ದಾವಣಗೆರೆ, ಅ. 26- ವಿಜಯ ದಶಮಿ ಹಬ್ಬವನ್ನು ನಗರದಲ್ಲಿ ಸಡಗರ-ಸಂಭ್ರಮದಿಂದ ಆಚರಿಸಲಾಯಿತು. ಸೋಮವಾರ ಸಂಜೆ ಬನ್ನಿ ಮುಡಿದ ಜನತೆ ಕುಟುಂಬ ಸಮೇತ ದೇವರ ದರ್ಶನಕ್ಕೆ ದಾಂಗುಡಿ ಇಟ್ಟಿದ್ದರಿಂದ ದೇವೀ ದೇವಾಲಯಗಳು ಸೇರಿದಂತೆ ಪ್ರಮುಖ ದೇವಾಲಯಗಳು ಭಕ್ತರಿಂದ ತುಂಬಿದ್ದವು.
ಕೊರೊನಾ ಹಿನ್ನೆಲೆಯಲ್ಲಿ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಪಾಡಿಕೊಳ್ಳುವಂತೆ ಸೂಚನಾ ಫಲಕಗಳು ಇದ್ದವಾದರೂ, ಭಕ್ತರು ಯಾವುದಕ್ಕೂ ಬೆಲೆ ನೀಡದೆ, ದೇವಿ ದರ್ಶನಕ್ಕೆ ಗುಂಪು ಗುಂಪಾಗಿ ಮುಗಿ ಬಿದ್ದ ದೃಶ್ಯ ಗಳು ಕಂಡು ಬಂದವು.
ನಗರದ ನಿಟುವಳ್ಳಿಯಲ್ಲಿ ಸಂಜೆ ಸ್ಥಳೀಯರು ಬನ್ನಿ ಮರಕ್ಕೆ ವಿಶೇಷ ಪೂಜೆ ಸಲ್ಲಿಸಿ, ಜೋಳದ ತೆನೆಯೊಂದಿಗೆ ಬನ್ನಿ ಮುಡಿದು, ಶ್ರೀ ದುರ್ಗಾಂಬಿಕಾ ದೇವಸ್ಥಾನ ಬಳಿ ಬಂದು ಪೂಜೆ ಸಲ್ಲಿಸಿ, ಮನೆಗಳಿಗೆ ತೆರಳಿ ಹಿರಿಯರಿಗೆ, ಸಂಬಂಧಿಗಳಿಗೆ ಬನ್ನಿ ನೀಡಿ, `ಬನ್ನಿ ಕೊಟ್ಟು ಬಂಗಾರದಂಗಿರೋಣ’ ಎನ್ನುತ್ತಾ ಸಂಭ್ರಮಿಸಿದರು.
ನಗರದ ಹಳೆ ಭಾಗದಲ್ಲಿ ಹಬ್ಬದ ಸಂಭ್ರಮ ಕಳೆಕಟ್ಟಿತ್ತು. ಚಿಕ್ಕ ಮಕ್ಕಳು, ಮಹಿಳೆಯರೆನ್ನದೆ ಕುಟುಂಬದವರೆಲ್ಲಾ ಹೊಸ ಬಟ್ಟೆ ಧರಿಸಿ ಬನ್ನಿ ಮಹಾಂಕಾಳಿ ದೇವಸ್ಥಾನಗಳಿಗೆ ತೆರಳಿ ಪೂಜೆ ಸಲ್ಲಿಸಿದರು. ಸಂಭ್ರಮದ ಆಯುಧ ಪೂಜೆ: ಭಾನುವಾರ ಆಯುಧ ಪೂಜಾ ಕಾರ್ಯಕ್ರಮಗಳೂ ನಗರದಲ್ಲಿ ಸಂಭ್ರಮದಿಂದ ನೆರವೇರಿದವು. ಗ್ಯಾರೇಜ್‌ಗಳು, ಕಚೇರಿಗಳು, ವಾಹನಗಳು ಹಾಗೂ ವಿವಿಧ ವಸ್ತುಗಳ ಶೋರೂಂಗಳಲ್ಲಿ ವಿಶೇಷ ಪೂಜೆ ನಡೆದವು.
ಹೂ ಬೆಲೆ ದಿಢೀರ್ ಏರಿಕೆ: ಆಯುಧ ಪೂಜೆ ಇದ್ದ ಭಾನುವಾರ ಹೂವಿನ ಬೆಲೆ ದಿಢೀರ್ ಏರಿಕೆಯಾಗಿತ್ತು. ಮಾರುಕಟ್ಟೆಯಲ್ಲಿ ಚಂಡಿ ಹೂ ಹಾಗೂ ಸೇವಂತಿಗೆ ಹೂಗೆ ಬೇಡಿಕೆ ಇತ್ತು. ಸೇವಂತಿಗೆ ಮಾರೊಂದಕ್ಕೆ 200, ಮಲ್ಲಿಗೆ 100 ರೂ.ಗಳಂತೆ ಮಾರಾಟವಾಯಿತು. ಸೈಕಲ್, ಬೈಕ್, ಕಾರು ಸೇರಿದಂತೆ ವಿವಿಧ ವಾಹನ ಗಳನ್ನು ಅಂದವಾಗಿ ಹೂವಿನಿಂದ ಸಿಂಗರಿಸಿ ಪೂಜಿಸಲಾಯಿತು.