ಚಿತ್ರದುರ್ಗ, ಜು. 26- ಅನ್ಯರ ಕಷ್ಟಗಳಿಗೆ ಮಿಡಿಯುವ ಸ್ಪಂದನಾಶೀಲ ಸಹೃದಯ ನಮ್ಮದಾಗಬೇಕು. ಸಮಾಜದ ಆರೋಗ್ಯ ಕಾಪಾಡುವಲ್ಲಿ ಸಹೃದಯದ ಪಾತ್ರ ಬಹಳಷ್ಟಿದೆ ಎಂದು ಡಾ. ಶಿವ ಮೂರ್ತಿ ಮುರುಘಾ ಶರಣರು ಹೇಳಿದರು.
ಇಲ್ಲಿನ ಮುರುಘಾ ಮಠದಲ್ಲಿ ಭಾನುವಾರ ನಡೆದ ಶ್ರಾವಣ ದರ್ಶನ ಆರನೇ ದಿನದ ಫೇಸ್‍ಬುಕ್ ಮತ್ತು ಯುಟ್ಯೂಬ್ ಲೈವ್ ಕಾರ್ಯಕ್ರಮದಲ್ಲಿ ಹೃದಯದ ಅನಾವರಣ ವಿಷಯ ಕುರಿತು ಅವರು ಮಾತನಾಡಿದರು.
ದೇವರು ಅಥವಾ ಗುರುಗಳ ಸನ್ನಿಧಿಯಲ್ಲಿ ನಿಂತು, ನನ್ನ ಹೃದಯವನ್ನು ಅರಳಿಸು ಎಂದು ಅಪ್ಪಿತಪ್ಪಿಯೂ ಯಾರೂ ಪ್ರಾರ್ಥನೆ ಮಾಡುವುದಿಲ್ಲ. ನನಗೂ ಒಂದು ಹೃದಯವಿದೆ ಎಂಬ ಭಾವನೆ ಬಂದರೆ ಅದೊಂದು ಉತ್ತಮವಾದ ಸಾರ್ಥಕ ಜೀವನ ಎಂದು ಕರೆಸಿಕೊಳ್ಳುತ್ತದೆ. ಸಮಾಜದಲ್ಲಿ ಹೃದಯಹೀನರಂತೆ ವರ್ತಿಸುವವರೇ ಹೆಚ್ಚಾಗಿದ್ದಾರೆ ಎಂದರು.
ದಾರ್ಶನಿಕರು, ಸತ್ಪುರುಷರು ಕೇವಲ ನಾಲಿಗೆಯ ಮುಖಾಂತರವಾಗಿ ಮಾತ್ರ ಮಾತನಾಡುವುದಿಲ್ಲ. ಹೃದಯದ ಮುಖಾಂತರವಾಗಿ ಮಾತನಾಡುತ್ತಾರೆ. ಪ್ರವಚನಗಳು ಹೃದಯದ ಮೂಲಕ ಬರಬೇಕು. ಹೃದಯ ಅದೊಂದು ಬರೀ ಉಸಿರಾಟದ ಗಾಳಿಯ ಯಂತ್ರವಲ್ಲ, ಅದರೊಳಗೆ ಒಂದು ಬದುಕು ಇದೆ. ನಮ್ಮ ಬದುಕಿನ ಕೇಂದ್ರವೆಂದರೆ ಹೃದಯ. ಅಂತಹ ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು. ತನ್ನ ಹಾಗು ಬೇರೆಯವರ ಹೃದಯಕ್ಕೂ ಯಾವುದೇ ರೀತಿಯ ನೋವು ಆಗದಂತೆ ನೋಡಿಕೊಳ್ಳ ವುದು ನಮ್ಮ ಪೂಜೆಯಾಗಬೇಕು ಎಂದು ಶರಣರು ಹೇಳಿದರು.