ದಾವಣಗೆರೆ, ಜು. 20- ಜಿಲ್ಲೆಯಲ್ಲಿ ಎರಡು ಮೆಡಿಕಲ್ ಕಾಲೇಜುಗಳು, ಉತ್ತಮ ಆಸ್ಪತ್ರೆಗಳಿದ್ದರೂ ಮರಣ ಪ್ರಮಾಣ ರಾಜ್ಯದ ಸರಾಸರಿಗಿಂತ ಹೆಚ್ಚಾಗಿದೆ. ಮರಣ ಪ್ರಮಾಣ ಕಡಿಮೆ ಮಾಡಲು ಸೂಕ್ತ ಕ್ರಮ ಕೈಗೊಳ್ಳಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ಎ.ಬಸವರಾಜ್ ಜಿಲ್ಲಾಡಳಿತಕ್ಕೆ ಸೂಚಿಸಿದ್ದಾರೆ.
ವಿಡಿಯೋ ಕಾನ್ಫರೆನ್ಸ್ ಮೂಲಕ ಸೋಮವಾರ ಜಿಲ್ಲಾಡಳಿತದೊಂದಿಗೆ ಸಭೆ ನಡೆಸಿದ ಅವರು, ರಾಜ್ಯದಲ್ಲಿ ಕೋವಿಡ್ ಮರಣ ಪ್ರಮಾಣ ಶೇ.2.1 ರಷ್ಟಿದ್ದರೆ ಜಿಲ್ಲೆಯಲ್ಲಿ ಶೇ.3.63 ಇದೆ. ಈ ಪ್ರಮಾಣವನ್ನು ಮುಂದಿನ ದಿನಗಳಲ್ಲಿ ತಗ್ಗಿಸಬೇಕು ಎಂದು ಹೇಳಿದರು.
ಮುಂದಿನ ದಿನಗಳಲ್ಲಿ ದಾವಣಗೆರೆಯಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾಗುವ ಸಂಭವ ಇದೆ ಎಂದು ಕೆಲ ತಜ್ಞರು ತಿಳಿಸಿದ್ದಾರೆ. ಆಸ್ಪತ್ರೆಯಲ್ಲಿ ಸಾಕಷ್ಟು ಬೆಡ್ಗಳು, ಆಂಬ್ಯು ಲೆನ್ಸ್, ವೆಂಟಿಲೇಟರ್ ಹೀಗೆ ಈಗಿನಿಂದಲೇ ಎಲ್ಲ ರೀತಿಯ ಸರ್ವ ಸಿದ್ದತೆಗಳನ್ನು ಮಾಡಿಕೊಳ್ಳುವಂತೆ ಹೇಳಿದರು.
ತಾಲ್ಲೂಕುಗಳ ಭೇಟಿಗೆ ಜಿಲ್ಲಾಡಳಿತಕ್ಕೆ ಸೂಚನೆ : ಡಿಸಿ, ಸಿಇಓ ಮತ್ತು ಎಸ್ಪಿ ತಂಡ ತಾಲ್ಲೂಕುಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಸೂಕ್ತ ನಿರ್ವಹಣಾ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ಎ. ಬಸವರಾಜ್ ಸೂಚಿಸಿದ್ದಾರೆ.
ಗ್ರಾಮೀಣ ಭಾಗದಲ್ಲಿ ಜನರು ಹೆಚ್ಚೆಚ್ಚು ಗುಂಪು ಸೇರದಂತೆ ಎಸ್ಪಿ ಯವರು ಕ್ರಮ ವಹಿಸಬೇಕು. ಸಾಮಾಜಿಕ ಅಂತರ ಕಾಪಾಡುವಂತೆ ಕ್ರಮ ಜರುಗಿಸಬೇಕು. ಜಿ.ಪಂ. ಸಿಇಓ ಗ್ರಾಮೀಣ ಭಾಗದಲ್ಲಿ ಟಾಸ್ಕ್ಫೋರ್ಸ್ ಸಮಿತಿಗಳಿಗೆ ಸೂಕ್ತ ನಿರ್ದೇಶನ ನೀಡಿ ಕೋವಿಡ್ ನಿಯಂತ್ರಣದಲ್ಲಿ ಮುಖ್ಯ ಪಾತ್ರ ವಹಿಸಬೇಕು. ಒಟ್ಟಾರೆಯಾಗಿ ಕಂಟೈನ್ ಮೆಂಟ್ ವಲಯಗಳಲ್ಲಿ ಹೆಚ್ಚಿನ ಕಟ್ಟುನಿಟ್ಟಿನ ಕ್ರಮ ಜರುಗಿಸುವಂತೆ ಸೂಚಿಸಿದರು.
