ಅತಿಯಾದ ಅನ್ ಲೋಡಿಂಗ್ ವಸೂಲಿ ತಡೆಗೆ ಆಗ್ರಹ

ಜಿಲ್ಲಾಡಳಿತಕ್ಕೆ ಲಾರಿ ಮಾಲೀಕರ ಮನವಿ

ದಾವಣಗೆರೆ, ನ.2- ಅತಿಯಾದ ಅನ್ ಲೋಡಿಂಗ್ ಹಣ ವಸೂಲಿ ತಡೆಯುವಂತೆ ಆಗ್ರಹಿಸಿ, ಮಧ್ಯ ಕರ್ನಾಟಕ ಲಾರಿ ಮಾಲೀಕರ ಮತ್ತು ಟ್ರ್ಯಾನ್ಸ್ ಪೋರ್ಟ್ ಏಜೆಂಟರ ಸಂಘದ ನೇತೃತ್ವದಲ್ಲಿ ಲಾರಿ ಮಾಲೀಕರು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು.

ಜಿಲ್ಲೆಯಲ್ಲಿ ಸುಮಾರು 400 ಲಾರಿಗ ಳಿದ್ದು, ದಿನ ನಿತ್ಯ ಎಲ್ಲಾ ರೀತಿಯ ಸರಕುಗಳನ್ನು ದಾವಣಗೆರೆಗೆ ಮತ್ತು ದಾವಣಗೆರೆಯಿಂದ ವಿವಿಧ ಪ್ರದೇಶಗಳಿಗೆ ಸಾಗಾಣಿಕೆ ಮಾಡುತ್ತಿದ್ದು, ಈ ಹಿಂದೆ ಲಾರಿ ಮಾಲೀಕರು ಸರಕುಗಳ ಅನ್ ಲೋಡಿಂಗ್ ಗೆ ಯಾವುದೇ ಹಣ ನೀಡುತ್ತಿರಲಿಲ್ಲ. ಆದರೆ ಇತ್ತೀಚೆಗೆ ನಗರದಲ್ಲಿ ಎಲ್ಲಾ ತರಹದ ಸರಕಿನ ಮಾಲೀಕರು ಅತಿಯಾದ ಅನ್ ಲೋಡಿಂಗ್ ಹಣ ವಸೂಲಿ ಮಾಡುತ್ತಿದ್ದು, ಲಾರಿ ಮಾಲೀಕರನ್ನು ನಷ್ಟಕ್ಕೆ ಸಿಲುಕಿಸಿದೆ ಎಂದು ಸಂಘದ ಅಧ್ಯಕ್ಷ ಸೈಯದ್ ಸೈಫುಲ್ಲಾ ಆರೋಪಿಸಿದರು.

ಹಳೇ ದಾವಣಗೆರೆ ಚೌಕಿಪೇಟೆಯ ದವಸ – ಧಾನ್ಯದ ಅಂಗಡಿಗಳ ಮುಂದೆ ಹೋಗಲು ಸ್ಥಳವಿಲ್ಲದಿದ್ದಲ್ಲಿ ಲಾರಿಯನ್ನು ಬೇರೆಡೆ ನಿಲ್ಲಿಸಿ ಅದರಲ್ಲಿನ ಸರಕನ್ನು ಲಘು ವಾಹನಗಳಲ್ಲಿ ನಮ್ಮ ಖರ್ಚಿನಿಂದ ತಲುಪಿಸುವ ದೌರ್ಜನ್ಯಕ್ಕೂ ತುತ್ತಾಗಿದ್ದೇವೆ ಎಂದು ಅಸಮಾಧಾನ ವ್ಯಕ್ತಪಡಿಸಿದರ ಲ್ಲದೇ, ಇನ್ನು ಮುಂದೆ ಲಾರಿ ಮಾಲೀಕರು ಯಾವುದೇ ರೀತಿಯಲ್ಲಿ ಅನ್‌ಲೋಡಿಂಗ್ ಹಣ ನೀಡುವುದಿಲ್ಲ ಎಂದು ತಿಳಿಸಿದ್ದಾರೆ.

ಈ ಹಿಂದೆ 2017 ರಲ್ಲಿ ಶಾಸಕ ಡಾ. ಶಾಮನೂರು ಶಿವಶಂಕರಪ್ಪ, ಮಾಜಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರು ಯಾರಿಗೂ ತೊಂದರೆಯಾಗದಂತೆ ಪ್ರತಿ ಟನ್‌ಗೆ 20 ರೂ. ನಂತೆ ನಿಗದಿ ಮಾಡಿದರೂ ಸಹ ಅದನ್ನು ಗಾಳಿಗೆ ತೂರಿ ವರ್ತಕರು ಮಾಡುತ್ತಿರುವ ಅತಿಯಾದ ಅನ್‌ಲೋಡಿಂಗ್ ವಸೂಲಿಯನ್ನು ತಪ್ಪಿಸುವಂತೆ ಅಪರ ಜಿಲ್ಲಾಧಿಕಾರಿ ಮುಖಾಂತರ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅವರಿಗೆ ಲಾರಿ ಮಾಲೀಕರು ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಸಂಘದ ಕಾರ್ಯದರ್ಶಿ ಬೆಳ್ಳೂಡಿ ಶಿವಕುಮಾರ್, ಜಿಲ್ಲಾ ಲಾರಿ ಮಾಲೀಕರು ಮತ್ತು ಏಜೆಂಟರ ಸಂಘದ ಕಾರ್ಯದರ್ಶಿ ಎಸ್.ಕೆ. ಮಲ್ಲಿಕಾರ್ಜುನ, ದಾವಣಗೆರೆ ಲೋಕಲ್ ಮತ್ತು ಗೂಡ್ಸ್ ಶೆಡ್ ಲಾರಿ ಮಾಲೀಕರ ಸಂಘದ ಅಧ್ಯಕ್ಷ ಎಮ್. ದಾದಾಪೀರ್, ಕಾರ್ಯದರ್ಶಿ ಇಮಾಮ್ ಹುಸೇನ್‌, ಆಲೂರು ಭೀಮಣ್ಣ ಇದ್ದರು.

ನ.7ಕ್ಕೆ ಅನ್ ಲೋಡಿಂಗ್ ಬಂದ್: ಅನ್ ಲೋಡಿಂಗ್ ವಿಚಾರವಾಗಿ ವರ್ತಕರು ಸ್ಪಂದಿಸದ ಕಾರಣ ‘ಲಾರಿ ನಮ್ಮದು ಹಮಾಲಿ ನಿಮ್ಮದು’ ಎಂಬ ಘೋಷವಾಕ್ಯದಡಿ ನ.7ರಿಂದ ನಗರದಲ್ಲಿ ಅನಿರ್ದಿಷ್ಟಾವಧಿ ಅನ್‌ಲೋಡಿಂಗ್ ಬಂದ್ ಮಾಡಲಾಗುವುದು ಎಂದು ಸೈಯದ್ ಸೈಫುಲ್ಲಾ ತಿಳಿಸಿದ್ದಾರೆ.

error: Content is protected !!