ಇನ್ನೂ ದಾರಿಗೆ ಬರದ ಸ್ಮಾರ್ಟ್ ಪೂರೈಕೆ ಜಾಲ

ಅಕ್ಸೆಸರೀಸ್‌ಗಳ ಪೂರೈಕೆಯ ಮೇಲೂ ಕೊರೊನಾ ಪರಿಣಾಮ

ದಾವಣಗೆರೆ, ಆ.2 – ಒಂದೆಡೆ ಆನ್‌ಲೈನ್ ಶಿಕ್ಷಣದ ಭರಾಟೆ ಹೆಚ್ಚಾಗುತ್ತಿದ್ದರೆ, ಮತ್ತೊಂದೆಡೆ ಕಡಿಮೆ ದರದ ಸ್ಮಾರ್ಟ್‌ಫೋನ್ ಹಾಗೂ ಟ್ಯಾಬ್‌ಗಳ ಪೂರೈಕೆಯ ಮೇಲೆ ಕೊರೊನಾ ಪರಿಣಾಮ ಬೀರುತ್ತಿದೆ. ಇದು ಕೊರೊನಾ ಕಾಲದಲ್ಲಿ ಗ್ರಾಹಕರು ಹಾಗೂ ಪೋಷಕರ ಜೇಬಿನ ಮೇಲಿನ ಹೊರೆಯನ್ನು ಮತ್ತಷ್ಟು ಹೆಚ್ಚಿಸುತ್ತಿದೆ.

ಕೊರೊನಾ ಕಾರಣದಿಂದಾಗಿ ವಿಶ್ವದೆಲ್ಲೆಡೆ ಎಲೆಕ್ಟ್ರಾನಿಕ್ಸ್ ಸೇರಿದಂತೆ ಎಲ್ಲ ರೀತಿಯ ಸರಕುಗಳ ಪೂರೈಕೆಯ ಮೇಲೆ ಹೊಡೆತ ಬಿದ್ದಿತ್ತು. ಕೊರೊನಾ ಜೊತೆಗೆ ಬದುಕುವ ಹಾದಿಯಲ್ಲಿ ಉತ್ಪಾದನಾ ಚಟುವಟಿಕೆ ಮತ್ತೆ ಆರಂಭವಾಗಿದ್ದರೂ, ಕೊರೊನಾದ ಮೊದಲಿನ ಕಾಲಕ್ಕೆ ಪೂರ್ಣವಾಗಿ ವಾಪಸ್ಸಾಗಲು ಆಗಿಲ್ಲ.

ಪೂರೈಕೆ ಜಾಲದ ಸಮಸ್ಯೆ ಸೇರಿದಂತೆ ಹಲವು ಕಾರಣಗಳಿಂದಾಗಿ ಚೀನಾದ ಬೃಹತ್ ಮೊಬೈಲ್ ಪೂರೈಕೆ ಕಂಪನಿಗಳೇ ತೊಡಕು ಎದುರಿಸುವಂತಾಗಿದೆ. ಇದರಿಂದಾಗಿ ದೇಶದಲ್ಲಿ ಮೊಬೈಲ್ ಪೂರೈಕೆಯಲ್ಲಿ ಚೀನಾ ಕಂಪನಿಗಳು ಹೊಂದಿದ್ದ ಪಾಲು ಶೇ.81 ರಿಂದ 72ಕ್ಕೆ ಇಳಿಕೆಯಾಗಿದೆ ಎಂದು ಕೌಂಟರ್‌ಪಾಯಿಂಟ್ ರೀಸರ್ಚ್ ವರದಿ ಮಾಡಿದೆ.

