ಹರಿಹರ, ಜು.21- ಸಮುದಾಯದ ಸಹಭಾಗಿತ್ವದಿಂದ ಮಾತ್ರ ಕೊರೊನಾ ಮುಕ್ತ ಜಿಲ್ಲೆ ಮಾಡುವುದಕ್ಕೆ ಸಾಧ್ಯವಿದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅಭಿಪ್ರಾಯಪಟ್ಟರು.
ನಗರಸಭೆ ಸಭಾಂಗಣದಲ್ಲಿ ಕೊರೊನಾ ರೋಗ ತಡೆಗಟ್ಟಲು ಅಧಿಕಾರಿಗಳ ಬಳಿ ಮಾಹಿತಿಯನ್ನು ಪಡೆಯುವ ವಿಚಾರಕ್ಕೆ ನಡೆದ ಮಹತ್ವದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕಂಟೈನ್ಮೆಂಟ್ ಝೋನ್ ನಲ್ಲಿ ಸಾರ್ವಜನಿಕರಿಗೆ ಯಾವುದೇ ತೊಂದರೆ ಆಗದ ರೀತಿಯಲ್ಲಿ ವ್ಯವಸ್ಥೆ ಹೇಗೆ ಇದೆ, ಕ್ವಾರಂಟೈನ್ ನಲ್ಲಿ ಇರುವ ವ್ಯಕ್ತಿಗಳಿಗೆ ಮೂಲಭೂತ ಸೌಕರ್ಯಗಳ ಕಾರ್ಯವೈಖರಿ ಹೇಗೆ ಇದೆ ಮತ್ತು ಸಿಬ್ಬಂದಿ ಗಳು ಯಾವ ರೀತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಲ್ಯಾಬ್ ಟೆಕ್ನೀಷಿನ್ ಯಾವ ರೀತಿ ಕೆಲಸ ಮಾಡುತ್ತಿದ್ದಾರೆ ಎಂಬುದರ ಬಗ್ಗೆ ಅಧಿಕಾರಿಗಳ ಬಳಿ ಮಾಹಿತಿ ಪಡೆದರು.
ಕೊರೊನಾ ತಡೆಗಟ್ಟಲು ಜಿಲ್ಲಾಧಿಕಾರಿ, ಶಾಸಕರು, ಆರೋಗ್ಯ ಅಧಿಕಾರಿಗಳು, ನಗರಸಭೆ ಅಧಿಕಾರಿಗಳು, ಎಸ್ಪಿ, ತಹಶೀಲ್ದಾರ್, ವಿವಿಧ ಇಲಾಖೆ ಅಧಿಕಾರಿಗಳು ಮಾತ್ರ ಕೆಲಸವನ್ನು ಮಾಡಿದರೆ ಕೊರೊನಾ ಮುಕ್ತವಾಗುವುದಿಲ್ಲ.
ಸಮುದಾಯದ, ಸಾರ್ವಜನಿಕರ ಸಹಕಾರ ಮತ್ತು ಸಂಘಟನೆಯವರು, ನಗರಸಭೆ ಸದಸ್ಯರು, ಎನ್.ಜಿ.ಓ.ದವರು ಜೊತೆಯಲ್ಲಿ ಕೈ ಜೋಡಿಸಿದಾಗ ಮಾತ್ರ ಕೊರೊನಾ ಸೋಂಕು ಮುಕ್ತ ಮಾಡಬಹುದು ಎಂದು ಹೇಳಿದರು.
ಅಧಿಕಾರಿಗಳು ತಮಗೆ ವಹಿಸಿರುವ ಜವಾಬ್ದಾರಿಯನ್ನು ಉತ್ತಮ ರೀತಿಯಲ್ಲಿ ನಿಭಾಯಿಸುತ್ತಿದ್ದಾರೆ. ಆದರೆ, ಕ್ವಾರಂಟೈನ್ನಲ್ಲಿ ಇದುವ ರೆಗೆ ಸರಿಯಾಗಿ ಊಟ, ಬಿಸಿ ನೀರಿನ ವ್ಯವಸ್ಥೆ ಇಲ್ವಂತೆ. ಇದನ್ನು ಸರಿಪಡಿಸಿ ಎಂದು ಸೂಚನೆ ನೀಡಿದರು. ಆರೋಗ್ಯ ಅಧಿಕಾರಿ ಹನುಮನಾಯಕ, ಕರ್ತವ್ಯ ನಿರ್ಲಕ್ಷ್ಯದ ಬಗ್ಗೆ ದೂರುಗಳು ಕೇಳಿ ಬರುತ್ತಿವೆ. ಸರಿಯಾದ ರೀತಿ ಕರ್ತವ್ಯ ನಿಭಾಯಿಸಬೇಕು.
-ಎಸ್. ರಾಮಪ್ಪ, ಶಾಸಕರು.
