ತಾಲ್ಲೂಕುಗಳಲ್ಲಿ ಕೋವಿಡ್ ನಿರ್ವಹಣೆಗೆ ಅಧಿಕಾರಿಗಳ ಬದಲಾವಣೆ: ಡಿಸಿ ಸೂಚನೆ

ಹರಿಹರ, ಹೊನ್ನಾಳಿ ಮತ್ತು ಜಗಳೂರು ತಾಲ್ಲೂಕುಗಳಲ್ಲಿ ಇನ್ನೂ ಹೆಚ್ಚಿನ ರೀತಿಯಲ್ಲಿ ಕೋವಿಡ್ ನಿರ್ವಹಣೆ ಆಗಬೇಕಿದೆ – ಮಹಾಂತೇಶ ಬೀಳಗಿ, ಜಿಲ್ಲಾಧಿಕಾರಿ

ದಾವಣಗೆರೆ, ಜು.22- ತಾಲ್ಲೂಕು ಕೇಂದ್ರಗಳಲ್ಲಿ ಪರಿಣಾಮಕಾರಿಯಾಗಿ ಕೋವಿಡ್ ನಿಯಂತ್ರಣ ಮತ್ತು ನಿರ್ವಹಣೆಯನ್ನು ಮಾಡಲು ಕೆಲ ಅಧಿಕಾರಿಗಳ ಬದಲಾವಣೆಯೊಂದಿಗೆ ಉತ್ತಮ ತಂಡಗಳನ್ನು ರಚಿಸಲಾಗುವುದು ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ತಿಳಿಸಿದರು.

ಜಿಲ್ಲಾಡಳಿತ ಕಚೇರಿಯಲ್ಲಿ ಕೋವಿಡ್ ನಿರ್ವಹಣೆ ಕುರಿತು ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಹಾಗೂ ಖಾಸಗಿ ವೈದ್ಯಕೀಯ ಕಾಲೇಜುಗಳ ಮುಖ್ಯಸ್ಥರೊಂದಿಗೆ ಏರ್ಪಡಿಸಲಾಗಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಹರಿಹರ, ಹೊನ್ನಾಳಿ ಮತ್ತು ಜಗಳೂರು ತಾಲ್ಲೂಕುಗಳಲ್ಲಿ ಇನ್ನೂ ಹೆಚ್ಚಿನ ರೀತಿಯಲ್ಲಿ ಪರಿಣಾಮಕಾರಿಯಾಗಿ ಕೋವಿಡ್ ನಿರ್ವಹಣೆ ಆಗಬೇಕು. ಈ ನಿಟ್ಟಿನಲ್ಲಿ ಕೆಲ ತಾಲ್ಲೂಕುಗಳ ಆರೋಗ್ಯಾಧಿಕಾರಿಗಳ ಬದಲಾವಣೆ ಬಗ್ಗೆ ಡಿಹೆಚ್‍ಓ ಮತ್ತು ಡಿಎಸ್‍ಓ ಜೊತೆ ಚರ್ಚಿಸಿ, ಸೂಕ್ತ ವೈದ್ಯರನ್ನು ನೇಮಿಸುವಂತೆ ತಿಳಿಸಿದರು.

ಎಸ್‍ಎಸ್ ಮತ್ತು ಜೆಜೆಎಂ ಮೆಡಿಕಲ್ ಕಾಲೇಜಿನ ಲ್ಯಾಬ್‍ಗಳಲ್ಲಿ ಕೋವಿಡ್ ಪರೀಕ್ಷೆ ವರದಿಗಳನ್ನು ಐಸಿಎಂಆರ್ ಪೋರ್ಟಲ್‍ಗೆ ಅಪ್‍ಡೇಟ್ ಮಾಡುವುದು ತಡವಾಗುತ್ತಿದೆ. ಈ ಬಗ್ಗೆ ಸಂಬಂಧಿಸಿದ ಆಡಳಿತಾಧಿಕಾರಿಗಳು ಕ್ರಮ ಕೈಗೊಂಡು ವಿಳಂಬ ಆಗದಂತೆ ಕ್ರಮ ವಹಿಸಬೇಕು. ವಿಳಂಬ ಆಗದಂತೆ ಕ್ರಮ ವಹಿಸಲು ಡಾಟಾ ಎಂಟ್ರಿ ಆಪರೇಟರ್‍ಗಳನ್ನು ನೀಡಲಾಗುವು ದು ಎಂದ ಅವರು ಪರೀಕ್ಷೆಗಳನ್ನು ಮಾಡುವುದು ಬಾಕಿ ಉಳಿಸಿಕೊಳ್ಳಬಾರದೆಂದು ತಿಳಿಸಿದರು.

ಕೋವಿಡ್ ಚಿಕಿತ್ಸೆಗೆ ಸಂಬಂಧಿಸಿದಂತೆ ಅಗತ್ಯವಿರುವ ವೈದ್ಯರನ್ನು ನೇಮಿಸಿಕೊಳ್ಳುವ ಸಂಬಂಧ ಇತ್ತೀಚೆಗೆ ಪಿಜಿ ಮುಗಿಸಿದವರನ್ನು ವೈದ್ಯರಾಗಿ  ನೇಮಿಸಿಕೊಳ್ಳುವಂತೆ ಡಿಹೆಚ್‍ಓ ಗೆ ಸೂಚಿಸಿದರು.    

ಲಕ್ಷಣ ಇಲ್ಲದವರೆಲ್ಲರ ಕೋವಿಡ್ ಪರೀಕ್ಷೆ ಮಾಡಿಸುವ ಬದಲು ಲಕ್ಷಣ ಇದ್ದವರ ಟೆಸ್ಟ್ ಮಾಡಿಸುವುದಕ್ಕೆ ಹೆಚ್ಚಿನ ಒತ್ತು ನೀಡಬೇಕು. ಲಕ್ಷಣ ಇಲ್ಲದವರಿಗೆ ಹೋಂ ಐಸೋಲೇಷನ್ ಮಾರ್ಗಸೂಚಿಯನ್ವಯ ಕ್ರಮ ಕೈಗೊಳ್ಳಬೇಕೆಂದು ಆರೋಗ್ಯಾಧಿಕಾರಿಗಳಿಗೆ ಸೂಚನೆ ನೀಡಿದರು.

ಸಭೆಯಲ್ಲಿ ಜಿ.ಪಂ ಸಿಇಓ ಪದ್ಮಾ ಬಸವಂತಪ್ಪ, ಕೋವಿಡ್ ನೋಡಲ್ ಅಧಿಕಾರಿ ಪ್ರಮೋದ್ ನಾಯಕ್, ಎಡಿಸಿ ಪೂಜಾರ ವೀರಮಲ್ಲಪ್ಪ, ಎಸಿ ಮಮತಾ ಹೊಸಗೌಡರ್, ಡಿಹೆಚ್‍ಓ ಡಾ.ರಾಘವೇಂದ್ರಸ್ವಾಮಿ, ಡಿಎಸ್ ಡಾ.ನಾಗರಾಜ್, ಡಿಎಸ್‍ಓ ಡಾ.ರಾಘವನ್, ಆರ್‍ಸಿಹೆಚ್ ಅಧಿಕಾರಿ ಡಾ.ಮೀನಾಕ್ಷಿ, ಡಾ. ಗಂಗಾಧರ್, ಡಾ.ಕಾಳಪ್ಪನವರ್, ಡಾ. ಪ್ರಸಾದ್ ಹಾಗೂ ಇತರರು ಉಪಸ್ಥಿತರಿದ್ದರು.

error: Content is protected !!