ಅನ್ಯ ಜಿಲ್ಲೆಯಿಂದ ಲಾರಿ ಬಾಡಿಗೆಗೆ ಖಂಡನೆ, ಹೆಚ್ಚಿನ ದಂಡಕ್ಕೆ ಆಕ್ರೋಶ

ದಾವಣಗೆರೆ,ನ.3- ಮೆಕ್ಕೆಜೋಳ ಸಾಗಾಣಿಕೆಗೆ ಅನ್ಯ ಜಿಲ್ಲೆಯಿಂದ ಲಾರಿಗಳನ್ನು ಬಾಡಿಗೆಗೆ ತರಿಸಿದ್ದ ಎಪಿಎಂಸಿ ವರ್ತಕರು. ಇದಕ್ಕೆ ಅಸಮಾಧಾನಗೊಂಡು ಆರ್ ಟಿಓ ಕರೆಸಿ ಅನ್ಯ ಜಿಲ್ಲೆ ಲಾರಿಗಳಿಗೆ ಹೆಚ್ಚು ವರಿ ದಂಡ ವಿಧಿಸಿದ ಜಿಲ್ಲಾ ಲಾರಿ ಮಾಲೀಕರ ಅಸೋಸಿಯೇಷನ್.

ಹೀಗೆ ಕೃಷಿ ಉತ್ಪನ್ನಗಳ ಸಾಗಾಟದ ವಿಚಾರದಲ್ಲಿ ಲಾರಿ ಮಾಲೀಕರ ಅಸೋಸಿ ಯೇಷನ್ ಮತ್ತು ಎಪಿಎಂಸಿ ವರ್ತಕರ ನಡುವೆ ವಾಗ್ವಾದ ನಡೆದು ಎಪಿಎಂಸಿ ಪ್ರಾಂಗಣದಲ್ಲಿಂದು ಪ್ರಕ್ಷುಬ್ಧ ವಾತಾವರಣ ನಿರ್ಮಾಣಗೊಂಡ ಘಟನೆ ನಡೆಯಿತು. 

ದಾವಣಗೆರೆಯಿಂದ ಬೆಂಗಳೂರಿಗೆ ಕ್ವಿಂಟಾಲ್ ಗೆ 115 ರೂ. ಬಾಡಿಗೆಯನ್ನು ಲಾರಿ ಮಾಲೀಕರು ಫಿಕ್ಸ್ ಮಾಡಿದ್ದರು. ಸೋಮವಾರ ಎಪಿಎಂಸಿಯಲ್ಲಿ ರೈತರಿಂದ ಖರೀದಿಸಿದ್ದ ಮೆಕ್ಕೆಜೋಳವನ್ನು ಹೊರ ರಾಜ್ಯಗಳಿಗೆ ಕಳುಹಿಸಲು ಕಡಿಮೆ ಬಾಡಿಗೆಗೆ ಅನ್ಯ ಜಿಲ್ಲೆಯ ಎರಡು ಲಾರಿ ತರಿಸಿಕೊಂಡು ಖರೀದಿದಾರರಿಂದ ಲೋಡ್ ಮಾಡಲಾಗಿತ್ತು. ಇದನ್ನು ಕಂಡ ಲಾರಿ ಅಸೋಸಿಯೇಷನ್‍ನವರು ಆರ್‍ಟಿಓ ಅಧಿಕಾರಿಗಳನ್ನು ಕರೆಸಿ ಎರಡು ಲಾರಿಗಳಿಗೂ ತಲಾ 20 ಸಾವಿರ ರೂ. ದಂಡ ವಿಧಿಸಿದ್ದ ಘಟನೆ ನಡೆದಿತ್ತು. 

ಇದು ಎಪಿಎಂಸಿ ವರ್ತಕರು, ಹಮಾಲರು, ರೈತರು ಮತ್ತು ಎಪಿಎಂಸಿ ನಿರ್ದೇಶಕರ ಆಕ್ರೋಶಕ್ಕೆ ಕಾರಣವಾಯಿತು. ಹೀಗಾಗಿ ಬೆಳಗ್ಗೆ ಎಪಿಎಂಸಿ ಪ್ರಾಂಗಣದಲ್ಲಿ ಒಟ್ಟಾಗಿ ಸೇರಿದ ಇವರೆಲ್ಲರೂ ಲಾರಿ ಮಾಲೀಕರ ಅಸೋಸಿಯೇಷನ್ ಮತ್ತು ಆರ್‍ಟಿಓ ಅಧಿಕಾರಿಗಳ ವಿರುದ್ಧ ಸಿಡಿದೆದ್ದರು. ಅಲ್ಲದೇ, ಆರ್ ಟಿಓ ಅಧಿಕಾರಿಗಳು ಲಾರಿ ಮಾಲೀಕರ ಕೈಗೊಂಬೆಯಾಗಿದ್ದಾರೆ ಎಂದು ಆರೋಪಿಸುತ್ತಾ, ದಂಡ ವಿಧಿಸಿದ ಅಧಿಕಾರಿ ಸ್ಥಳಕ್ಕೆ ಬರುವಂತೆ ಪಟ್ಟು ಹಿಡಿದರು ಹಾಗೂ ಲಾರಿ ಮಾಲೀಕರ ಅಸೋಸಿಯೇಷನ್ ಅಧ್ಯಕ್ಷ ಸಯ್ಯದ್ ಸೈಫುಲ್ಲಾ ವಿರುದ್ಧ ಪ್ರತಿಭಟಿಸಿದ್ದಾರೆ.

