ತೆರೆಮರೆಯಲ್ಲಿ ತರಳಬಾಳು ಶ್ರೀಗಳ ಕಾಯಕ ಪ್ರಜ್ಞೆ

ಸಿರಿಗೆರೆ, ಜು. 23- ಕೊರೊನಾ ಲಾಕ್‌ಡೌನ್‌ ವೇಳೆ ತರಳಬಾಳು ಜಗದ್ಗುರು ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ರೈತರ ಅಭ್ಯುದಯ ಕ್ಕಾಗಿ ತೆರೆ ಮರೆಯಲ್ಲಿ ಶ್ರಮಿಸುತ್ತಿರುವ ಕಾಯಕ ಪ್ರಜ್ಞೆ ಜನತೆಗೆ ಸ್ಪೂರ್ತಿಯಾಗಿದೆ.

ಕಳೆದ ಮೂರು ತಿಂಗಳಿನಿಂದ ಜಗದ್ಗುರುಗಳು ಸಚಿವರು, ಉನ್ನತ ಅಧಿಕಾರಿಗಳು ಸೇರಿದಂತೆ ಯಾರಿಗೂ ಭೇಟಿಗೆ ಅವಕಾಶ ನೀಡಿಲ್ಲ. ಆದರೆ ತೆರೆ ಹಿಂದೆ ಮಾತ್ರ ನಿಮಿಷವನ್ನೂ ವ್ಯಯ ಮಾಡದೆ ಹಲವು ಕೆಲಸಗಳಲ್ಲಿ ನಿರತರಾಗಿದ್ದಾರೆ.

ಕೊರೊನಾ ನಿಯಂತ್ರಣಕ್ಕಾಗಿ ಮುಖ್ಯಮಂತ್ರಿಗಳಿಗೆ ಅಗತ್ಯ ಸಲಹೆ ನೀಡಿದ್ದಾರೆ. ಕೃಷಿ, ಕಂದಾಯ, ಜಲ ಸಂಪನ್ಮೂಲ ಇಲಾಖೆ ಸಚಿವರು ಹಾಗೂ ಅಧಿಕಾರಿಗಳೊಂದಿಗೆ ಕೆರೆ ತುಂಬಿಸುವ ಯೋಜನೆ, ಬರ ಮತ್ತು ನೆರೆ ಯಿಂದ ಬೆಳೆಗಳಿಗೆ ಹಾನಿಯಾದಾಗ ಸರ್ಕಾರ ಅನುಸರಿಸಬೇಕಾದ ಪರಿಹಾರೋಪಾಯಗಳ ಬಗ್ಗೆ ಚರ್ಚಿಸುತ್ತಿದ್ದಾರೆ.

ಕೃಷಿ ಮತ್ತು  ಕಂದಾಯ  ಇಲಾಖೆಯ  ತಂತ್ರಾಂಶಗಳ  ದೋಷಗಳನ್ನು  ಸರಿಪಡಿಸಿ  ಅನ್ನದಾತನಿಗೆ ನ್ಯಾಯ ಒದಗಿಸುವ ಕೆಲಸವನ್ನು ಸರ್ಕಾರದ ಉನ್ನತ ಅಧಿಕಾರಿಗಳೊಂದಿಗೆ ವಿಡಿಯೋ  ಸಂವಹನ ಮತ್ತು  ದೂರವಾಣಿ ಮೂಲಕ ಚರ್ಚಿಸುತ್ತಿದ್ದಾರೆ.

ಸ್ವಯಂ ನಿರ್ಬಂಧದಲ್ಲಿರುವ ಶ್ರೀಗಳು, ಭರಮಸಾಗರ ಮತ್ತು ಬ್ಯಾಡಗಿ ತಾಲ್ಲೂಕು  ಆಣೂರು ಬುಡಪನಹಳ್ಳಿ ಏತ ನೀರಾವರಿ ಯೋಜನೆಗಳ  ಪ್ರಗತಿ  ಕುರಿತು ನಿರಂತರವಾಗಿ ವರದಿ ಪರಿಶೀಲನೆ ಮಾಡುತ್ತಾ,  ಅತ್ಯಗತ್ಯ ಮಾರ್ಗದರ್ಶನ  ನೀಡುತ್ತಿದ್ದಾರೆ.

ಭರಮಸಾಗರ ವ್ಯಾಪ್ತಿಯ 40ಕ್ಕೂ ಹೆಚ್ಚು   ಕೆರೆಗಳನ್ನು ತುಂಬಿಸುವ ಸುಮಾರು 1200 ಕೋಟಿ ರೂಗಳ ಯೋಜನೆಯಡಿ  ಭರಮಸಾಗರ ಕೆರೆಗೆ ಸೀಮಿತವಾಗಿ ನೇರ ಪೈಪ್ ಲೈನ್ ಅಳವಡಿಕೆ ಕಾಮಗಾರಿಯು  ವೈಜ್ಞಾನಿಕ ಮಾನದಂಡದಡಿ ಶ್ರೀಗಳ ಒತ್ತಾಸೆಯಿಂದಾಗಿ ಭರದಿಂದ ಸಾಗುತ್ತಿದೆ. 

ಈ ಕಾರ್ಯವು ಶೀಘ್ರದಲ್ಲಿ ಪೂರ್ಣಗೊಂಡರೆ ಭರಮಸಾಗರ ಕೆರೆ ತುಂಬಲು ಕೇವಲ 23 ದಿನ ಸಾಕಾಗುತ್ತದೆ. ಇದುವರೆಗಿನ ಯೋಜನೆಯಂತೆ ತುಂಗಭದ್ರಾ ನದಿಯಿಂದ ಭರಮಸಾಗರ ಕೆರೆಗೆ ನೇರವಾಗಿ ನೀರು ತುಂಬಿಸುವ ಯೋಜನೆಯನ್ನು ಪರಿಷ್ಕರಿಸಲಾಗಿದೆ. ಒಮ್ಮೆ  ನದಿಯಿಂದ ನೀರು  ಹರಿಸುವ ಪ್ರಕ್ರಿಯೆಗೆ ಚಾಲನೆ  ದೊರೆತರೆ  ಪ್ರತಿ ಸೆಕೆಂಡಿಗೆ 2790 ಲೀಟರ್  ನೀರು ಹರಿದು ಬರಲಿದೆ.

error: Content is protected !!