ದಾವಣಗೆರೆ, ಜು. 27 – ಕೊರೊನಾ ಸೋಂಕಿತನಿಗೆ ಸಮರ್ಪಕ ಚಿಕಿತ್ಸೆ ನೀಡದ ಕಾರಣ ಸಾವು ಸಂಭವಿಸಿದೆ ಎಂದು ನಗರದ ಗಾಂಧಿನಗರದ ಕುಮಾರ್ ಕುಟುಂಬದವರು ಹಾಗೂ ಸಂಬಂಧಿಕರು ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿದ್ದಾರೆ.
ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಹಾಗೂ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ಎದುರು ತಮ್ಮ ಆಕ್ರೋಶ ಹೊರ ಹಾಕಿದ ಕುಟುಂಬದವರು, ಮೃತ ವ್ಯಕ್ತಿ ನಗರ ಪಾಲಿಕೆಯ ಸ್ವಚ್ಛತಾ ಕೆಲಸಗಳನ್ನು ಮಾಡುತ್ತಿದ್ದುದನ್ನು ಪರಿಗಣಿಸುವಂತೆ ಆಗ್ರಹಿಸಿದ್ದಾರೆ.
ಕುಮಾರ್ ಬದುಕಿದ್ದಾಗ ಕೊರೊನಾ ಇಲ್ಲ ಎಂದು ವರದಿ ನೀಡಿ. ಸಮರ್ಪಕ ಚಿಕಿತ್ಸೆ ಕೊಟ್ಟಿರಲಿಲ್ಲ. ಆದರೆ, ಸಾವಿನ ನಂತರ ಟೆಸ್ಟ್ ನಡೆಸಿದಾಗ ಪಾಸಿಟಿವ್ ಬಂದಿದೆ ಎಂದು ಕುಟುಂಬದವರು ದೂರಿದ್ದಾರೆ.
ಇದಕ್ಕೆ ಸ್ಪಷ್ಟನೆ ನೀಡಿದ ಎಸ್ಪಿ ಹನುಮಂತರಾಯ, ಟೆಸ್ಟ್ ಮಾಡುವಾಗ ಮೊದಲು ಪಾಸಿಟಿವ್ ಬಂದು ನಂತರ ನೆಗೆಟಿವ್, ಇಲ್ಲವೇ ನೆಗೆಟಿವ್ ಬಂದ ನಂತರ ಪಾಸಿಟಿವ್ ಬರುವ ಸಾಧ್ಯತೆಗಳು ಇರುತ್ತವೆ. ಚಿಕಿತ್ಸೆಯಲ್ಲಿ ಯಾವುದೇ ನಿರ್ಲಕ್ಷ್ಯ ತೋರಿಲ್ಲ ಎಂದು ಸ್ಪಷ್ಟನೆ ನೀಡಿದರು.
ಮೃತ ಕುಮಾರ್ ಪೌರ ಕಾರ್ಮಿಕನಲ್ಲ, ಮ್ಯಾನ್ಯುಯಲ್ ಸ್ಕ್ಯಾವೆಂಜರ್
– ಸಚಿವ ಭೈರತಿ ಬಸವರಾಜ್ ಸ್ಪಷ್ಟನೆ
ರಾಪಿಡ್ ಆಂಟಿಜೆನ್ ಟೆಸ್ಟ್‌ನಲ್ಲಿ ನೆಗೆಟಿವ್ ಎಂದು ಬಂದಿದೆ. ಮತ್ತೊಮ್ಮೆ ಆರ್‌ಟಿ ಪಿಸಿಆರ್‌ನಲ್ಲಿ ಪರೀಕ್ಷೆ ಮಾಡಲಾಗುತ್ತದೆ. ಈಗ ಅದರಲ್ಲಿ ಪಾಸಿಟಿವ್ ಬಂದಿದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ತಿಳಿಸಿ ಸಮಾಧಾನ ಪಡಿಸಲು ಪ್ರಯತ್ನಿಸಿದರು. ಆದರೆ, ಇದರಿಂದ ತೃಪ್ತರಾಗದ ಕುಟುಂಬದವರು ಪ್ರತಿಭಟನೆ ಮುಂದುವರೆಸಿದ್ದರು. ಮೃತಪಟ್ಟ 35 ವರ್ಷದ ವ್ಯಕ್ತಿ ಪೌರ ಕಾರ್ಮಿಕ ಎಂದು ಮೊದಲು ಹೇಳಲಾಗಿತ್ತು. ಆದರೆ, ಅವರು ಪೌರ ಕಾರ್ಮಿಕರಲ್ಲ, ಮ್ಯಾನ್ಯುಯಲ್ ಸ್ಕ್ಯಾವೆಂಜರ್ ಎಂದು ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ್ ಸೋಮವಾರ ಸ್ಪಷ್ಟಪಡಿಸಿದ್ದಾರೆ.
ಸಫಾಯಿ ಕರ್ಮಾಚಾರಿ ಕಾವಲು ಸಮಿತಿಯ ಸದಸ್ಯ ಡಿ.ಎಸ್. ಬಾಬಣ್ಣ, ಉಚ್ಚಂಗಪ್ಪ, ವಾಸಪ್ಪ, ಭಾಗ್ಯಮ್ಮ, ಮಂಜುನಾಥ, ಮಂಜಪ್ಪ ಇನ್ನೂ ಹಲವರು ಇದ್ದರು.