ವಿದ್ಯಾರ್ಥಿಗಳು ಏಕಾಗ್ರತೆ ಒಲಿಸಿಕೊಳ್ಳಬೇಕು

ವಿದ್ಯಾರ್ಥಿಗಳು ಏಕಾಗ್ರತೆ ಒಲಿಸಿಕೊಳ್ಳಬೇಕು - Janathavaniಶ್ರಾವಣ ದರ್ಶನ, ಬೌದ್ಧಿಕ ಯಾನ ಕಾರ್ಯಕ್ರಮದಲ್ಲಿ ಮುರುಘಾ ಶರಣರ ಅಭಿಮತ

ಚಿತ್ರದುರ್ಗ, ಜು. 22- ವಿದ್ಯಾರ್ಥಿಗಳು ಏಕಾಗ್ರತೆ ಒಲಿಸಿಕೊಳ್ಳಬೇಕು. ಶಿಷ್ಯ ಗುರುವನ್ನು ಒಲಿಸಿಕೊಳ್ಳುವಲ್ಲಿ ಏಕಾಗ್ರತೆ ಬೇಕು. ಏಕಾಗ್ರತೆ ಯಾರಲ್ಲಿ ಇರುವುದೋ ಅವರು ಬದುಕನ್ನು ಅರಳಿಸಿಕೊಳ್ಳುತ್ತಾರೆ. ಇಲ್ಲದಿದ್ದರೆ ಅನಾರೋಗ್ಯಕರ ಆಲೋಚನೆಗಳಿಗೆ ತುತ್ತಾಗುತ್ತಾರೆ ಎಂದು ಡಾ. ಶಿವಮೂರ್ತಿ ಮುರುಘಾ ಶರಣರು ಹೇಳಿದರು.

ಶ್ರಾವಣ ಮಾಸದ ಅಂಗವಾಗಿ ಶ್ರೀಮಠದಲ್ಲಿ ಪ್ರತಿನಿತ್ಯ ಸಂಜೆ ನಡೆಯುವ ನೀವಿದ್ದಲ್ಲಿಯೇ ಶ್ರಾವಣ ದರ್ಶನ, ಬೌದ್ಧಿಕ ಯಾನ ಕಾರ್ಯಕ್ರಮದ ಎರಡನೇ ದಿನವಾದ ಬುಧವಾರ  ಜೀವನ ಮತ್ತು ವ್ಯಾಖ್ಯಾನ ವಿಷಯ ಕುರಿತು ಚಿಂತನೆ ನಡೆಸಿಕೊಟ್ಟರು.

ಜೀವನ ಅರ್ಥಪೂರ್ಣವಾದುದು. ಈ ಜೀವನ ಜಗತ್ತು ನಮಗೆ ನೀಡಿದ ಅಪೂರ್ವ ಸಂದರ್ಭ. ನಾವು ಮಾನವ ರೂಪ ತೊಟ್ಟು ಕೊಂಡಿದ್ದು ನಮ್ಮಲ್ಲಿ ಜೀವನ ಪ್ರೀತಿ ಬೆಳೆಸಿಕೊಳ್ಳ ಬೇಕು. ಯಾರು ಜೀವನವನ್ನು ಪ್ರೀತಿಸುವುದಿ ಲ್ಲವೋ ಅವರು ಜಗತ್ತನ್ನು ಪ್ರೀತಿಸುವುದಿಲ್ಲ ಎಂದರು.

ಜೀವನ ಎಂದರೆ ದೇವರನ್ನು ಕಾಣುವ ಒಂದು ದಾರಿ. ಧರ್ಮ ಮತ್ತು ದೇವರ ಬಗ್ಗೆ ಹೆಚ್ಚು ಮಾತನಾಡುವಂತಿಲ್ಲ. ಕಾರಣ ಅವು ಭಾವನಾತ್ಮಕವಾದವು ದೈವತ್ವದ ಪರಿಕಲ್ಪನೆಯಲ್ಲಿ ಚಿಂತನೆಯನ್ನು ಮಾಡಬೇಕು. ನನ್ನ ದೇವರು ಗುಡಿಸಲಿನಲ್ಲಿದ್ದಾರೆ ಎಂದು ವಿವೇಕಾನಂದರು ಹೇಳುತ್ತಾರೆ. ಮದರ್‍ತೆರೇಸಾ ಅವರಿಗೆ ಮಕ್ಕಳು ದೇವರು. ನನ್ನ ಪ್ರಕಾರ ಜೀವನ ಅಂದರೆ ಭೇದಿಸಲಾಗದ ರಹಸ್ಯ ಎಂದರು.

