ಸೆರೋ ಸಮೀಕ್ಷೆಯಂತೆ ಜಿಲ್ಲೆಯಲ್ಲಿ 40.6% ಜನರಿಗೆ ಸೋಂಕು, ರಾಜ್ಯದಲ್ಲಿ ಎರಡನೇ ಸ್ಥಾನ
ದಾವಣಗೆರೆ, ನ. 5 – ರಾಜ್ಯ ಸರ್ಕಾರ ನಿನ್ನೆಯಷ್ಟೇ ಪ್ರಕಟಿಸಿದ ಕೊರೊನಾ ಸೆರೋ ಸಮೀಕ್ಷೆಯಲ್ಲಿ ದಾವಣಗೆರೆ ಜಿಲ್ಲೆಯು ರಾಜ್ಯ ದಲ್ಲೇ ಎರಡನೇ ಸ್ಥಾನ ಪಡೆದುಕೊಂಡಿದೆ.
ಇಡೀ ರಾಜ್ಯದಲ್ಲಿ ಕೋವಿಡ್ – 19 ಹರಡಿರುವ ಪ್ರಮಾಣ ಶೇ.27.3ರಷ್ಟಿದ್ದರೆ, ಜಿಲ್ಲೆಯಲ್ಲಿ ಅದು ಶೇ.40.6ರಷ್ಟಿದೆ ಎಂದು ಸಮೀಕ್ಷೆ ತಿಳಿಸಿದೆ.
ಪಕ್ಕದ ಬಳ್ಳಾರಿ ಜಿಲ್ಲೆ ಮಾತ್ರ ದಾವಣಗೆರೆಗಿಂತ ಮೊದಲಿದ್ದು, ಅಲ್ಲಿ ಕೊರೊನಾ ಹರಡುವಿಕೆ ಶೇ.43.1ರಷ್ಟಿದೆ ಎಂದು ಸಮೀಕ್ಷೆಯಲ್ಲಿ ಹೇಳಲಾಗಿದೆ. ಈ ಎರಡೂ ಜಿಲ್ಲೆಗಳಲ್ಲಿ ಮಾತ್ರ ಕೊರೊನಾ ಹರಡುವಿಕೆ ಶೇ.40ಕ್ಕಿಂತ ಹೆಚ್ಚಾಗಿದೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ ಅತಿ ಕಡಿಮೆ ಶೇ.16.3ರಷ್ಟು ಕೊರೊನಾ ಹರಡುವಿಕೆ ಇದೆ ಎಂದು ಸಮೀಕ್ಷೆ ತಿಳಿಸಿದೆ.
ರಾಜ್ಯದ ಒಟ್ಟು ಜನಸಂಖ್ಯೆ 7.07 ಕೋಟಿ ಆಗಿದ್ದು, ಈ ಪೈಕಿ ಶೇ.27.3ರಷ್ಟು ಜನಸಂಖ್ಯೆ ಸಕ್ರಿಯ ಸೋಂಕು ಹೊಂದಿದೆ ಅಥವಾ ಹಿಂದೆಯೇ ಸೋಂಕಿಗೆ ಒಳಗಾಗಿದೆ. ಹೀಗಾಗಿ ಸೋಂಕಿತರ ಸಂಖ್ಯೆ ರಾಜ್ಯದಲ್ಲಿ 1.93 ಕೋಟಿ ಎಂದು ತಿಳಿಸಲಾಗಿದೆ.
