ದಾವಣಗೆರೆ, ಅ. 29 – ಕೋವಿಡ್-19 ವೈರಸ್‍ಗೆ ಸಂಬಂಧಿಸಿದಂತೆ ಶೀಘ್ರ ಲಸಿಕೆ ಲಭ್ಯವಾಗುವ ಎಲ್ಲ ಸಾಧ್ಯತೆಗಳಿದ್ದು, ಸರ್ಕಾರದ ಸೂಚನೆಯಂತೆ ಮೊದಲ ಆದ್ಯತೆ ವಲಯಕ್ಕಾಗಿ ಅಗತ್ಯ ಅಂಕಿ-ಅಂಶಗಳನ್ನು ಎರಡು ದಿನಗಳ ಒಳಗಾಗಿ ಸಿದ್ಧಪಡಿಸಿ, ಲಸಿಕೆ ನೀಡಿಕೆ ಕಾರ್ಯದಲ್ಲಿ ದಾವಣಗೆರೆ ಜಿಲ್ಲೆಯು ರಾಷ್ಟ್ರ ಮತ್ತು ರಾಜ್ಯಕ್ಕೇ ಮಾದರಿಯಾಗುವ ರೀತಿ ಕಾರ್ಯಗತ ಗೊಳಿಸಲು ಅಗತ್ಯ ವ್ಯವಸ್ಥೆ ಮಾಡಿಕೊಳ್ಳುವಂತೆ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲೆಯಲ್ಲಿ ಕೋವಿಡ್-19 ಲಸಿಕೆ ಕಾರ್ಯ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗುರುವಾರ ಏರ್ಪಡಿಸಲಾಗಿದ್ದ ಜಿಲ್ಲಾ ಕಾರ್ಯಪಡೆ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಲಸಿಕೆ ಅಭಿವೃದ್ಧಿಪಡಿಸುವ ಕಾರ್ಯ ದೇಶದಲ್ಲಿ ಅಂತಿಮ ಹಂತದಲ್ಲಿದೆ. ಯಾವುದೇ ಸಮಯದಲ್ಲಿ ಲಸಿಕೆಯು ಬಳಕೆಗೆ ಲಭ್ಯವಾಗುವ ಸಾಧ್ಯತೆಗಳಿವೆ ಎಂದು ಹೇಳಿದರು.
ಲಸಿಕೆಯನ್ನು ಮೊದಲ ಆದ್ಯತೆಯಾಗಿ ಆರೋಗ್ಯ ಕಾರ್ಯಕರ್ತರು, ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರೂ ಸೇರಿದಂತೆ ಆರೋಗ್ಯ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಎಲ್ಲರಿಗೂ ನೀಡಬೇಕೆಂಬುದು ಸರ್ಕಾರದ ನಿಲುವಾಗಿದೆ. ಇದರಂತೆಯೇ ಜಿಲ್ಲೆಯಲ್ಲಿ ಯೂ ಎಲ್ಲರ ಸಮಗ್ರ ವಿವರಗಳು ಅಂಕಿ-ಅಂಶ ಸಹಿತ ಎರಡು ದಿನಗಳ ಒಳಗಾಗಿ ಸಿದ್ಧವಾಗಬೇಕು. ಜಿಲ್ಲೆಗೆ ಪ್ರಥಮ ಹಂತದಲ್ಲಿ ಬೇಕಾಗಬಹುದಾದ ಲಸಿಕೆ ಡೋಸ್‍ಗಳ ಸಂಖ್ಯೆಯನ್ನು ವಿವರ ಸಹಿತ ಸಲ್ಲಿಸಬೇಕು. ಪ್ರಥಮ ಆದ್ಯತಾ ವಲಯದ ಯಾರೂ ಕೂಡ ಈ ಅಂಕಿ-ಅಂಶಗಳಲ್ಲಿ ಬಿಟ್ಟುಹೋಗಬಾರದು ಎಂದು ಸೂಚಿಸಿದರು.
