ದಾವಣಗೆರೆ, ಅ. 27- ಬೆಂಬಲ ಬೆಲೆಯಡಿ ಖರೀದಿ ಕೇಂದ್ರ ತೆರೆಯುವಂತೆ ಒತ್ತಾಯಿಸಿ, ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ನೇತೃತ್ವದಲ್ಲಿ ಮಾಯಕೊಂಡದ ನಾಡ ಕಚೇರಿ ಮುಂದೆ ಧರಣಿ ಹೂಡಿ ಜಾನುವಾರುಗಳನ್ನು ಹರಾಜು ಹಾಕಲಾಯಿತು. ಹರಾಜಾಗದಿದ್ದಾಗ ಜಾನುವಾರುಗಳನ್ನು ಮಾಯಕೊಂಡ ಪೊಲೀಸ್ ಠಾಣೆ ಮುಂದೆ ಕಟ್ಟಿ ಹಾಕಲಾಯಿತು.
ಈ ವೇಳೆ ಮಾತನಾಡಿದ ರೈತ ಮುಖಂಡ ಬಲ್ಲೂರು ರವಿಕುಮಾರ್, ಕೇಂದ್ರ ಸರ್ಕಾರದ ಆದೇಶವನ್ನು ಐಎಎಸ್, ಐಪಿಎಸ್ ಅಧಿಕಾರಿಗಳು ಪಾಲನೆ ಮಾಡದೇ ರೈತರ ಮೇಲೆ ದರ್ಪ ತೋರುತ್ತಿದ್ದಾರೆ. ಕೃಷಿ ಬೆಲೆ ಆಯೋಗದ ಲೆಕ್ಕದ ಆಧಾರದ ಮೇಲೆ ಕೇಂದ್ರ ಸರ್ಕಾರ ಬೆಂಬಲ ಬೆಲೆ ನಿಗದಿ ಮಾಡಲಾಗಿದೆ. ಬೆಳೆಗಳಿಗೆ ಬೆಂಬಲ ಬೆಲೆ ನೀಡಲಾಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪೊಲೀಸ್ ವರಿಷ್ಠಾಧಿಕಾರಿಗಳ ಮೇಲೆ ಕೋರ್ಟಿನಲ್ಲಿ ಪಿಐಎಲ್ ಹಾಕುತ್ತೇವೆ. ರೈತರು ಮೆಕ್ಕೆಜೋಳವನ್ನು 800-900 ರೂ.ಗೆ ಮಾರಾಟ ಮಾಡುತ್ತಿದ್ದಾರೆ. ರೈತರಿಗೆ ದಲ್ಲಾಲಿಗಳಿಂದ ತೀವ್ರ ಅನ್ಯಾಯವಾಗುತ್ತಿದೆ. ಶಾಸಕ ಪ್ರೊ. ಲಿಂಗಣ್ಣ ಹೊರತುಪಡಿಸಿ ಯಾವ ಜನಪ್ರತಿನಿಧಿಯೂ ಸಹ ನಮ್ಮ ಅಹವಾಲು ಆಲಿಸಿಲ್ಲ. ಒಂದು ವಾರದ ನಂತರ ಎಸಿ ಕಛೇರಿ ಮುಂದೆ ಧರಣಿ ಪ್ರಾರಂಭಿಸಲಾಗುವುದು ಎಂದು ಎಚ್ಚರಿಸಿದರು.
ರೈತ ಮುಖಂಡ ಬಲ್ಲೂರು ಪರಶುರಾಮರೆಡ್ಡಿ ಮಾತನಾಡಿ, ಹಲವು ರಾಜ್ಯಗಳಲ್ಲಿ ಖರೀದಿ ಕೇಂದ್ರ ತೆರೆಯಲಾಗಿದೆ. ಮೆಕ್ಕೆಜೋಳ ಅರ್ಧದಷ್ಟು ಕಟಾವು ಆಗಿದ್ದೂ 22 ದಿನಗಳಿಂದ ಹೋರಾಟ ನಡೆಸುತ್ತಿದ್ದರೂ ಯಾವುದೇ ಸ್ಪಂದನೆ ಇಲ್ಲ. ಕೇಂದ್ರ ಸರ್ಕಾರ ಈಗಾಗಲೇ ಘೋಷಣೆ ಮಾಡಿದ್ದರೂ ತೆರೆಯುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಗೌಡ್ರ ಅಶೋಕ ಮಾತನಾಡಿ, ಹಲವು ದಿನಗಳಿಂದ ಹೋರಾಟ ಮಾಡುತ್ತಿದ್ದರೂ ಅಧಿಕಾರಿಗಳಿಗೆ ಕಾಳಜಿ ಇಲ್ಲ. ಹಸಿರು ಶಾಲು ಹಾಕಿ ರೈತರ ಹಿತ ಕಾಯುವ ವಚನ ನೀಡಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದು ಸುಳ್ಳಾದರೆ ಯಡಿಯೂರಪ್ಪ ರಾಜಿನಾಮೆ ನೀಡಲಿ ಎಂದರು.
ಪ್ರತಿಭಟನೆಯಲ್ಲಿ ಬಸಣ್ಣ ರಾಂಪುರ, ನಾಗರಕಟ್ಟೆ ಜಯಣ್ಣ, ಆವರಗೆರೆ ಬಸಜ್ಜ, ಪಾಮೇ ನಹಳ್ಳಿ ನಿಂಗಣ್ಣ, ಆವರಗೆರೆ ಕಲ್ಲೇಶಪ್ಪ, ಕರೇಕಟ್ಟೆ ಗದಿಗೇಶ್, ಪ್ರತಾಪ್, ಸಿ.ಟಿ. ನಿಂಗಪ್ಪ, ನಿಂಗಣ್ಣ, ಭರತ್ ಸೇರಿದಂತೆ ಇತರರು ಭಾಗವಹಿಸಿದ್ದರು.