ಪ್ರತ್ಯೇಕವಾಗಿ ಜಿಲ್ಲೆಗಳಲ್ಲಿ ಎಷ್ಟು ಕೊರೊನಾ ಸೋಂಕಿದೆ ಎಂಬ ಅಂದಾಜನ್ನು ಸಮೀಕ್ಷೆಯಲ್ಲಿ ಪ್ರಕಟಿಸಿಲ್ಲ. ಆದರೆ, ರಾಜ್ಯದ ಕೊರೊನಾ ಸೋಂಕನ್ನು ಅಂದಾಜಿಸಿದ ಮಾದರಿಯಲ್ಲೇ ಲೆಕ್ಕ ಹಾಕಿದರೆ, ದಾವಣಗೆರೆ ಜಿಲ್ಲೆಯಲ್ಲಿ 7.6 ಲಕ್ಷ ಜನರು ಸಕ್ರಿಯ ಸೋಂಕಿತರಿದ್ದಾರೆ ಇಲ್ಲವೇ ಸೋಂಕಿಗೆ ಒಳಗಾಗಿದ್ದಾರೆ ಎಂಬ ಅಂದಾಜು ಸಿಗುತ್ತದೆ.
ಕಳೆದ ಸೆಪ್ಟೆಂಬರ್ 3ರಿಂದ ಸೆಪ್ಟೆಂಬರ್ 16ರ ನಡುವೆ ಕೊರೊನಾ ಸೋಂಕಿನ ಹರಡುವಿಕೆ ಅಂದಾಜು ಮಾಡಲು ಮೊದಲ ಸುತ್ತಿನ ಸಮೀಕ್ಷೆ ನಡೆಸಲಾಗಿತ್ತು. ಇತ್ತೀಚೆಗೆ ಕೊರೊನಾದಿಂದ ಗುಣಮಖರಾದವರು ಹಾಗೂ ಪ್ರಸ್ತುತ ಸಕ್ರಿಯವಾಗಿ ಸೋಂಕು ಹೊಂದಿದವರನ್ನು ಸಮೀಕ್ಷೆಗೆ ಒಳಪಡಿಸಲಾಗಿತ್ತು. ರಾಜ್ಯದ 30 ಜಿಲ್ಲೆಗಳು ಹಾಗೂ ಬಿಬಿಎಂಪಿಯ 8 ವಲಯಗಳಲ್ಲಿ 18 ವರ್ಷಕ್ಕಿಂತ ಮೇಲ್ಪಟ್ಟ ವಯಸ್ಸಿನ ಜನಸಮೂಹದಲ್ಲಿ ಸಮೀಕ್ಷೆ ನಡೆಸಲಾಗಿತ್ತು.
ರಾಪಿಡ್ ಆಂಟಿಜನ್ ಟೆಸ್ಟ್, ಆರ್.ಟಿ. – ಪಿಸಿಆರ್ ಹಾಗೂ ಪ್ರತಿರಕ್ಷಣಾ ಪ್ರತಿಕ್ರಿಯೆಯನ್ನು ತಿಳಿಯಲು ಸೀರಂ ಮಾದರಿಯಲ್ಲಿ ಐಜಿಜಿ ಆಂಟಿಬಾಡಿಗಳನ್ನೂ ಸಹ ಪರೀಕ್ಷಿಸಲಾಗಿತ್ತು.
ರಾಜ್ಯದಲ್ಲಿ ಒಟ್ಟು 16,585 ಜನರನ್ನು ಸಮೀಕ್ಷೆಗೆ ಒಳಪಡಿಸಲಾಗಿತ್ತು. ಇವರಲ್ಲಿ 15,624 ವ್ಯಕ್ತಿಗಳ ಫಲಿತಾಂಶವನ್ನು ವಿಶ್ಲೇಷಿಸಲಾಗಿದೆ.
ದಾವಣಗೆರೆ ಜಿಲ್ಲೆಯಲ್ಲಿ 412 ಜನರನ್ನು ಸಮೀಕ್ಷೆಗೆ ಒಳಪಡಿಸಲಾಗಿತ್ತು. ಇವರ ಪೈಕಿ ಶೇ.40.6ರಷ್ಟು ಜನರಲ್ಲಿ ಕೊರೊನಾ ಇರುವುದಾಗಿ ಸಮೀಕ್ಷೆ ತಿಳಿಸಿದೆ.