ಲಸಿಕೆ ಬಗ್ಗೆ ತಪ್ಪು ಗ್ರಹಿಕೆ ಬೇಡ: ಡಿಸಿ ಬೀಳಗಿ
ಲಸಿಕೆ ಬಳಕೆಗೆ ಬಂದ ಕೂಡಲೆ, ಎಲ್ಲರಿಗಿಂತ ಮೊದಲು ತಾವೇ ಲಸಿಕೆ ಹಾಕಿಸಿಕೊಂಡು, ಇತರರಿಗೆ ಪ್ರೇರೇಪಿಸುವ ಕೆಲಸ ಮಾಡುವುದಾಗಿ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಹೇಳಿದರು.
ಲಸಿಕೆ ಕುರಿತಂತೆ ತಪ್ಪುಕಲ್ಪನೆ, ತಪ್ಪು ಗ್ರಹಿಕೆ ಹಾಗೂ ಕಪೋಲ ಕಲ್ಪಿತ ವದಂತಿಗಳಿಗೆ ಕಡಿವಾಣ ಹಾಕಿ ಸತ್ಯ ಸಂಗತಿಯನ್ನು ಪ್ರಚುರಪಡಿಸಲು ಸಾಮಾಜಿಕ ಜಾಲತಾಣ ಗಳನ್ನು ವ್ಯಾಪಕವಾಗಿ ಬಳಸಿಕೊಳ್ಳಲು ಕಾರ್ಯ ಸೂಚಿ ಮಾಡಿಕೊಳ್ಳಲು ನಿರ್ದೇಶಿಸಿದರು.
ಜಿಲ್ಲೆಗೆ ಬೆಳ್ಳಿ ಪ್ರಶಸ್ತಿ
ಲಾಕ್ಡೌನ್ ಹಾಗೂ ಅನ್ಲಾಕ್ ಸಂದರ್ಭದಲ್ಲಿ ಹಲವು ಬಗೆಯ ಲಸಿಕೆ ಕಾರ್ಯಕ್ರಮವನ್ನು ದೇಶದ ಎಲ್ಲ ಜಿಲ್ಲೆಗಳಿಗಿಂತಲೂ ದಾವಣಗೆರೆ ಜಿಲ್ಲೆಯಲ್ಲಿ ಉತ್ತಮವಾಗಿ ಜಾರಿಗೊಳಿಸಿ, ಅನುಷ್ಠಾನಗೊಳಿಸಿ ದ್ದಕ್ಕಾಗಿ ಜಿಲ್ಲೆಗೆ ಬೆಳ್ಳಿ ಪ್ರಶಸ್ತಿ ಬಂದಿದೆ ಎಂದು ಜಿಲ್ಲಾ ಆರ್‍ಸಿಹೆಚ್ ಅಧಿಕಾರಿ ಡಾ. ಮೀನಾಕ್ಷಿ ಹೇಳಿದರು.
ಹಿಂದಿನ ಲಸಿಕಾ ಕಾರ್ಯಕ್ರಮಗಳಿಗಿಂತ ಇದು ಹೆಚ್ಚಿನ ಮಹತ್ವದ್ದಾಗಿದ್ದು, ಪ್ರತಿಯೊಬ್ಬರಲ್ಲೂ ಆತ್ಮ ಸ್ಥೈರ್ಯ ಮೂಡಿಸುವುದು ಅಗತ್ಯವಾಗಿದೆ. ಕೋವಿಡ್ ಲಸಿಕೆ ಕಾರ್ಯಕ್ರಮ ಅನುಷ್ಠಾನದಲ್ಲಿ ಜಿಲ್ಲೆಯು ರಾಷ್ಟ್ರ ಹಾಗೂ ರಾಜ್ಯದಲ್ಲಿ ಮಾದರಿಯಾಗಬೇಕು ಎಂದರು.
ಜಿಲ್ಲಾ ಆರ್‍ಸಿಹೆಚ್ ಅಧಿಕಾರಿ ಡಾ. ಮೀನಾಕ್ಷಿ, ಜಿಲ್ಲೆಯಲ್ಲಿ ಈಗಾಗಲೆ ಅಂಕಿ-ಅಂಶ ಸಿದ್ಧಪಡಿಸುವ ಕಾರ್ಯ ನಡೆದಿದೆ. ಲಸಿಕಾ ಕಾರ್ಯಕ್ರಮವನ್ನು ಯಶಸ್ವಿಯಾಗಿ ಜಾರಿಗೊಳಿಸಲು ಲಸಿಕಾಕರ್ತರನ್ನು ಗುರುತಿಸುವ ಕಾರ್ಯ ಪ್ರಗತಿಯಲ್ಲಿದೆ ಎಂದು ತಿಳಿಸಿದರು.
