500 ಕೋಟಿ ರೂ.ಗಳ ವೆಚ್ಚದ 8 ಮಹಡಿಯ ಬಾಪೂಜಿ ಆಸ್ಪತ್ರೆ ನೂತನ ಕಟ್ಟಡಕ್ಕೆ ಚಾಲನೆ

ದಾವಣಗೆರೆ,ನ.2- ಪ್ರತಿಷ್ಠಿತ ಬಾಪೂಜಿ ವಿದ್ಯಾಸಂಸ್ಥೆ ಆಶ್ರಯದಲ್ಲಿ ನಡೆಯುತ್ತಿರುವ ನಗರದ ಬಾಪೂಜಿ ಆಸ್ಪತ್ರೆಯನ್ನು ಸುಮಾರು 500 ಕೋಟಿ ರೂ.ಗಳ ವೆಚ್ಚದಲ್ಲಿ ವಿಶಾಲವಾಗಿ ವಿಸ್ತರಿಸಿ, ಸುಸಜ್ಜಿತ ನೂತನ ಕಟ್ಟಡವನ್ನು ನಿರ್ಮಿಸಲುದ್ದೇಶಿಸಲಾಗಿದ್ದು, ಈ ಕಟ್ಟಡದ ಕಾಮಗಾರಿ ಆರಂಭವಾಗಿದೆ.

ಬಾಪೂಜಿ ವಿದ್ಯಾಸಂಸ್ಥೆಯ ಗೌರವ ಕಾರ್ಯದರ್ಶಿಯೂ ಆಗಿರುವ ಹಿರಿಯ ಶಾಸಕ ಡಾ. ಶಾಮನೂರು ಶಿವಶಂಕರಪ್ಪ ಅವರು ನೂತನ ಕಟ್ಟಡಕ್ಕೆ ಭೂಮಿ ಪೂಜೆ ನೆರವೇರಿಸುವ ಕಾರ್ಯಕ್ಕೆ ಮಾಜಿ ಸಚಿವರೂ ಆಗಿರುವ ಬಾಪೂಜಿ ವಿದ್ಯಾಸಂಸ್ಥೆಯ ಜಂಟಿ ಕಾರ್ಯದರ್ಶಿ ಶಾಮನೂರು ಮಲ್ಲಿಕಾರ್ಜುನ್ ಸಾಥ್ ನೀಡಿದರು.

ಜಜಮು ವೈದ್ಯಕೀಯ ಮಹಾವಿದ್ಯಾ ಲಯದ ಪ್ರಾಂಶುಪಾಲ ಡಾ. ಎಸ್. ಬಿ. ಮುರುಗೇಶ್, ಹಿರಿಯ ಲೆಕ್ಕಪರಿಶೋಧಕರೂ ಆದ ಕೈಗಾರಿಕೋದ್ಯಮಿ ಅಥಣಿ ವೀರಣ್ಣ, ಬಾಪೂಜಿ ವಿದ್ಯಾಸಂಸ್ಥೆ ಶೈಕ್ಷಣಿಕ ಸಲಹೆಗಾರ ಡಾ. ಎಂ.ಜಿ. ಈಶ್ವರಪ್ಪ, ಬಾಪೂಜಿ ಆಸ್ಪತ್ರೆ ವೈದ್ಯಕೀಯ ನಿರ್ದೇಶಕ ಡಾ. ಕುಮಾರ್, ಬಾಪೂಜಿ ಆಸ್ಪತ್ರೆ ಆಡಳಿತಾಧಿಕಾರಿ ಸತ್ಯನಾರಾಯಣ, ದಾವಣಗೆರೆ – ಹರಿಹರ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್ ಹಿರಿಯ ನಿರ್ದೇಶಕ ಎಸ್.ಕೆ. ವೀರಣ್ಣ ಮುಂತಾದ ಗಣ್ಯರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ಸುಸಜ್ಜಿತ ಕಟ್ಟಡ : ಬಾಪೂಜಿ ಆಸ್ಪತ್ರೆಯನ್ನು ಈಗಿರುವ ಸ್ಥಳದ ಜೊತೆಗೆ,  ಅದರ ಹಿಂಭಾಗದ ಜೆಜೆಎಂ ಮೆಡಿಕಲ್ ಕಾಲೇಜಿನ ಜಾಗವನ್ನು ಸೇರಿಸಿಕೊಂಡು ಧ.ರಾ.ಮ. ಕಾಲೇಜಿನ ಕಟ್ಟಡದವರೆಗೂ ವಿಸ್ತರಿಸಿಕೊಂಡು ಸುಸಜ್ಜಿತ ವಾಗಿ ನಿರ್ಮಿಸಲುದ್ದೇಶಿಸಲಾಗಿದೆ ಎಂದು ಜಜಮು ವೈದ್ಯಕೀಯ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ಎಸ್.ಬಿ. ಮುರುಗೇಶ್ `ಜನತಾವಾಣಿ’ಗೆ ತಿಳಿಸಿದರು.

ಬಾಪೂಜಿ ಆಸ್ಪತ್ರೆಯು  750 ಹಾಸಿಗೆಗಳನ್ನು ಹೊಂದಿದ್ದು, ನೂತನ ಆಸ್ಪತ್ರೆಯಲ್ಲಿ ಅದನ್ನು 2000 ಹಾಸಿಗೆಗಳಿಗೆ ಹೆಚ್ಚಿಸಲಾಗುವುದು. ಅಂದಾಜು 500 ಕೋಟಿ ರೂ.ಗಳ ವೆಚ್ಚದಲ್ಲಿ 8 ಮಹಡಿಗಳುಳ್ಳ ಆಸ್ಪತ್ರೆಯ ಕಟ್ಟಡವನ್ನು  ಸೇಪೋಸ್ಟ್ ಟರ್ಕಿ ಟೆಕ್ನಾಲಜಿಯನ್ನು ಅಳವಡಿಸಿಕೊಂಡು ನಿರ್ಮಿಸಲಾಗುವುದು. ಈ ತಂತ್ರಜ್ಞಾನವನ್ನು ಬಳಸಿಕೊಂಡು ಕಟ್ಟಡ ನಿರ್ಮಿಸುತ್ತಿರುವುದು ಭಾರತದಲ್ಲೇ ಇದೇ ಮೊದಲಾಗಿದ್ದು, ಒಂದು ವರ್ಷದಲ್ಲಿ ಕಟ್ಟಡ ನಿರ್ಮಾಣವನ್ನು ಪೂರ್ಣಗೊಳಿಸಲುದ್ದೇಶಿಸಲಾಗಿದೆ ಎಂದು ಅವರು ವಿವರಿಸಿದರು.

error: Content is protected !!