ಜಗದ್ಗುರು ವೀರಗಂಗಾಧರ ಮಂಗಲ ಮಂಟಪ ನಿರ್ಮಾಣಕ್ಕೆ ರಂಭಾಪುರಿ ಶ್ರೀಗಳಿಂದ ಚಾಲನೆ
ಮಂಟಪಕ್ಕೆ ಸರ್ಕಾರದಿಂದ 2 ಕೋಟಿ ರೂ. ಅನುದಾನ ದೊರೆತಿದೆ. ಮಿಕ್ಕ ಹಣವನ್ನು ಎಲ್ಲರೂ ಸೇರಿ ಜೋಡಿಸಿ ಶೀಘ್ರ ಮಂಟಪ ನಿರ್ಮಾಣ ಮಾಡೋಣ : ಶಾಮನೂರು ಶಿವಶಂಕರಪ್ಪ
ದಾವಣಗೆರೆ, ಅ.29- ನಗರದ ಶ್ರೀಮದ್ ಅಭಿನವ ರೇಣುಕ ಮಂದಿರದ ಆವರಣದಲ್ಲಿ ಶ್ರೀ ರಂಭಾಪುರಿ ಜಗದ್ಗುರು ವೀರಗಂಗಾಧರ ಮಂಗಲ ಮಂಟಪ ನಿರ್ಮಾಣಕ್ಕೆ ಬಾಳೆಹೊನ್ನೂರು ಶ್ರೀ ರಂಭಾಪುರಿ ಜಗದ್ಗುರುಗಳು ಭೂಮಿ ಪೂಜೆ ನೆರವೇರಿಸಿ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಆಶೀರ್ವಚನ ನೀಡಿದ ಶ್ರೀಗಳು, ತ್ವರಿತ ಗತಿಯಲ್ಲಿ ಕಟ್ಟಡ ಕೆಲಸ ಪ್ರಾರಂಭವಾಗುತ್ತಿದೆ. ಶ್ರೀ ಪೀಠದ ಜಗದ್ಗುರು ತ್ರಯರ ಪಾದ ವಿನ್ಯಾಸದಿಂದ ಪವಿತ್ರವಾದ ಈ ಸ್ಥಾನದಲ್ಲಿ ಸುಂದರವಾದ ಭವ್ಯ ಮಂಗಲ ಮಂಟಪ ನಿರ್ಮಾಣಗೊಳ್ಳುತ್ತದೆ ಎಂದರು.
ದಾವಣಗೆರೆ ನಗರಕ್ಕೆ ಶ್ರೀ ರಂಭಾಪುರಿ ಪೀಠದ ಸಂಪರ್ಕ, ಸಹಯೋಗ ಮೊದಲಿನಿಂದಲೂ ಇದ್ದು ಲಿಂ. ಶ್ರೀ ವೀರಗಂಗಾಧರ ಜಗದ್ಗುರುಗಳು ಆಜೀವ ಪರ್ಯಂತ ಆಷಾಢ ಮಾಡ ಪೂಜೆ ಮಾಡಿ ಭಕ್ತರಿಗೆ ಆಶೀರ್ವದಿಸಿದ್ದನ್ನು ಮರೆಯಲಾಗದು. ಅವರ ಹೆಸರಿನಲ್ಲಿಯೇ ಈ ಮಂಗಲ ಮಂಟಪ ನಿರ್ಮಾಣವಾ ಗುತ್ತಿದ್ದು, ಆರೇಳು ಕೋಟಿ ರೂ. ವೆಚ್ಚ ವಾಗಲಿದೆ. ಸುಸಜ್ಜಿತವಾದ ಮತ್ತು ಧರ್ಮ ಬಾಂಧವರಿಗೆ ಅನುಕೂಲಕರ ರೀತಿಯಲ್ಲಿ ಕಟ್ಟಡ ನಿರ್ಮಾಣಗೊಳ್ಳುತ್ತದೆ ಎಂದರು.
