ಭದ್ರಾ ನೀರು: ನಿಗದಿಪಡಿಸಿರುವ ಬೆಳೆ ಬೆಳೆಯಲು ಮನವಿ

ದಾವಣಗೆರೆ, ಜು.29- ಭದ್ರಾ ಯೋಜನೆಯ ಅಚ್ಚುಕಟ್ಟು ವ್ಯಾಪ್ತಿಯ ಈ ಸಾಲಿನ ಮುಂಗಾರು ಹಂಗಾಮಿನ ಬೆಳೆಗಳಿಗೆ ಭದ್ರಾ ಬಲದಂಡೆ ನಾಲೆ, ಎಡದಂಡೆ ನಾಲೆ, ಆನವೇರಿ ಶಾಖಾ ನಾಲೆ, ದಾವಣಗೆರೆ ಶಾಖಾ ನಾಲೆ, ಮಲೇಬೆನ್ನೂರು ಶಾಖಾ ನಾಲೆ ಮತ್ತು ಹರಿಹರ ಶಾಖಾ ನಾಲೆಗಳಿಗೆ ಜಲಾಶಯದಿಂದ ಇದೇ ದಿನಾಂಕ 22ರ ಮಧ್ಯ ರಾತ್ರಿಯಿಂದ ನೀರು ಹರಿಸಲಾಗುತ್ತಿದೆ.

ಈ ವರ್ಷದ ಮುಂಗಾರು ಶುರುವಾದಾಗಿನಿಂದ ಮುಂಗಾರು ಕ್ಷೀಣಗೊಂಡಿದ್ದು, ಮಳೆಯ ಕೊರತೆ ಉಂಟಾಗಿದ್ದು, ಭದ್ರಾ ಜಲಾಶಯದಲ್ಲಿ 36.189 ಟಿಎಂಸಿ ನೀರು ಲಭ್ಯವಿದ್ದು, ಅದರಲ್ಲಿ 7.0484 ಟಿಎಂಸಿ ನೀರನ್ನು ಕುಡಿಯುವ ನೀರಿಗಾಗಿ ಕಾಯ್ದಿರಿಸಬೇಕಾಗಿರುತ್ತದೆ ಹಾಗೂ ಜಲಚರಗಳಿಗೆ ಬೇಕಾಗುವ ನೀರು, ಆವಿಯಾಗುವ ನೀರು ಹಾಗೂ ಕುಡಿಯುವ ನೀರಿಗಾಗಿ 18.832 ಟಿಎಂಸಿ ನೀರು ಸಂಗ್ರಹಿಸಿಟ್ಟುಕೊಳ್ಳಬೇಕಿದೆ.

ಬೆಳೆಗಳಿಗೆ ಲಭ್ಯವಿರುವ 10.308 ಟಿಎಂಸಿ ನೀರಿನಲ್ಲಿ ಹಂಗಾಮಿಗೆ ಸುಮಾರು 34 ದಿನ ಮಾತ್ರ ನೀರು ಹರಿಸಬಹುದಾಗಿರುತ್ತದೆ. ಪ್ರಸ್ತುತ ಜಲಾಶಯದಲ್ಲಿ ಲಭ್ಯವಿರುವ ನೀರಿನ ಪ್ರಮಾಣವನ್ನು ಅವಲೋಕಿಸಿದರೆ ಅರೆಬೆಳೆಗಳಿಗೆ ಮಾತ್ರ ನೀರನ್ನು ಹರಿಸಬಹುದಾಗಿದೆ. 

ಸದ್ಯದ ಪರಿಸ್ಥಿತಿಯಲ್ಲಿ ಕಾಲುವೆಗಳಲ್ಲಿ ನೀರು ಹರಿಸಿದಲ್ಲಿ ಅಚ್ಚುಕಟ್ಟು ಪ್ರದೇಶಕ್ಕೆ 120 ದಿನಗಳ ಕಾಲ ನೀರನ್ನು ಹರಿಸಲು ಸಾಧ್ಯವಾಗುವುದಿಲ್ಲ.

ಮುಂದಿನ ದಿನಗಳಲ್ಲಿ ಜಲಾನಯನ ಪ್ರದೇಶದಲ್ಲಿ ಉತ್ತಮ ನಿರೀಕ್ಷಿತ ಮಳೆಯಾಗದಿದ್ದಲ್ಲಿ ಹಾಗೂ ನಿಗದಿತ ಪ್ರಮಾಣದಲ್ಲಿ ಜಲಾಶಯದ ಒಳ ಹರಿವು ಹರಿದು ಬಾರದಿದ್ದಲ್ಲಿ ಈ ಹಿಂದೆ ಅನುಸರಿಸಿದ ಆನ್‌ ಅಂಡ್ ಆಫ್ ಪದ್ಧತಿಯಂತೆ ನೀರನ್ನು ಕಾಲುವೆ ಮುಖಾಂತರ ಹರಿಸಲಾಗುವುದು. ಹಾಗಾಗಿ ವಿತರಣಾ ನಾಲೆಗಳಲ್ಲಿ ಅನುಸರಿಸಬೇಕಾದ ಆಂತರಿಕ ಸರದಿಯನ್ನು ನೀರಾವರಿಯಾಗಲಿರುವ ಸರ್ವೇ ನಂಬರ್‌ಗಳು ಹಾಗೂ ಬೆಳೆಯಬೇಕಾದ ಬೆಳೆಗಳ ವಿವರಗಳನ್ನು ಸಂಬಂಧಪಟ್ಟ ಕಾರ್ಯಪಾಲಕ ಇಂಜಿನಿಯರ್ ಅವರು ಪ್ರಕಟಿಸಿರುತ್ತಾರೆ.

ನಮೂದಿಸಿದ ಬೆಳೆ ಮಾದರಿ ಉಲ್ಲಂಘಿಸುವವರು ನೀರಾವರಿ ಕಾಲುವೆ ಹಾಗೂ ಕಟ್ಟಡಗಳನ್ನು ಜಖಂಗೊಳಿಸುವವರು, ನಿಯಮಿತ ಪ್ರಮಾಣಕ್ಕಿಂತ ಹೆಚ್ಚು ನೀರನ್ನು ಬಳಸುವವರು ಮತ್ತು ಅನಧಿಕೃತ ನೀರಾವರಿ ಬೆಳೆಗಾರರು ಕರ್ನಾಟಕ ನೀರಾವರಿ ಕಾಯ್ದೆ 1957ರ ವಿವಿಧ ನಿಯಮಗಳ ಪ್ರಕಾರ ಕಾನೂನು ಕ್ರಮಕ್ಕೆ ಒಳಗಾಗುತ್ತಾರೆ. ರೈತ ಬಾಂಧವರು ಸಹಕರಿಸುವಂತೆ ಭದ್ರಾ ಯೋಜನಾ ನೀರಾವರಿ ಸಲಹಾ ಸಮಿತಿ ಸದಸ್ಯ ಕಾರ್ಯದರ್ಶಿ ಹಾಗೂ ಕನೀನಿನಿ ಬಿ.ಆರ್. ಪ್ರಾಜೆಕ್ಟ್‌ನ ಅಧೀಕ್ಷಕ ಅಭಿಯಂತರರು ತಿಳಿಸಿದ್ದಾರೆ.

error: Content is protected !!