ದಾವಣಗೆರೆ, ಜು. 31- ಮಾಜಿ ಸಚಿವ ಕೆ.ಶಿವಮೂರ್ತಿ ಅವರ ಪತ್ನಿ ಡಾ.ಗೀತಾ ಶಿವಮೂರ್ತಿ ವಿರುದ್ಧ ಜಾಮೀನು ರಹಿತ ವಾರೆಂಟ್ ಇದ್ದರೂ ಅವರನ್ನು ಬಂಧಿಸುವಲ್ಲಿ ಪೊಲೀಸರ ವೈಫಲ್ಯತೆ ಕಾಣುತ್ತಿದೆ ಎಂದು ಬಂಜಾರ ಜನಜಾಗೃತಿ ಅಭಿಯಾನ ಸಮಿತಿಯ ಪ್ರಧಾನ ಕಾರ್ಯದರ್ಶಿ ಆರ್.ನಿಂಗಾನಾಯ್ಕ ಇಂದಿಲ್ಲಿ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದ್ದಾರೆ.
ಈ ಕೂಡಲೇ ಡಾ.ಗೀತಾ ಶಿವಮೂರ್ತಿ ಅವರನ್ನು ಬಂಧಿಸದೇ ಇದ್ದಲ್ಲಿ ಆರ್.ಎಂ.ಸಿ. ಯಾರ್ಡ್ ಪೊಲೀಸ್ ಠಾಣೆ ಎದುರು ಸಾಂಕೇತಿಕ ಧರಣಿ ನಡೆಸುವುದಾಗಿ ಅವರು ಎಚ್ಚರಿಸಿದರು.
ಬೆಂಗಳೂರಿನ ವಾಣಿ ವಿಲಾಸ ಆಸ್ಪತ್ರೆಯಲ್ಲಿ ಅಧೀಕ್ಷಕಿಯಾಗಿ ಸರ್ಕಾರಿ ಸೇವೆಯಲ್ಲಿರುವ ಗೀತಾ, ತನ್ನ ಹೆಸರಿನಲ್ಲಿರುವ ಬಾಡಾ ಕ್ರಾಸ್ನ ಖುಷ್ಕಿ ಜಮೀನಿನ ಪರಿಹಾರಕ್ಕೆ ಸುಳ್ಳು ದಾಖಲೆ ಸೃಷ್ಟಿಸಿ, ಪ್ರಾಧಿಕಾರದಿಂದ 3.35 ಲಕ್ಷ ರೂ.ಗಳ ಬದಲಾಗಿ 44.38 ಲಕ್ಷ ರೂ.ಗಳನ್ನು ಪಡೆದು ಸರ್ಕಾರಕ್ಕೆ ವಂಚಿಸಿದ್ದಾರೆ ಎಂದು ದೂರಿದರು.
ಈ ಹಿನ್ನೆಲೆಯಲ್ಲಿ ಜೂನ್ 17 ರಂದು ಆರ್.ಎಂ.ಸಿ. ಯಾರ್ಡ್ ಪೊಲೀಸ್ ಠಾಣೆಯಲ್ಲಿ ಇವರ ವಿರುದ್ಧ ಜಾಮೀನು ರಹಿತ ಕೇಸು ದಾಖಲಾಗಿ ರುತ್ತದೆ. ದೂರಿನಲ್ಲಿ ಕೆ.ಶಿವಮೂರ್ತಿ ಅವರ ಹೆಸರನ್ನು ಕೈಬಿಟ್ಟಿರುವ ಬಗ್ಗೆ ಪೊಲೀಸರ ಕ್ರಮದ ಮೇಲೆ ಅನುಮಾನಗಳು ಮೂಡುತ್ತಿವೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಲಂಬಾಣಿ ಸಮಾಜದ ಮುಖಂಡರಾದ ಎಲ್.ಪರಮೇಶ್ವರನಾಯ್ಕ, ಪರಮೇಶ್, ಪೀರ್ಯಾನಾಯ್ಕ ಉಪಸ್ಥಿತರಿದ್ದರು.