ದಾವಣಗೆರೆ, ಜು. 29- ಬಾಪೂಜಿ ವಿದ್ಯಾ ಸಂಸ್ಥೆಯ ಎಸ್.ಎಸ್. ಹೈಟೆಕ್ ಆಸ್ಪತ್ರೆ ಹಾಗೂ ಬಾಪೂಜಿ ಆಸ್ಪತ್ರೆಯಲ್ಲಿ ಮುಂಬರುವ ದಿನಗಳಲ್ಲಿ ಕೊರೊನಾ ಸೋಂಕಿತರೂ ಸೇರಿದಂತೆ ಪ್ರತಿ ರೋಗಿಗೂ ಚಿಕಿತ್ಸೆ ನೀಡಲು ಎರಡೂ ಆಸ್ಪತ್ರೆಗಳಿಂದ 500 ಬೆಡ್ಗಳನ್ನು ಮೀಸಲಿರಿ ಸಲಾಗುತ್ತಿದೆ ಎಂದು ಎಸ್ಎಸ್ ಹೈಟೆಕ್ ಆಸ್ಪತ್ರೆಯ ಗೌರವ ಕಾರ್ಯದರ್ಶಿ ಶಾಮನೂರು ಶಿವಶಂಕರಪ್ಪ, ಅಧ್ಯಕ್ಷ ಎಸ್.ಎಸ್. ಮಲ್ಲಿಕಾರ್ಜುನ ತಿಳಿಸಿದರು.
ತಮ್ಮ ಸ್ವಗೃಹದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಆಸ್ಪತ್ರೆಯಲ್ಲಿ ಪ್ರಸ್ತುತ 35 ವೆಂಟಿಲೇಟರ್ಗಳಿವೆ. ಸುಮಾರು 100 ಐಸಿಯು ಬೆಡ್ಗಳಿವೆ. ಇವುಗಳ ಜೊತೆ ಮತ್ತೆ 30 ವೆಂಟಿಲೇಟರ್ ಹಾಗೂ ಹೈಫ್ಲೋ ಆಕ್ಸಿಯನ್ ಯಂತ್ರಗಳನ್ನು ಖರೀದಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಸರ್ಕಾರ ನಿಗಧಿಪಡಿಸಿದ ವೆಚ್ಚದಲ್ಲಿಯೇ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಮಲ್ಲಿಕಾರ್ಜುನ್ ಹೇಳಿದರು.
ಯಶಸ್ವಿ ಚಿಕಿತ್ಸೆ: ತೀವ್ರ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ 35 ವರ್ಷದ ಮಹಿಳೆ, 8 ತಿಂಗಳ ಗರ್ಭಿಣಿಗೆ ಎಸ್.ಎಸ್. ಆಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆ ನೀಡಿದ್ದಾಗಿ ಎಸ್ಸೆಸ್ಸೆಂ ವಿವರಿಸಿದರು.
ಜುಲೈ 8ನ ತಾರೀಖು ಜಿಲ್ಲಾ ಆಸ್ಪತ್ರೆಯಿಂದ ಮಹಿಳೆಯನ್ನು ಎಸ್.ಎಸ್. ಆಸ್ಪತ್ರೆಗೆ ಶಿಫಾರಸ್ಸು ಮಾಡಲಾಗಿತ್ತು. ಆವರೆಗೆ ಎರಡೂ ಶ್ವಾಸಕೋಶದಲ್ಲಿ ತೀವ್ರ ತರಹದ ನ್ಯೂಮೋನಿಯಾ ಇರುವುದು ಕಂಡು ಬಂದಿತ್ತು. ಜೊತೆಗೆ ಕೋವಿಡ್-19 ಸಹ ಖಚಿತಪಟ್ಟಿತ್ತು.
ಆಸ್ಪತ್ರೆಯಲ್ಲಿ ಬೆಡ್ಗಳ ಕೊರತೆ ಇಲ್ಲ : ಬಾಪೂಜಿ ಹಾಗೂ ಎಸ್.ಎಸ್. ಹೈಟೆಕ್ ಆಸ್ಪತ್ರೆಯಲ್ಲಿ ಬೆಡ್ ಗಳ ಕೊರತೆ ಇಲ್ಲ ಎಂದು ಶಾಸಕ ಎಸ್ಸೆಸ್ ಹಾಗೂ ಮಾಜಿ ಸಚಿವ ಎಸ್ಸೆಸ್ಸೆಂ ಸ್ಪಷ್ಟಪಡಿಸಿದರು. ಕೇವಲ ಕೋವಿಡ್ ಅಷ್ಟೇ ಅಲ್ಲ. ನಾನ್ ಕೋವಿಡ್ ರೋಗಿಗಳು ಎಷ್ಟು ಜನರಿದ್ದರೂ ಚಿಕಿತ್ಸೆ ನೀಡಲು ಆಸ್ಪತ್ರೆಗಳು ಸಶಕ್ತವಾಗಿರುವುದಾಗಿ ಮಲ್ಲಿಕಾರ್ಜುನ್ ಹೇಳಿದರು.
