ಕೊರೊನಾ: ಕೇಸು ಇಳಿಕೆ, ಸಾವು ಕಡಿಮೆ

ಹರಿಹರ, ಚನ್ನಗಿರಿ, ಜಗಳೂರು ಕೋವಿಡ್ ಕೇರ್ ಸೆಂಟರ್‌ಗಳು ಖಾಲಿ: ಡಿಸಿ ಬೀಳಗಿ

ದಾವಣಗೆರೆ, ಅ. 30 – ಜಿಲ್ಲೆಯಲ್ಲಿ ಕೊರೊನಾ ತೀವ್ರತೆ ಕಡಿಮೆಯಾಗಿದ್ದು ಟೆಸ್ಟ್‌ ಮಾಡಿದಾಗ ಸೋಂಕು ಪತ್ತೆಯಾಗುವ ಪ್ರಮಾಣ ಶೇ.5ಕ್ಕೆ ಇಳಿದಿದ್ದು, ಸಾವಿನ ಪ್ರಮಾಣ ಶೇ.0.4ರಷ್ಟು ಕಡಿಮೆಯಾಗಿದೆ ಹಾಗೂ ಸಿ.ಜಿ. ಆಸ್ಪತ್ರೆಯಲ್ಲಿ ಕೇವಲ ಒಬ್ಬರು ಮಾತ್ರ ವೆಂಟಿಲೇಟರ್‌ನಲ್ಲಿದ್ದಾರೆ ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿರುವ ಅವರು, ಆಶಾ ಕಾರ್ಯಕರ್ತೆಯರಿಂದ ಹಿಡಿದು ವೈದ್ಯರು, ಅಧಿಕಾರಿಗಳವರೆಗಿನ ಎಲ್ಲರೂ ತಂಡವಾಗಿ ಶ್ರದ್ಧಾಪೂರ್ವಕಾಗಿ ಕಾರ್ಯ ನಿರ್ವಹಿಸಿದ್ದು ಫಲ ನೀಡಿದೆ ಎಂದು ಹೇಳಿದ್ದಾರೆ.

ಕಳೆದ 15 ದಿನಗಳಲ್ಲಿ ಸಾವಿನ ಪ್ರಮಾಣ ಶೇ.0.4ಕ್ಕೆ ಇಳಿಕೆಯಾಗಿದೆ. ಪ್ರತಿದಿನ 2000 ದಿಂದ 2,500 ಪರೀಕ್ಷೆ ಮಾಡಿದ ಸಂದರ್ಭ ದಲ್ಲಿ ಪಾಸಿಟಿವ್ ಪತ್ತೆಯಾಗುವ ಪ್ರಮಾಣ ಶೇ.5 ಕ್ಕಿಂತೂ ಕಡಿಮೆ ಇದೆ. ಸಿ.ಜಿ. ಆಸ್ಪತ್ರೆ ಯಲ್ಲಿ 87 ಕೊರೊನಾ ಪಾಸಿಟಿವ್ ರೋಗಿ ಗಳಿದ್ದು, ಇವರಲ್ಲಿ ಒಬ್ಬರು ವೆಂಟಿಲೇಟರ್‌ ನಲ್ಲಿದ್ದಾರೆ. ಜಿಲ್ಲೆಯಲ್ಲಿ 11 ಜನ ಮಾತ್ರ ವೆಂಟಿಲೇಟರ್‌ನಲ್ಲಿದ್ದಾರೆ ಎಂದು ಬೀಳಗಿ ತಿಳಿಸಿದ್ದಾರೆ.

ಪ್ರಸಕ್ತ ಜಿಲ್ಲೆಯಲ್ಲಿ ಕೇವಲ 778 ಕೊರೊನಾ ಸೋಂಕಿತರಿದ್ದಾರೆ. ಇವರಲ್ಲಿ 400ಕ್ಕೂ ಹೆಚ್ಚು ಜನ ಮನೆಯಲ್ಲಿ ಪ್ರತ್ಯೇಕವಾಗಿದ್ದಾರೆ. ಆಸ್ಪತ್ರೆಗಳಲ್ಲಿ 193 ಜನ ಇದ್ದಾರೆ. ಕೋವಿಡ್‌ ಕೇರ್ ಸೆಂಟರ್‌ನಲ್ಲಿ 25 ಜನ ಇದ್ದಾರೆ. ಹರಿಹರ, ಚನ್ನಗಿರಿ ಹಾಗೂ ಜಗಳೂರು ಕೋವಿಡ್‌ ಕೇರ್ ಸೆಂಟರ್‌ಗಳಲ್ಲಿ ಒಬ್ಬರೂ ಇಲ್ಲ ಎಂದವರು ಹೇಳಿದರು.

