ಹರಿಹರ ನಗರದ ಜನತೆ ಪಂಚಮಿ ಹಬ್ಬದ ಸಡಗರದಲ್ಲಿ ಕೊರೊನಾ ರೋಗದ ಭಯವನ್ನು ಮರೆತಂತಿದ್ದು, ಸಂಭ್ರಮದಿಂದ ಖರೀದಿಯಲ್ಲಿ ತೊಡಗಿದ್ದಾರೆ.
ಶ್ರಾವಣ ಮಾಸದಲ್ಲಿ ಪ್ರತಿ ಮನೆ ಮತ್ತು ದೇವಾಲ ಯಗಳಲ್ಲಿ ವಿಶೇಷ ಪೂಜೆ ಸಲ್ಲಿಸುವ ವೇಳೆಯಿದು. ಪ್ರತಿ ಯೊಂದು ಮನೆಗಳಲ್ಲಿ ಸೋಮವಾರ ಬಂದರೆ ಶಂಭು ಲಿಂಗನ ಆರಾಧನೆ, ಮಂಗಳವಾರ ಮಂಗಳಗೌರಿ ವ್ರತ, ಗುರುವಾರ ಸಾಯಿಬಾಬಾ ಮತ್ತು ರಾಘವೇಂದ್ರ ಸ್ವಾಮಿಗಳ ಆರಾಧನೆ, ಶುಕ್ರವಾರ ಶುಕ್ರಗೌರಿ ವ್ರತ, ಶನಿವಾರ ಆಂಜನೇಯನ ಸ್ಮರಣೆ, ಭಾನುವಾರ ಗುಡದಯ್ಯ ಬೀರಪ್ಪ ಸೇರಿದಂತೆ ಹಲವಾರು ದೇವರುಗಳ ಆರಾಧನೆಯನ್ನು ಒಂದು ತಿಂಗಳ ಕಾಲ ಮಾಡುತ್ತಾರೆ . ಜೊತೆಯಲ್ಲಿ ತಮ್ಮ ತಮ್ಮ ಮನೆ ದೇವರುಗಳ ಆರಾಧನೆ ಕೂಡ ನಡೆಯುತ್ತದೆ.
ಈ ಮಾಸದಲ್ಲಿ ಮೊದಲು ಬರುವುದು ನಾಗರ ಪಂಚಮಿ ಹಬ್ಬ. ಈ ಹಬ್ಬವನ್ನು ನಗರದಲ್ಲಿ ಮತ್ತು ಗ್ರಾಮೀಣಾ ಪ್ರದೇಶಗಳಲ್ಲಿ ಬಹಳ ಸಡಗರ, ಸಂಭ್ರಮದಿಂದ ಆಚರಿಸಲಾಗುತ್ತದೆ. ನಾಗರ ಪಂಚಮಿ ಹಬ್ಬದ ಸಮಯದಲ್ಲಿ ಬಹಳ ಪ್ರಾಮುಖ್ಯತೆ ಇರುವ ನಾಗ ದೇವರಿಗೆ ವಿಶೇಷವಾಗಿ ಪೂಜೆ ಮಾಡಿ ಹಾಲು ಎರೆಯುವುದು. ಮನೆಗಳಲ್ಲಿ ಎಳ್ಳು, ಕಡಲೆ, ಶೇಂಗಾ, ಬೇಸಿನ್ ಉಂಡೆಗಳ ತಯಾರಿ ನಡೆಯುತ್ತದೆ.
ಪಂಚಮಿ ಹಬ್ಬದ ಆಚರಣೆಗಾಗಿ ಸಾರ್ವಜನಿಕರು ತಮಗೆ ಬೇಕಾದ ಅಗತ್ಯ ವಸ್ತುಗಳನ್ನು ಖರೀದಿಸಲು ನಾ ಮುಂದೆ ತಾ ಮುಂದೆ ಎಂದು ಕೊರೊನಾ ಮರೆತು ಖರೀದಿಗೆ ಮುಂದಾಗಿದ್ದಾರೆ. ಖರೀದಿಸುವ ಭರಾಟೆಯಲ್ಲಿ ಕಿರಾಣಿ , ತರಕಾರಿ, ಹಣ್ಣು, ಕಾಯಿ, ಹೂವು, ಬಟ್ಟೆ, ಬೇಕರಿ, ಸೇರಿದಂತೆ ಯಾವುದೇ ಅಂಗಡಿ ಮುಂದೆ ಹೋದರು, ಯಾರೂ ಅಂತರವನ್ನು ಕಾಯ್ದುಕೊಂಡುಕೊಂಡಿಲ್ಲ.
ಶ್ರಾವಣ ಮಾಸ ಮಹಿಳೆಯರಿಗೆ ಎಲ್ಲಿಲ್ಲದ ಹೊಸತನವನ್ನು ತರುತ್ತದೆ. ಈ ಸಂದರ್ಭದಲ್ಲಿ ದೇವರಲ್ಲಿ ಆರಾಧನೆ ಮಾಡುವುದರಿಂದ ಕಷ್ಟಗಳಿಗೆ ಬೇಗನೆ ಪರಿಹಾರ ಸಿಗುತ್ತದೆ ಮತ್ತು ಹೊಸದಾಗಿ ಮಾಡುವ ಕಾರ್ಯಗಳು ಯಾವುದೇ ತೊಂದರೆ ಆಗದಂತೆ ನಿರ್ವಿಘ್ನವಾಗಿ ನಡೆಯುತ್ತದೆ ಎಂದು ಮಂಗಳಗೌರಿ ವ್ರತ, ಶುಕ್ರಗೌರಿ ವ್ರತ, ಸೇರಿದಂತೆ ಹಲವಾರು ವ್ರತಗಳನ್ನು ಮಾಡಿ ಶ್ರಾವಣ ಮಾಸದಲ್ಲಿ ತಮ್ಮ ಕಷ್ಟಗಳಿಗೆ ಪರಿಹಾರವನ್ನು ಕಂಡುಕೊಳ್ಳುತ್ತಾರೆ.