ಈ ವೇಳೆ ಮಧ್ಯಸ್ಥಿಕೆಗೆ ಬಂದ ಆರ್‍ಟಿಓ ಅಧಿಕಾರಿಗಳ ಮೇಲೆ ವರ್ತಕರು, ಹಮಾಲರು ತಿರುಗಿ ಬಿದ್ದರು. ಎರಡು ಲಾರಿಗಳು ಹೆಚ್ಚುವರಿ ಲೋಡ್ ಮಾಡಿವೆ ಎಂದು ದಂಡ ಹಾಕಲಾಗಿದೆ. ಆದರೆ, ಸ್ಥಳೀಯ ಲಾರಿಗಳು ಅಷ್ಟೇ ಪ್ರಮಾಣದಲ್ಲಿ ಲೋಡ್ ಮಾಡಿದ್ದು, ಅವುಗಳ ಮೇಲೆ ಆರ್‍ಟಿಓ ಅಧಿಕಾರಿಗಳು ಕ್ರಮವೇಕೆ ಕೈಗೊಂಡಿಲ್ಲ ಎಂಬುದಾಗಿ ಪೊಲೀಸ್ ಮತ್ತು ಆರ್‍ಟಿಓ ಅಧಿಕಾರಿಗಳ ಜೊತೆ ವಾಗ್ವಾದ ನಡೆಸಿದರು.

ಸಭೆಗೆ ಬಂದಿದ್ದ ಲಾರಿ ಮಾಲೀಕರ ಅಸೋಸಿಯೇಷನ್ ಅಧ್ಯಕ್ಷ ಸಯ್ಯದ್ ಸೈಫುಲ್ಲಾ ಅವರನ್ನು ಅಲ್ಲಿದ್ದ ಕೆಲವರು ತಳ್ಳಾಡಿ ನೂಕಾಟ ನಡೆಸಿದ್ದಾರೆ. ಸಭೆಯಿಂದ ಹೊರಗೆ ಹೋಗಲು ಯತ್ನಿಸಿದಾಗ ಸೈಯದ್ ಸೈಫುಲ್ಲಾ ಅವರ ಮೇಲೆ ಹಲ್ಲೆ ನಡೆದಿದ್ದು, ಹಮಾಲರಿಂದ ಎಪಿಎಂಸಿಯ ಕೊಠಡಿಯಲ್ಲಿ ಸೈಫುಲ್ಲಾ ಅವರಿಗೆ ದಿಗ್ಬಂಧನ ಹಾಕಲಾಗಿತ್ತು. ಈ ಘಟನೆಗೆ ಸಯ್ಯದ್ ಸೈಫುಲ್ಲಾ ಅವರು ಹಮಾಲರ ಬಗ್ಗೆ ಆಡಿದ ಮಾತುಗಳು ಕೆರಳಿಸಿದ್ದವು ಎನ್ನಲಾಗಿದೆ. ಇದರಿಂದ ಎಪಿಎಂಸಿ ಪ್ರಾಂಗಣದಲ್ಲಿ ಕೆಲವು ಕಾಲ ಪ್ರಕ್ಷುಬ್ಧ ವಾತಾವರಣ ನಿರ್ಮಾಣಗೊಂಡಿತ್ತು. ಕೊನೆಗೆ ಪೊಲೀಸರ ಮಧ್ಯ ಪ್ರವೇಶ ಮತ್ತು ಎಪಿಎಂಸಿ ನಿರ್ದೇಶಕರ ಮನವಿಗೆ ಹಮಾಲರು ಸುಮ್ಮನಾದರು. ಅಂತಿಮವಾಗಿ ಸೈಫುಲ್ಲಾ ಅವರನ್ನು ಪೊಲೀಸರ ರಕ್ಷಣೆಯಲ್ಲಿ ಕೊರೆದೊಯ್ಯಲಾಯಿತು.

ಪ್ರತಿಭಟನೆ ವೇಳೆ ಎಪಿಎಂಸಿ  ಅಧ್ಯಕ್ಷ ಚಂದ್ರಶೇಖರ್, ರುದ್ರೇಶ್, ಎಸ್.ಕೆ. ಪಲ್ಲಾಘಟ್ಟೆ, ಶ್ರೀನಿವಾಸ್, ನಾಗಭೂಷನ್, ದೊಗ್ಗಳ್ಳಿ ಬಸವರಾಜ್ ಸೇರಿದಂತೆ ಇತರರು ಇದ್ದರು.

error: Content is protected !!