ಕೋವಿಡ್‍ಗೆ ಸಂಬಂಧಿಸಿದಂತೆ ಭಾರತದಲ್ಲಿ ಒಟ್ಟು 9 ಲಸಿಕೆಗಳು ಅಭಿವೃದ್ಧಿಗೊಳ್ಳುತ್ತಿವೆ. ಈ ಪೈಕಿ 4 ಪ್ರಾಥಮಿಕ ಹಂತ, 2 ದ್ವಿತೀಯ ಹಂತ ಹಾಗೂ 3 ಲಸಿಕೆಗಳು ತೃತೀಯ ಅಂದರೆ ಅಂತಿಮ ಹಂತದಲ್ಲಿವೆ. ಅಂತಿಮ ಹಂತದ ಪ್ರಯೋಗದಲ್ಲಿ ಯಶಸ್ವಿಯಾಗುವ ಲಸಿಕೆಗೆ ಮಾತ್ರ ಬಳಕೆ ಮಾಡಲು ಅನುಮತಿ ದೊರೆಯಲಿದೆ. ಜಾಗತಿಕವಾಗಿ ಒಟ್ಟು 248 ಲಸಿಕೆಗಳನ್ನು ಅಭಿವೃದ್ಧಿಪಡಿಸಲಾಗುತ್ತಿದ್ದು, ಈ ಪೈಕಿ 10 ಲಸಿಕೆಗಳು ಅಂತಿಮ ಹಂತ ತಲುಪಿವೆ ಎಂದರು.
ಜಿಲ್ಲೆಯಲ್ಲಿ ಸೋಂಕು ಪ್ರಕರಣಗಳಲ್ಲಿ ಇಳಿಕೆ ಕಂಡುಬರುತ್ತಿದೆ. ರಾಜ್ಯದಲ್ಲಿಯೂ ಸೋಂಕು ಪ್ರಮಾಣ ಇಳಿಮುಖವಾಗಿದೆ. ಸದ್ಯ ಜಿಲ್ಲೆಯಲ್ಲಿ ಪಾಸಿಟೀವ್ ಕಂಡುಬರುವ ಪ್ರಮಾಣ ಶೇ. 5 ಕ್ಕಿಂತ ಕಡಿಮೆ ಇದೆ. ಈ ಪ್ರಮಾಣ ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ ಶೇ. 2.5 ಕ್ಕಿಂತ ಕಡಿಮೆ ಆಗಿರುವುದು ಸಮಾಧಾನಕರ ಸಂಗತಿಯಾಗಿದೆ. ಜಿಲ್ಲೆಯಲ್ಲಿ ನಿತ್ಯ ಕನಿಷ್ಟ 2500 ಮಾದರಿಗಳ ಪರೀಕ್ಷೆ ನಡೆಸುವುದನ್ನು ಮುಂದುವರೆಸಲಾಗಿದೆ. ಮುಂಬರುವ ಚಳಿಗಾಲದಲ್ಲಿ ಕೋವಿಡ್ ಪ್ರಕರಣ ಹೆಚ್ಚುವ ಸಂಭವವಿದೆ ಎಂಬುದಾಗಿ ತಜ್ಞರು ಅಭಿಪ್ರಾಯಪಟ್ಟಿದ್ದು, ಪರಿಸ್ಥಿತಿ ಎದುರಿಸಲು ಜಿಲ್ಲೆಯಲ್ಲಿ ಸಜ್ಜಾಗಿರೋಣ ಎಂದು ಜಿಲ್ಲಾಧಿಕಾರಿಗಳು ಹೇಳಿದರು.
ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ನಾಗರಾಜ್, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಜೀವ್, ಸೇರಿದಂತೆ ಆರೋಗ್ಯ ಇಲಾಖೆ ಕಾರ್ಯಕ್ರಮ ಅನುಷ್ಠಾನಾಧಿಕಾರಿಗಳು, ತಾಲ್ಲೂಕು ವೈದ್ಯಾಧಿಕಾರಿಗಳು, ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.