ಚೀನಾ ಹೊರತಾಗಿಯೂ ಪೂರೈಕೆ ಜಾಲವನ್ನು ಹೊಂದಿದ್ದ ಸ್ಯಾಮ್‌ಸಂಗ್ ವೇಗವಾಗಿ ಕೊರೊನಾ ಮುಂಚಿನ ಮಟ್ಟದಲ್ಲೇ ಪೂರೈಕೆಗೆ ಬಂದಿದೆ. ಅಲ್ಲದೇ, ಸ್ಯಾಮ್‌ಸಂಗ್ ವಿಶ್ವದಲ್ಲೇ ಅತಿ ದೊಡ್ಡ ಮೊಬೈಲ್ ಉತ್ಪಾದನಾ ಘಟಕನವನ್ನು ಹೊಂದಿರುವುದೂ ಸಹ ಅದಕ್ಕೆ ನೆರವಾಗಿದೆ.

ಆದರೆ, ಬಿಡಿ ಭಾಗಗಳ ಪೂರೈಕೆ ಸಮಸ್ಯೆ ಸಂಪೂರ್ಣವಾಗಿ ನಿವಾರಣೆಯಾಗದೇ ಮೊಬೈಲ್ ಕಂಪನಿಗಳು ಕಡಿಮೆ ಬೆಲೆಯ ಮೊಬೈಲ್ ಉತ್ಪಾದನೆಯ ಕಡೆ ಹೆಚ್ಚು ಗಮನ ಹರಿಸದೇ, ಹೆಚ್ಚಿನ ಲಾಭ ತರುವ ಮಧ್ಯಮ ಹಾಗೂ ಉನ್ನತ ಮೊಬೈಲ್ ಹಂತದ ಕಡೆ ಒತ್ತು ನೀಡುತ್ತಿವೆ.

ಇದರಿಂದಾಗಿ ಕಡಿಮೆ ಬೆಲೆಯ ಮೊಬೈಲ್ ಹಾಗೂ ಟ್ಯಾಬ್‌ಗಳ ಲಭ್ಯತೆ ಕಡಿಮೆಯಾಗುತ್ತಿದೆ. ಇದು ಕೇವಲ ಮೊಬೈಲ್ ಅಷ್ಟೇ ಅಲ್ಲದೇ, ಇತರೆ ಎಲೆಕ್ಟ್ರಾನಿಕ್ ಸರಕುಗಳ ಪರಿಸ್ಥಿತಿಯೂ ಇದೇ  ಆಗಿದೆ ಎಂದು ಉದ್ಯಮದ ಮೂಲಗಳು ತಿಳಿಸಿವೆ.

ಪೂರೈಕೆ ಜಾಲವಷ್ಟೇ ಅಲ್ಲದೇ ಚೀನಾ ವಿರೋಧಿ ಭಾವನೆಯೂ ಚೀನಾದ ಮೊಬೈಲ್ ಕಂಪನಿಗಳಿಗೆ ಹಿನ್ನಡೆ ತಂದಿದೆ. ಚೀನಾ ಆಪ್‌ಗಳ ಮೇಲೆ ಸರ್ಕಾರ ಇತ್ತೀಚೆಗೆ ನಿಷೇಧ ಹೇರಿದ್ದೂ ಸೇರಿದಂತೆ ಹಲವಾರು ಕಾರಣಗಳಿಂದ ಗ್ರಾಹಕರು ಚೀನಾ ಮೊಬೈಲ್ ಕಡೆ ಹಿಂದಿನಷ್ಟು ಆಸಕ್ತಿ ತೋರುತ್ತಿಲ್ಲ ಎಂದು ಗುಪ್ತಾ ಶಾಪೆಯ ಪ್ರಶಾಂತ್ ಗುಪ್ತ ತಿಳಿಸಿದ್ದಾರೆ.

ಭಾರತದಲ್ಲೇ ಮೊಬೈಲ್, ಟ್ಯಾಬ್ ಇತ್ಯಾದಿಗಳನ್ನು ಉತ್ಪಾದಿಸುವ ಘಟಕಗಳು ಇವೆಯಾದರೂ, ಅದಕ್ಕೆ ಬೇಕಾದ ಸೂಕ್ಷ್ಮ ಬಿಡಿ ಭಾಗಗಳಿಗಾಗಿ ಚೀನಾ ಮತ್ತಿತರೆ ದೇಶಗಳ ಅವಲಂಬನೆ ತಪ್ಪಿಲ್ಲ. ಇದರಿಂದಾಗಿ ಮೊಬೈಲ್ ಅಕ್ಸೆಸರೀಸ್ ಪೂರೈಕೆಯ ಮೇಲೆ ಪರಿಣಾಮವಾಗುತ್ತಿದೆ.

