ನಾನ್ ಕೋವಿಡ್ ರೋಗಿಗಳಿಗೆ ಚಿಕಿತ್ಸೆ ಸಿಗದ ಆರೋಪ ಹಿನ್ನೆಲೆ ವೈದ್ಯಕೀಯ ಸಿಬ್ಬಂದಿಗಳಿಗೆ ಶಿಸ್ತು ಕ್ರಮದ ಎಚ್ಚರಿಕೆ
ದಾವಣಗೆರೆ, ಜು.26- ನಗರದಲ್ಲಿ ಖಾಸಗಿ ಹಾಗೂ ಸರ್ಕಾರಿ ಆಸ್ಪತ್ರೆಗಳಲ್ಲಿ ನಾನ್ ಕೋವಿಡ್ ರೋಗಿಗಳಿಗೆ ಚಿಕಿತ್ಸೆ ದೊರಕುತ್ತಿಲ್ಲ ಎಂಬ ಆರೋಪಗಳು ಕೇಳಿ ಬಂದಿವೆ.
ಜಿಲ್ಲಾಸ್ಪತ್ರೆಯಲ್ಲೂ ಕೂಡ ಚಿಕಿತ್ಸೆ ಸಿಗದೇ ನಾನ್ ಕೋವಿಡ್ ರೋಗಿಗಳು ಪರದಾಟ ನಡೆಸಿದ್ದು, ಜಿಲ್ಲಾಸ್ಪತ್ರೆಯ ಮುಂಭಾಗ ದಿಕ್ಕು ತೋಚದೆ ರೋಗಿಗಳು ವ್ಹೀಲ್ ಚೇರ್, ಸ್ಟ್ರೆಚ್ಚರ್ ನಲ್ಲಿ ತೊಂದರೆ ಅನುಭವಿಸಿದ್ದಾರೆನ್ನಲಾಗಿದೆ.
ಕೋವಿಡ್ ಆಸ್ಪತ್ರೆಯಾಗಿ ಜಿಲ್ಲಾಸ್ಪತ್ರೆ ಯನ್ನು ಮಾಡಲಾಗಿದ್ದು, ಇಲ್ಲಿಗೆ ಬಂದರೆ ಖಾಸಗಿ ಆಸ್ಪತ್ರೆಗೆ ರೆಪರ್ ಮಾಡಿ ಕಳಿಸಲಾಗುತ್ತೆ. ಆದರೆ ಖಾಸಗಿಯಲ್ಲಿ ಮಾತ್ರ ಬೆಡ್ ಇಲ್ಲ ಎನ್ನುವ ಉತ್ತರ ಕೇಳಿ ಬಂದಿದೆ ಎಂದು ಹೇಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಜಿಲ್ಲಾಸ್ಪತ್ರೆಗೆ ಇಂದು ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ರೋಗಿಗಳಿಗೆ ಚಿಕಿತ್ಸೆ ನೀಡದೇ ಸತಾಯಿಸಿದ್ದಲ್ಲಿ ಶಿಸ್ತು ಕ್ರಮ ಜರುಗಿಸುವುದಾಗಿ ವೈದ್ಯಕೀಯ ಸಿಬ್ಬಂದಿಗಳಿಗೆ ಎಚ್ಚರಿಕೆ ನೀಡಿದರು.
ಮೃತ ಸಂಬಂಧಿಯ ಕಾಲಿಗೆ ಬೀಳಲು ಮುಂದಾದ ಜಿಲ್ಲಾಧಿಕಾರಿ : ಮೃತ ಪೌರ ಕಾರ್ಮಿಕ ಕುಮಾರ್ ಅವರ ಮಾವ ಉಚ್ಚೆಂಗೆಪ್ಪ ಬೆಡ್ ಗಾಗಿ ಪರದಾಡಿದ ಪರಿಸ್ಥಿತಿ ಬಗ್ಗೆ ವಿವರಿಸಿ ಚಿಕಿತ್ಸೆ ನೀಡುವಂತೆ ಜಿಲ್ಲಾಧಿಕಾರಿಗಳ ಕಾಲಿಗೆ ಬೀಳಲು ಮುಂದಾದರು. ಆಗ ಆ ವ್ಯಕ್ತಿಯನ್ನು ತಡೆದು ಸ್ವತಃ ಜಿಲ್ಲಾಧಿಕಾರಿಗಳೂ ಸಹ ಆ ವ್ಯಕ್ತಿಯ ಕಾಲಿಗೆ ಬೀಳಲು ಮುಂದಾದರಲ್ಲದೇ, ನಾವು ಇದ್ದೇವೆ ಚಿಕಿತ್ಸೆ ಕೊಡಿಸುವ ಜವಾಬ್ದಾರಿ ನಮ್ಮದು ಎಂದು ಸಮಾಧಾನಪಡಿಸಿದರು. ನಗರ ಪಾಲಿಕೆ ಪೌರ ಕಾರ್ಮಿಕ ಕುಮಾರ ಅವರನ್ನು ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಬಂದ ಸಂದರ್ಭದಲ್ಲಿ ಆಗಮಿಸಿದ್ದ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅವರಿಗೆ ಕುಮಾರ್ ಅವರ ಮಾವ ಉಚ್ಚೆಂಗೆಪ್ಪ ಸೇರಿದಂತೆ ಕುಟುಂಬಸ್ಥರು ಕೈ ಮುಗಿದು ಚಿಕಿತ್ಸೆ ಕೊಡಿಸುವಂತೆ ಮನವಿ ಮಾಡಿದ್ದು, ಆಗ ನಿಮ್ಮಗಿಂತಲೂ ಹೆಚ್ಚಿನ ದುಃಖ ನಮಗೂ ಬರಲಿದೆ ಎಂದು ಕುಟುಂಬ ವರ್ಗದವರಿಗೆ ಸಂತೈಸುತ್ತಲೇ ಡಿಸಿ ಭಾವುಕರಾದರು.