– ಶೋಭಾ ಜಗದೀಶ್, ಗೃಹಿಣಿ.
ಶ್ರಾವಣದಲ್ಲಿ ನಮ್ಮ ಕಿರಾಣಿ ಅಂಗಡಿಯಲ್ಲಿ ಜನ ದಟ್ಟಣೆ ಹೆಚ್ಚು ಆಗುವುದು ಸರ್ವೇ ಸಾಮಾನ್ಯ. ನಾವು ಕೂಡ ಸಾರ್ವಜನಿಕರಿಗೆ ತೊಂದರೆ ಆಗಬಾರದು ಎಂದು ಸ್ಯಾನಿಟೈಸರ್ ನೀಡುತ್ತಿದ್ದು ಜೊತೆಯಲ್ಲಿ ಅಂತರವನ್ನು ಕಾಯ್ದುಕೊಂಡು ಹೋದ ವ್ಯಕ್ತಿಗಳಿಗೆ ಮಾತ್ರ ದಿನಸಿ ಪದಾರ್ಥಗಳನ್ನು ನೀಡುವುದಾಗಿ ಹೇಳಿದ್ದೇವೆ. ಮತ್ತು ಕಡ್ಡಾಯವಾಗಿ ಮಾಸ್ಕ್ ಹಾಕಿಕೊಳ್ಳಲು ತಿಳಿಸಲಾಗಿದೆ.
– ಡಿ.ಯು. ಅರುಣ್ ಕುಮಾರ್, ಕಿರಾಣಿ ವ್ಯಾಪಾರಿ
ನಗರದ ತರಕಾರಿ ಮಾರುಕಟ್ಟೆ, ಮುಖ್ಯ ರಸ್ತೆ, ರಾಣಿ ಚೆನ್ನಮ್ಮ ವೃತ್ತ, ಹರಪನಹಳ್ಳಿ ರಸ್ತೆ, ಶೋಭಾ ಟಾಕೀಸ್ ರಸ್ತೆ, ದೇವಸ್ಥಾನ ರಸ್ತೆ, ಹೈಸ್ಕೂಲ್ ಬಡಾವಣೆ ಸೇರಿದಂತೆ ಪ್ರಮುಖ ವ್ಯಾಪಾರಿ ಸ್ಥಳಗಳಲ್ಲಿ ಜನದಟ್ಟಣೆ ಅಧಿಕ ಪ್ರಮಾಣದಲ್ಲಿ ದ್ದು, ವ್ಯಾಪಾರದಲ್ಲಿ ತೊಡಗಿದ್ದಾರೆ. ಕೊರೊನಾ ನಿಮಿತ್ತ ಸಂತೆ ರದ್ದು ಮಾಡಿದ್ದರೂ ಸಹ ಅಲ್ಲಲ್ಲಿ ಕೆಲವು ಅಂಗಡಿಗಳು ತೆರೆದುಕೊಂಡು ವ್ಯಾಪಾರ ವಹಿವಾಟು ನಡೆಸುತ್ತಿವೆ.
ನಗರದ ಪೊಲೀಸ್ ಇಲಾಖೆ ವತಿಯಿಂದ, ಗುತ್ತೂರು ಠಾಣೆಯ ಪಿಎಸ್ಐ ಡಿ. ರವಿಕುಮಾರ್ ಮತ್ತು ದಾವಣಗೆರೆ ಜಿಲ್ಲೆಯ ದುರ್ಗಾ ಕಮಾಂಡೊ ಪಡೆ ವಾಹನಗಳ ಮೂಲಕ ಪಟ್ಟಣದಲ್ಲಿ ಜಾಗೃತಿ ಮೂಡಿಸಿದರೂ ಇಷ್ಟೊಂದು ಅಧಿಕ ಪ್ರಮಾಣದಲ್ಲಿ ಅಂಗಡಿಗಳ ಮುಂದೆ ಜನರು ಸೇರಿರುವುದನ್ನು ಅಂತರ ಕಾಯ್ದುಕೊಂಡು ಮತ್ತು ಮಾಸ್ಕ್ ಧರಿಸಿಕೊಂಡು ವ್ಯಾಪಾರ ಮಾಡದೇ ಇರುವುದನ್ನು ನೋಡಿದರೆ ಇವರಲ್ಲಿ ಜಾಗೃತಿ ಮೂಡಿಲ್ಲವೇ ಎಂಬ ಅನುಮಾನ ಬರುತ್ತದೆ.
ಇಷ್ಟಾದರೂ ತಾಲ್ಲೂಕು ಆಡಳಿತವಾಗಲಿ, ನಗರಸಭೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಮುಂದೆ ಬಂದು ಕ್ರಮ ಕೈಗೊಳ್ಳದಿರುವುದನ್ನು ನೋಡಿದರೆ ಅವರುಗಳಿಗೂ ಅಲಸ್ಯ ಬಂದಂತಾಗಿದೆಯೇನೋ ಅನ್ನುವ ಅನುಮಾನ ಬಂದಂತಾಗಿದೆ.
ಎಂ. ಚಿದಾನಂದ ಕಂಚಿಕೇರಿ
[email protected]