ಚೀನಾದಿಂದ ಬರುತ್ತಿದ್ದ ಅಕ್ಸೆಸರೀಸ್‌ಗಳಿಗೆ ಲಾಕ್‌ಡೌನ್ ಹಾಗೂ ಪೂರೈಕೆ ಜಾಲದ ಸಮಸ್ಯೆಗಳ ಕಾರಣದಿಂದಾಗಿ ತೊಂದರೆಯಾಗಿದೆ. ದೇಶದಲ್ಲಿ ಪ್ರಮುಖವಾಗಿ ದೆಹಲಿ ಹಾಗೂ ಮುಂಬೈಗಳಲ್ಲಿ ಅಕ್ಸೆಸರೀಸ್‌ಗಳು ಉತ್ಪಾದನೆಯಾಗುತ್ತವೆ. ಇಲ್ಲಿಯೂ ಸಹ ಕೊರೊನಾ ಉಲ್ಬಣಿಸಿರುವುದು ಪೂರೈಕೆಗೆ ಸಮಸ್ಯೆ ತಂದಿದೆ.

ಸಾಮಾನ್ಯ ಹೆಡ್‌ಫೋನ್ ಅನ್ನು ಸಂಪೂರ್ಣವಾಗಿ ಭಾರತದಲ್ಲಿ ಉತ್ಪಾದಿಸಬಹುದು. ಆದರೆ, ಬ್ಲೂಟೂತ್ ಇರುವ ಹೆಡ್‌ಫೋನ್ ಮತ್ತಿತರೆ ಅಕ್ಸೆಸರೀಸ್‌ಗಳಿಗೆ ಚೀನಾದ ಅವವಲಂಬನೆ ಮುಂದುವರೆದೇ ಇದೆ. ಈ ಪರಿಸ್ಥಿತಿ ತಪ್ಪಿಸಲು ಕಂಪನಿಗಳಿಗೆ ಒಂದೆರಡು ವರ್ಷಗಳ ಸಮಯ ಬೇಕಾಗಬಹುದು ಎಂದು ಅಕ್ಸೆಸರೀಸ್ ವಿತರಕರಾದ ಗುರುನಾಥ್ ಕಾಮತ್ ತಿಳಿಸಿದ್ದಾರೆ.

ಕೊರೊನಾ ಸಮಯದಲ್ಲಿ ಆನ್‌ಲೈನ್ ಶಿಕ್ಷಣ ಬಯಸುವ ಸಾಕಷ್ಟು ಜನರು ಕಡಿಮೆ ಬೆಲೆಯ ಮೊಬೈಲ್‌ಗಳಿಗೆ ಹುಡುಕಾಟ ನಡೆಸಿದ್ದಾರೆ. ಕೆಲವರಂತೂ ಸೆಕೆಂಡ್ ಹ್ಯಾಂಡ್ ಮೊಬೈಲ್ ಆದರೂ ಸಾಕೆನ್ನುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಕಡಿಮೆ ಬೆಲೆಯ ಮೊಬೈಲ್ ಹಾಗೂ ಟ್ಯಾಬ್‌ಗಳು ಸಿಗದಿದ್ದರೆ ಸಮಸ್ಯೆಯಾಗುತ್ತದೆ ಎಂದವರು ಹೇಳಿದ್ದಾರೆ.

ಅಕ್ಸೆಸರೀಸ್ ಸೇರಿದಂತೆ ಸರಕುಗಳ ಪೂರೈಕೆ ಕೊರೊನಾ ಮುಂಚಿನ ಸ್ಥಿತಿಗೆ ತಲುಪಲು ಇನ್ನು ಎರಡು ತಿಂಗಳಾದರೂ ಬೇಕಾಗಬಹುದು ಎಂದು ಅಂದಾಜಿಸಲಾಗುತ್ತಿದೆ.

error: Content is protected !!