ಅಖಿಲ ಭಾರತ ವೀರಶೈವ ಮಹಾಸಭಾ ಅಧ್ಯಕ್ಷ ಡಾ.ಶಾಮನೂರು ಶಿವಶಂಕರಪ್ಪ ಮತ್ತು ಲೆಕ್ಕ ಪರಿಶೋಧಕ ಅಥಣಿ ವೀರಣ್ಣನವರು ವಿಶೇಷ ಗಮನ ಹರಿಸಿ ಕಾರ್ಯ ಕೈಗೊಳ್ಳಲಿದ್ದಾರೆ. ಬಹು ದೊಡ್ಡದಾದ ವೀರಶೈವ ಸಮಾಜ ಇಂದು ರಾಜಕೀಯ ದೃಷ್ಟಿಯಿಂದ ಒಡೆದು ಹೋಗುತ್ತಿರುವುದು ಒಳ್ಳೆಯದಲ್ಲ. ಇದಕ್ಕಾಗಿ ಮಹಾಸಭಾ ಎಲ್ಲ ಒಳ ಪಂಗಡಗಳನ್ನು ಧರ್ಮದ ಸೈದ್ಧಾಂತಿಕ ನೆಲೆಗಟ್ಟಿನ ಮೇಲೆ ಮುನ್ನಡೆಸಲು ಶ್ರಮಿಸುತ್ತಿದ್ದಾರೆ. ಎಲ್ಲರ ಸಹಕಾರ ಮುಖ್ಯವಾಗಿದ್ದು ಧರ್ಮ ಸಮಾಜ ಕಟ್ಟಿ ಬೆಳೆಸುವ ಕೆಲಸವಾಗಬೇಕೆಂದರು.
ಶಿಲಾನ್ಯಾಸ ನೆರವೇರಿಸಿ ಮಾತನಾಡಿದ ಶಾಸಕ ಡಾ.ಶಾಮನೂರು ಶಿವಶಂಕರಪ್ಪ, ಶರವೇಗದಲ್ಲಿ ದಾವಣಗೆರೆ ನಗರ ಬೆಳೆಯುತ್ತಿದೆ. ನಗರದ ಮಧ್ಯವರ್ತಿ ಕೇಂದ್ರದಲ್ಲಿ ಶ್ರೀಮದ್ದಭಿನವ ರೇಣುಕ ಮಂದಿರ ಇದ್ದು ಬಾಳೆಹೊನ್ನೂರು ಧರ್ಮ ಪೀಠದ ಮಾರ್ಗದರ್ಶನದಲ್ಲಿ ಮಂಗಲ ಮಂಟಪ ನಿರ್ಮಾಣಗೊಳ್ಳುತ್ತಿರುವುದು ಸಂತೋಷದ ಸಂಗತಿ ಎಂದರು.
ಮಂಟಪಕ್ಕೆ ಸರ್ಕಾರದಿಂದ 2 ಕೋಟಿ ರೂ. ಅನುದಾನ ಸಹ ದೊರೆತಿದೆ. ಮಿಕ್ಕ ಹಣವನ್ನು ಎಲ್ಲರೂ ಸೇರಿ ಸೇವೆ ಸಲ್ಲಿಸಿ ಶೀಘ್ರವಾಗಿ ಕಾರ್ಯ ಪೂರ್ಣಗೊಳ್ಳಲು ಶ್ರಮಿಸುವುದಾಗಿ ತಿಳಿಸಿದರು.
ಮುಖ್ಯ ಅತಿಥಿಗಳಾದ ಅಥಣಿ ವೀರಣ್ಣ ಮಾತನಾಡಿ, ಇಂದು ಬಹಳ ದಿನದ ಕನಸು ನನಸಾಗುತ್ತಿದೆ. ಶಿಥಿಲಗೊಂಡ ಕಲ್ಯಾಣ ಮಂಟಪ ತೆಗೆದು ಅದೇ ಜಾಗದಲ್ಲಿ ಲಿಂ. ಶ್ರೀ ಗಂಗಾಧರ ಜಗದ್ಗುರುಗಳ ಹೆಸರಿನಲ್ಲಿ ಭವ್ಯ ಸುಂದರ ಮಂಗಲ ಮಂಟಪ ನಿರ್ಮಿಸಲು ಇಂದಿನ ಶ್ರೀ ರಂಭಾಪುರಿ ಜಗದ್ಗುರುಗಳು ನಮ್ಮೆಲ್ಲರಿಗೂ ಮಾರ್ಗದರ್ಶನ ನೀಡುತ್ತಿರುವುದು ಈ ಕಾರ್ಯಕ್ಕೆ ಚಾಲನೆ ಸಿಕ್ಕಿರುವುದು ಸಾಕ್ಷಿಯಾಗಿದೆ ಎಂದರು.
ಟ್ರಸ್ಟ್ ಕಾರ್ಯದರ್ಶಿ ದೇವರಮನೆ ಶಿವಕುಮಾರ್ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಖಜಾಂಚಿ ಅಥಣಿ ಪ್ರಶಾಂತ್, ಇಟ್ಟಿಗುಡಿ ಮಹಾದೇವಪ್ಪ, ಎಲ್.ಎಸ್.ದೇವೇಂದ್ರಪ್ಪ, ಸಿ.ಕೆ. ಬಸವರಾಜಪ್ಪ, ರುದ್ರೇಶ್ ಇತರರು ಉಪಸ್ಥಿತರಿದ್ದರು.