ಜಿಲ್ಲೆಯಲ್ಲಿ ಒಟ್ಟು ಸೋಂಕಿತರಲ್ಲಿ ಶೇ.95ರಷ್ಟು ಜನರು ಗುಣಮುಖರಾಗಿದ್ದಾರೆ. ಶೇ.1ರಷ್ಟು ಜನರು ಸಾವನ್ನಪ್ಪಿದ್ದು, ಶೇ.4ರಷ್ಟು ಜನ ಮಾತ್ರ ಸಕ್ರಿಯ ಸೋಂಕಿತರಿದ್ದಾರೆ ಎಂದು ಬೀಳಗಿ ತಿಳಿಸಿದ್ದಾರೆ. ಆದರೆ, ಕೊರೊನಾ ಯುದ್ಧವನ್ನು ಸಂಪೂರ್ಣ ಗೆದ್ದಿಲ್ಲ. ಈಗ ಚಳಿ ಗಾಲ ಆರಂಭವಾಗುತ್ತಿದೆ. ಹಬ್ಬದ ದಿನಗಳೂ ಇವೆ. ಈ ಸಂದರ್ಭದಲ್ಲಿ ಹತ್ತು ಪಟ್ಟು ಹೆಚ್ಚು ಎಚ್ಚರಿಕೆ ಹೊಂದಿರಬೇಕು. ಉಸಿರಾಟದ ಸಮಸ್ಯೆ, ಅಸ್ತಮಾ, ಅಲರ್ಜಿ ಮುಂತಾದ ಸಮಸ್ಯೆ ಇರುವವರು ಅತಿ ಹೆಚ್ಚಿನ ಎಚ್ಚರಿಕೆ ವಹಿಸಬೇಕು ಎಂದು ತಿಳಿಸಿದರು.

ಮಾಸ್ಕ್ ಮರೆತರೆ ಮಾರಕ. ರಿಪೇರಿ ಮಾಡಲು ಆಗದ ಆರೋಗ್ಯ ಹಾನಿಯಾಗುತ್ತದೆ. ಜನರ ವರ್ತನೆ ಅವರ ಜೀವನ ನಿರ್ಧರಿಸಲಿದೆ ಎಂದು ಬೀಳಗಿ ಎಚ್ಚರಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಅಪರ ಜಿಲ್ಲಾಧಿಕಾರಿ ಪೂಜಾರ ವೀರಮಲ್ಲಪ್ಪ, ಪಾಲಿಕೆ ಆಯುಕ್ತ ವಿಶ್ವನಾಥ ಮುದಜ್ಜಿ, ಡಿಹೆಚ್‍ಓ ಡಾ.ನಾಗರಾಜ್, ಡಿಎಸ್ ಡಾ.ಜೈಪ್ರಕಾಶ್, ಡಿಎಸ್‍ಓ ಡಾ.ರಾಘವನ್, ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕ ರವೀಂದ್ರ ಮಲ್ಲಾಪುರ, ಆರ್‍ಸಿಹೆಚ್‍ಓ ಡಾ.ಮೀನಾಕ್ಷಿ, ಕೋವಿಡ್ ಜಿಲ್ಲಾ ನೋಡಲ್ ಅಧಿಕಾರಿ ಪ್ರಮೋದ್‍ನಾಯಕ್, ಬಾಪೂಜಿ ಆಸ್ಪತ್ರೆಯ ಅರಿವಳಿಕೆ ತಜ್ಞ ಡಾ.ರವಿ ಇತರೆ ಅಧಿಕಾರಿಗಳು ಹಾಜರಿದ್ದರು.

error: Content is protected !!