ಅತಿ ಹೆಚ್ಚು ಪ್ರಕರಣಗಳು ಬಂದಿರುವ ಹರಿಹರದ ತಗ್ಗಿನಕೇರಿ ಬಡಾವಣೆಯ ಪ್ರತಿಯೊಂದು ಮನೆಗಳಲ್ಲಿ ಇರುವ ವ್ಯಕ್ತಿಗಳ ತಪಾಸಣೆ ಮಾಡಬೇಕು ಮತ್ತು ವೃದ್ಧರಲ್ಲಿ ಯಾವುದೇ ರೋಗ ಲಕ್ಷಣಗಳು ಕಂಡುಬಂದರೆ ಅವರಿಗೆ ಪ್ರತ್ಯೇಕ ಚಿಕಿತ್ಸೆ ಕೊಡಿಸುವ ವ್ಯವಸ್ಥೆ ಮಾಡಬೇಕು.
-ಮಹಾಂತೇಶ್ ಬೀಳಗಿ, ಜಿಲ್ಲಾಧಿಕಾರಿ
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ಮಾತನಾಡಿ, ಕಂಟೈನ್ಮೆಂಟ್ ಝೋನ್ ನಲ್ಲಿ ಕೆಲಸ ಮಾಡುವುದು ಸುಲಭವಲ್ಲ. ಆ ಸ್ಥಳದಲ್ಲಿ ಜಾಗೃತಿಯಿಂದ ಕೆಲಸ ಮಾಡಬೇಕು. ನಗರದಲ್ಲಿ ಯಾವುದೇ ಬಡಾವಣೆಗೆ ಹೋದರು ಸಹ ಪೊಲೀಸ್ ಇಲಾಖೆ ಸಿಬ್ಬಂದಿಗಳು ಸರಿಯಾಗಿ ಕರ್ತವ್ಯ ನಿರ್ವಹಣೆ ಮಾಡಬೇಕು. ಸಾರ್ವಜನಿ ಕರು ಯಾರೇ ಆಗಿರಲಿ ಕಾನೂನು ಪಾಲನೆ ಸರಿಯಾಗಿ ಮಾಡದೆ ಇದ್ದರೆ ಅಂತಹ ವೆಕ್ತಿಗಳ ಮೇಲೆ ನಿರ್ದಾಕ್ಷಿಣ್ಯ ಕ್ರಮ ಕೈಗೊಂಡು ದಂಡ ವಿಧಿಸಬೇಕು ಎಂದರು.
ಜಿಲ್ಲಾ ಸರ್ವೇಕ್ಷಣಾ ಅಧಿಕಾರಿ ಡಾ. ರಾಘವನ್ ಮಾತನಾಡಿ, ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಬೇಕಾದ ಅವಶ್ಯಕ ವಸ್ತುಗಳ ಬಳಕೆ ಮಾಡಿದರೆ ಕೊರೊನಾ ತಡೆಗಟ್ಟಲು ಸಾಧ್ಯವಿದೆ ಎಂದು ಹೇಳಿದರು.
ಸಿಇಓ ಪದ್ಮಾ ಬಸವಂತಪ್ಪ ಮಾತನಾಡಿ, ಹರಿಹರ ತಾಲ್ಲೂಕಿನಲ್ಲಿ ಕೊರೊನಾ ರೋಗವು ಹೆಚ್ಚು ಹರಡುತ್ತಿದ್ದು, ಇದನ್ನು ತಡೆಗಟ್ಟಲು ಸ್ಥಳೀಯ ಅಧಿಕಾರಿಗಳು ರಾತ್ರಿ ಹಗಲು ಶ್ರಮಿಸಲು ಮುಂದಾಗಬೇಕೆಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ತಹಶೀಲ್ದಾರ್ ಕೆ. ಬಿ. ರಾಮಚಂದ್ರಪ್ಪ, ಪೌರಾಯುಕ್ತರಾದ ಎಸ್. ಲಕ್ಷ್ಮೀ, ಜಿಲ್ಲಾ ಆರೋಗ್ಯ ಅಧಿಕಾರಿಗಳಾದ ರಾಘವೇಂದ್ರ, ನಟರಾಜ್, ತಾಲ್ಲೂಕು ಆರೋಗ್ಯ ಅಧಿಕಾರಿ ಡಾ. ಚಂದ್ರಮೋಹನ್, ಹನುಮನಾಯ್ಕ್, ವಿವಿಧ ಇಲಾಖೆಯ ಅಧಿಕಾರಿಗಳಾದ ಸಿ.ಎನ್. ರಮೇಶ್, ಡೊಂಕಪ್ಪ, ಪರಮೇಶ್ವರಪ್ಪ, ಗೋವರ್ಧನ್, ರೇಖಾ, ಸೇರಿದಂತೆ ಇತರರು ಹಾಜರಿದ್ದರು.