ಅಭದ್ರ ಜೀವನದಿಂದ ಸುಭದ್ರ ಜೀವನಕ್ಕೆ ಬರಬೇಕು. ಬಸವಾದಿ ಶರಣರು ಸ್ವಾಭಿಮಾನ ಪ್ರಧಾನ ಜೀವನ ಕಟ್ಟಿಕೊಟ್ಟರು. ಅಲ್ಲಿ ದುಡಿಯುವವರು ನೀಡುವವರು ಇದ್ದರು. ಸುಭದ್ರ ಜೀವನ ಸ್ವಾವಲಂಬಿ ಜೀವನ. ಇದರ ಆಚೆಗೆ ಸಮಾಜಮುಖಿ ಜೀವನ. ಸಮಷ್ಠಿ ಬದುಕಿನ ಉದ್ಧಾರಕ್ಕಾಗಿ ದುಡಿಯಬೇಕು. ಸಮಾಜಮುಖಿ ಜೀವನ ಸಮಷ್ಠಿ ಕಲ್ಯಾಣ. ಪ್ರತಿಯೊಬ್ಬರಲ್ಲೂ ಸಮೂಹ ಪ್ರಜ್ಞೆ ಇರಬೇಕು. ಇದರಾಚೆಗೆ ಕರ್ತವ್ಯ ಪ್ರಜ್ಞೆ, ಕಾಯಕ ಪ್ರಜ್ಞೆ ಬರಬೇಕು. ಕಾಯದಲ್ಲಿ ಕಾಂತಿ ಇರುತ್ತದೆ. ಕಾಯಕಕ್ಕೆ ಒಳಗಾದರೆ ಕಾಯ ಕಾಂತಿಯುತವಾಗುತ್ತದೆ. ದುಡಿಯುವ ಕೈಗಳು ಬೇಕು. ಇದರಿಂದ ಆರ್ಥಿಕವಾಗಿ ಬಲಿಷ್ಠ ದೇಶವನ್ನು ಕಟ್ಟಲು ಸಾಧ್ಯ. ಬಸವಣ್ಣನವರ ಸಿದ್ಧಾಂತವನ್ನು ಇಟ್ಟುಕೊಂಡರೆ ಭಾರತ ಬಲಿಷ್ಠವಾಗುತ್ತದೆ ಎಂದರು.

ಈ ಸಂದರ್ಭದಲ್ಲಿ ಅಥಣಿ ಗಚ್ಚಿನಮಠದ ಶ್ರೀ ಶಿವಬಸವ ಸ್ವಾಮಿಗಳು, ಚಿಲುಮೆ ರುದ್ರಸ್ವಾಮಿ ಮಠದ ಶ್ರೀ ಬಸವಕಿರಣ ಸ್ವಾಮಿಗಳು, ಸಾಧಕರುಗಳು, ಎಸ್.ಜೆ.ಎಂ. ವಿದ್ಯಾಪೀಠದ ಕಾರ್ಯದರ್ಶಿ ಎ.ಜೆ.ಪರಮಶಿವಯ್ಯ, ಕಾರ್ಯನಿರ್ವಹಣಾಧಿಕಾರಿ ಎಂ.ಜಿ.ದೊರೆಸ್ವಾಮಿ, ಆರ್.ಲಿಂಗರಾಜು ಮುಂತಾದವರಿದ್ದರು. ಜಮುರಾ ಕಲಾವಿದರು ಪ್ರಾರ್ಥಿಸಿದರು. ಬಸವರಾಜ ಶಾಸ್ತ್ರಿ ನಿರೂಪಿಸಿದರು.

error: Content is protected !!