ಸೋಂಕಿತರನ್ನು ಜೆ.ಹೆಚ್. ಪಟೇಲ್ ಬಡಾವಣೆಯಲ್ಲಿರುವ ಕೋವಿಡ್ ಕೇರ್ ಸೆಂಟರ್ನಲ್ಲಿ ಇಡಲಾಗುತ್ತಿದೆ. ಅಲ್ಲಿ ಸೂಕ್ತ ಸೌಕರ್ಯವಿಲ್ಲ. ಅವರಿಗೆ ನಿಮ್ಮ ಆಸ್ಪತ್ರೆಯಲ್ಲಿಯೇ ಏಕೆ ಚಿಕಿತ್ಸೆ ನೀಡಬಾರದು ಎಂಬ ಪ್ರಶ್ನೆಗೆ, ಈ ವಿಷಯವನ್ನು ನೀವೇ (ಪತ್ರಕರ್ತರು) ಜಿಲ್ಲಾಧಿಕಾರಿಗಳಿಗೆ ಹೇಳಿ ಎಂದು ಮಲ್ಲಿಕಾರ್ಜುನ್ ಉತ್ತರಿಸಿದರು. ನಂತರ ಎಷ್ಟೇ ಜನರಿದ್ದರೂ ಚಿಕಿತ್ಸೆ ಕೊಡಲು ಸಿದ್ಧರಿರುವುದಾಗಿಯೂ ಸ್ಪಷ್ಟಪಡಿಸಿದರು.
ಇತ್ತೀಚೆಗೆ ಬಿ.ಸಿ. ಪಾಟೀಲ್ ಅವರ ಅತ್ತೆ ಅನಾರೋಗ್ಯಕ್ಕೆ ತುತ್ತಾದಾಗ ನಮಗೆ ಕರೆ ಮಾಡಿದ್ದರು. ನಮ್ಮ ಆಸ್ಪತ್ರೆಯಲ್ಲಿ ಅವರಿಗೆ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ. ನಮ್ಮ ವೈದ್ಯರಂತೂ ಕೋವಿಡ್ ಸಂದರ್ಭದಲ್ಲಿ ಉತ್ತಮ ಕೆಲಸ ಮಾಡುತ್ತಿದ್ದಾರೆ ಎಂದು ಶಾಮನೂರು ಶಿವಶಂಕರಪ್ಪ ಹೇಳಿದರು.
ಸಫಲ-ವಿಫಲ ಟೀಕೆಗಳಿಗೆ ಅರ್ಥವಿಲ್ಲ : ಎಸ್ಸೆಸ್ : ಕೊರೊನಾ ನಿಯಂತ್ರಿಸುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಈ ಸಂದರ್ಭದಲ್ಲಿ ಮಾಡುವ ಟೀಕೆಗಳಿಗೆ ಅರ್ಥವಿಲ್ಲ ಎಂದು ಶಾಮನೂರು ಶಿವಶಂಕರಪ್ಪ ಹೇಳಿದರು.ಸದ್ಯ ಕೊರೊನಾ ಮಹಾ ಮಾರಿಯನ್ನು ದೇಶದಿಂದ ಓಡಿಸಬೇಕಿರು ವುದು ನಮ್ಮ ಮುಂದಿರುವ ಸವಾಲು. ಸರ್ಕಾರ ವಿಫಲ ಅಥವಾ ಸಫಲ ಎಂದು ಹೇಳಲಾಗದು ಎಂದರು.
ಕೆಮ್ಮು, ಉಸಿರಾಟದ ಸಮಸ್ಯೆ ಇತ್ತು. ಮೊದಲು ಚಿಗಟೇರಿ ಆಸ್ಪತ್ರೆಗೆ ಹೋಗಿದ್ದೆ. ನಂತರ ಎಸ್.ಎಸ್. ಹೈಟೆಕ್ ಆಸ್ಪತ್ರೆಗೆ ಕಳುಹಿಸಿದರು. ಕೊರೊನಾ ಪಾಸಿಟಿವ್ ಇತ್ತು. ಇಲ್ಲಿ ದಾಖಲಿಸಿ ಕೊಂಡು ವೈದ್ಯರು ಉತ್ತಮ ಚಿಕಿತ್ಸೆ ನೀಡಿದರು.
– ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಮಹಿಳೆ
ಶೀಘ್ರವೇ ಅವರಿಗೆ ಸರ್ಕಾರದ ಮಾರ್ಗಸೂಚಿ ಪ್ರಕಾರ ಚಿಕಿತ್ಸೆ ಆರಂಭಿಸಲಾಯಿತು. ಹೈ ಫ್ಲೂ ಆಕ್ಸಿಜನೋ ಹೊರತಾಗಿಯೂ ಅವರ ಉಸಿರಾಟದ ತೊಂದರೆ ಹೆಚ್ಚಾಗುತ್ತಿದ್ದ ಕಾರಣ ವೆಂಟಿಲೇಟರ್ ಅಳವಡಿಸಲಾಗಿತ್ತು. ಮಗುವಿಗೆ ಆಮ್ಲಜನಕದ ಕೊರತೆಯಿಂದ ತೊಂದರೆಯಾಗುವ ಸಾಧ್ಯತೆ ಇರುವುದರಿಂದ ತುರ್ತು ಸಿಜೇರಿಯನ್ ಶಸ್ತ್ರ ಚಿಕಿತ್ಸೆ ಮಾಡಿ ಮಗುವನ್ನು ಹೊರ ತೆಗೆಯಲಾಗಿದೆ.
ಉಸಿರಾಟದ ತೊಂದರೆ ಇದ್ದಿದ್ದರಿಂದ ಮಗುವನ್ನೂ ಸಹ 3 ದಿನ ವೆಂಟಿಲೇಟರ್ನಲ್ಲಿಟ್ಟಿದ್ದು, ಮಗುವಿಗೆ ಕೋವಿಡ್-19 ನೆಗೆಟಿವ್ ವರದಿ ಬಂದಿದೆ. ತಾಯಿ ಹಾಗೂ ಮಗು ಚಿಕಿತ್ಸೆಗೆ ಉತ್ತಮವಾಗಿ ಸ್ಪಂದಿಸಿದ್ದು, ಇಂದು ಬಿಡುಗಡೆಯಾಗಿದ್ದಾರೆ. ಇವರಿಗೆ ಚಿಕಿತ್ಸೆ ನೀಡಿದ ವೈದ್ಯರಿಗೆ ಬಾಪೂಜಿ ವಿದ್ಯಾಸಂಸ್ಥೆಯಿಂದ ಅಭಿನಂದಿಸುವುದಾಗಿ ಎಸ್ಸೆಸ್ಸೆಂ ಹೇಳಿದರು.
ಮೆಡಿಸಿನ್ ವಿಭಾಗದ ಡಾ. ಮಧುನವೀನ್ ರೆಡ್ಡಿ, ಡಾ. ಹರ್ಷ ಕುಲಕರ್ಣಿ, ಅನಸ್ತೇಶಿಯ ವಿಭಾಗದ ಡಾ. ಅರುಣ್ ಕುಮಾರ್ ಅಜ್ಜಪ್ಪ, ಡಾ. ಕಿರಣ್, ಒಬಿಜಿ ವಿಭಾಗದ ಡಾ. ಪ್ರೇಮಾ ಪ್ರಭುದೇವ್, ಪಲ್ಮನಲಾಜಿ ವಿಭಾಗದ ಡಾ. ಅಜಿತ್ ಈಟಿ, ಡಾ. ಪ್ರಿಯದರ್ಶಿನಿ ಎಸ್.ಆರ್., ಎಮರ್ಜನ್ಸಿ ವಿಭಾಗದ ಡಾ. ನರೇಂದ್ರ ಎಸ್.ಎಸ್., ಡಾ. ಗಣೇಶ್, ಮಕ್ಕಳ ವಿಭಾಗದ ಡಾ. ಕೆ. ಕಾಳಪ್ಪನವರ್, ಡಾ. ಲತಾ ಜಿ.ಎಸ್., ಡಾ. ವೀರೇಶ್ ಬಾಬು, ಸರ್ಜರಿ ವಿಭಾಗದ ಡಾ. ಎಲ್ ಎಸ್. ಪಾಟೀಲ್, ರೇಡಿಯಾಲಜಿ ವಿಭಾಗದ ಡಾ. ಅಖಲ್ ಕುಲಕರ್ಣಿ ಸಮನ್ವಯದಿಂದ ಕೆಲಸ ಮಾಡಿರುವುದರಿಂದ ಈ ಯಶಸ್ಸು ಪಡೆಯಲು ಸಾಧ್ಯವಾಗಿದೆ ಎಂದು ಪ್ರಾಂಶುಪಾಲ ಡಾ. ಬಿ.ಎಸ್. ಪ್ರಸಾದ್ ತಿಳಿಸಿದರು.