ಸರಕು ಸಾಗಾಟ ಸ್ಥಗಿತಗೊಳಿಸಿದ್ದೆವು. ಇದೀಗ ಅವರು ತಮ್ಮ ಮಾತನ್ನು ಹಿಂಪಡೆದು
ಕ್ಷಮೆ ಕೇಳಿದ ಕಾರಣ ಮನ್ನಿಸಲಾಗಿದೆ. ಬಾಡಿಗೆಯನುಸಾರ ಲಾರಿಗಳ ಸರಕು ಸಾಗಾಟ ಯಥಾ ಪ್ರಕಾರ ಮುಂದುವರೆಸಲಾಗಿದೆ ಎಂದು  ಅವರು ತಿಳಿಸಿದ್ದಾರೆ.

ಸಂಧಾನ ಯಶಸ್ವಿಯಾಗಿದೆ. ಎಪಿಎಂಸಿಯಲ್ಲಿ ವಹಿವಾಟು ಸುಗಮವಾಗಿ ನಡೆಯುತ್ತಿದೆ ಎಂದು ವರ್ತಕ ಪ್ರತಿನಿಧಿ ದೊಗ್ಗಳ್ಳಿ ಬಸವರಾಜ್‌ ತಿಳಿಸಿದ್ದಾರೆ.

ಸಭೆಯಲ್ಲಿ ಲಾರಿ ಮಾಲೀಕರ ಸಂಘದ ಕಾರ್ಯದರ್ಶಿ ಎಸ್‌.ಕೆ. ಮಲ್ಲಿಕಾರ್ಜುನ, ದಾವಣಗೆರೆ ಲೋಕಲ್ ಮತ್ತು ಗೂಡ್ಸ್ ಶೆಡ್ ಲಾರಿ ಮಾಲೀಕರ ಸಂಘದ ಅಧ್ಯಕ್ಷ ಎಂ. ದಾದಾಪೀರ್, ಗೂಡ್ಸ್ ಶೆಡ್ ಲಾರಿ ಮಾಲೀಕರ ಸಂಘದ ಕಾರ್ಯದರ್ಶಿ ಇಮಾಮ್ ಹುಸೇನ್‌, ಜಿಲ್ಲಾ ಗೌರವಾಧ್ಯಕ್ಷ ನೇತಾಜಿರಾವ್‌, ಮಹಾಂತೇಶ್‌ ಒಣರೊಟ್ಟಿ, ಫೈರೋಜ್‌, ಬೆಳ್ಳೂಡಿ ಶಿವಕುಮಾರ್, ಭೀಮಣ್ಣ, ಸೋಗಿ ಮುರುಗೇಶ್, ಅಹ್ಮದ್‌ ಶರೀಫ್‌‌, ಮನ್ಸೂರ್‌ ಸೇರಿದಂತೆ ಲಾರಿ ಮಾಲೀಕರು ಹಾಗೂ ವರ್ತಕರು ಇದ್ದರು. 

error: Content is protected !!