ಸಕಾಲಕ್ಕೆ ಸಿಗದ ಚಿಕಿತ್ಸೆ : ಪೌರ ಕಾರ್ಮಿಕ ಸಾವು : ಸಕಾಲಕ್ಕೆ ಚಿಕಿತ್ಸೆ ಸಿಗದೇ ನಾನ್ ಕೋವಿಡ್ ರೋಗಿಯೋರ್ವ ಮೃತಪಟ್ಟಿರುವ ಘಟನೆ ನಗರದಲ್ಲಿ ಇಂದು ನಡೆದಿದ್ದು, ಇದು ಎರಡನೇ ಪ್ರಕರಣ ವಾಗಿದೆ. ನಗರ ಪಾಲಿಕೆಯ ಪೌರ ಕಾರ್ಮಿಕ ಕುಮಾರ್ (35) ಮೃತನು. ಈತ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ. ಸಂಬಂಧಿಕರು ಬೆಳಗ್ಗೆಯಿಂದ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆ ಗಳಲ್ಲಿ ಬೆಡ್ ಸಿಗದೆ ಅಲೆದಾಡಿದ್ದಾರೆ. ಕೊನೆಗೆ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಲಾಗಿದೆ. ಆದರೆ, ದಾಖಲು ಮಾಡಿದ ಕೆಲವೇ ಕ್ಷಣಗಳಲ್ಲಿ ಮೃತಪಟ್ಟಿದ್ದಾರೆ. ಇದೇ ರೀತಿಯಾಗಿ ಇತ್ತೀಚೆಗೆ ಪೊಲೀಸ್ ಹೆಡ್ ಕಾನ್ ಸ್ಟೇಬಲ್ ಓರ್ವರು ಮೃತಪಟ್ಟಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.
ನಂತರ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಮಾತ ನಾಡಿದ ಡಿಸಿ, ಈಗಾಗಲೇ ನಗರದಲ್ಲಿರುವ ಖಾಸಗಿ ಆಸ್ಪತ್ರೆಗಳು ಶೇ.50ರಷ್ಟು ಬೆಡ್ ನೀಡಲು ಒಪ್ಪಿಕೊಂಡಿದ್ದಾರೆ. ಇಂದು ನಾನ್ ಕೋವಿಡ್ ವ್ಯಕ್ತಿಯೋರ್ವ ಸಾವನ್ನಪ್ಪಿದ್ದು, ಅವರು ಚಿಕಿತ್ಸೆಗಾಗಿ ಮೊದಲು ಬೇರೆ ಬೇರೆ ಆಸ್ಪತ್ರೆಗೆ ಹೋಗಿ ಬಂದು ನಂತರ ಜಿಲ್ಲಾಸ್ಪತ್ರೆಗೆ ಸೇರಿದ್ದಾರೆ ಎಂದು ತಿಳಿಸಿದರು.
ಖಾಸಗಿ ಆಸ್ಪತ್ರೆಗಳಲ್ಲಿ ಎಲ್ಲಾ ಸೌಲಭ್ಯವಿದ್ದು, ಚಿಕಿತ್ಸೆಗೆ ನಿರಾಕರಿಸಿದರೇ ಅಂತಹ ಆಸ್ಪತ್ರೆಗಳ ವಿರುದ್ಧ ವಿಪತ್ತು ನಿರ್ವಹಣೆ ಕಾಯ್ದೆ ಅಡಿ ದೂರು ದಾಖಲಿಸಲಾಗುವುದು. ಯಾರಾದರೂ ಚಿಕಿತ್ಸೆ ಸಿಗದೇ ಇದ್ದರೆ ನನಗೆ ಲಿಖಿತ ದೂರು ನೀಡಬೇಕು. ದೂರು ಸಾಬೀತಾದರೆ ಅಗತ್ಯವಾಗಿ ಶಿಸ್ತಿನ ಕ್ರಮ ತೆಗೆದುಕೊಳ್ಳುತ್ತೇನೆಂದು ಸ್ಪಷ್ಟಪಡಿಸಿದ್ದಾರೆ.