29ರಲ್ಲಿ ಒಂದು ಮಾತ್ರ ಕೋವಿಡ್ ಮರಣ : ಜಿಲ್ಲೆಯಲ್ಲಿ ಈ ವರೆಗೆ 29 ಜನ ಸಾವನ್ನಪ್ಪಿದ್ದು, ಇದರಲ್ಲಿ 5 ಜನ ಹೊರ ಜಿಲ್ಲೆಯವರಾಗಿದ್ದಾರೆ. ಕೇವಲ ಒಂದು ಪ್ರಕರಣ ಮಾತ್ರ ಕೋವಿಡ್ ಮರಣವಾಗಿದೆ. ಉಳಿದವು ಕೋಮಾರ್ಬಿಡಿಟಿ ಇರುವಂತಹವಾಗಿವೆ.
ಸಿಜಿ ಆಸ್ಪತ್ರೆಯಲ್ಲಿ 140 ಬೆಡ್ಗಳ ಐಸೋಲೇಷನ್ ವಾರ್ಡ್ಗಳಲ್ಲಿ ಚಿಕಿತ್ಸೆ ನಡೆಯುತ್ತಿದೆ. 7 ಜನರು ವೆಂಟಿಲೇಟರ್ ಮೇಲೆ ಅವಲಂಬಿತರಾಗಿದ್ದರೆ 12 ಜನರು ಹೈಫ್ಲೋ ನ್ಯಾಸಲ್ ಆಕ್ಸಿಜನ್ ಪೂರೈಕೆಯಲ್ಲಿ ದ್ದಾರೆ. ಬಾಪೂಜಿ ಆಸ್ಪತ್ರೆಯಲ್ಲಿ ಒಬ್ಬರು ವೆಂಟಿಲೇಟರ್ ಅವಲಂಬಿತರಿದ್ದಾರೆ. ಎಸ್ಎಸ್ ಆಸ್ಪತ್ರೆಯಲ್ಲಿ 24 ಜನರು ಕೋವಿಡ್ ಚಿಕಿತ್ಸೆ ಪಡೆಯುತ್ತಿದ್ದಾರೆ.
– ಮಹಾಂತೇಶ ಬೀಳಗಿ, ಜಿಲ್ಲಾಧಿಕಾರಿ
ಸ್ವಚ್ಚತೆಗೆ ಗಮನ ಕೊಡಿ: ಮಳೆಗಾಲ ಚುರುಕಾಗಿರುವು ದರಿಂದ ನಗರದಲ್ಲಿ ರೋಗ ರುಜಿನಗಳು ಹೆಚ್ಚಾಗುವ ಸಂಭವ ಇರುತ್ತದೆ. ಪಾಲಿಕೆ ವತಿಯಿಂದ ನಗರ ಸ್ವಚ್ಚತೆಗೆ ಹೆಚ್ಚಿನ ಒತ್ತು ನೀಡಿ. ಪೌರಕಾರ್ಮಿಕರ ಆರೋಗ್ಯದ ಕಡೆಯೂ ಹೆಚ್ಚಿನ ಗಮನ ಹರಿಸಿ. ಅವರಿಗೆ ಸುರಕ್ಷತಾ ಸಾಮಗ್ರಿಗಳೊಂದಿಗೆ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಖಾದ್ಯಗಳನ್ನು ನೀಡುವಂತೆಯೂ, ಇನ್ನೊಮ್ಮೆ ನಗರದಾದ್ಯಂತ ಸ್ಯಾನಿಟೈಸ್ ಮಾಡಿಸುವಂತೆ ಪಾಲಿಕೆ ಆಯುಕ್ತರಿಗೆ ಸೂಚಿಸಿದರು.
ಮಾಸ್ಕ್ ಕಡ್ಡಾಯ: ಮಾಸ್ಕ್ ಧರಿಸದೇ ಇರುವವರ ವಿರುದ್ದ ದಂಡ ವಿಧಿಸಿ, ಗುಂಪು ಸೇರುವುದನ್ನು ತಡೆಯಬೇಕು. ಸಾಮಾಜಿಕ ಅಂತರ, ಮಾಸ್ಕ್ ಧಾರಣೆಯಿಂದ ಕೋವಿಡ್ ನಿಯಂತ್ರಣ ಸಾಧ್ಯವಿದ್ದು ಎಲ್ಲರೂ ಇದನ್ನು ಪಾಲಿಸುವಂತೆ ನಿಗಾ ವಹಿಸಬೇಕು ಎಂದರು. ಜಿಲ್ಲೆಯ ಮಳೆ ವಿವರ ಪಡೆದುಕೊಂಡ ಅವರು, ರೈತರಿಗೆ ಬಿತ್ತನೆ ಬೀಜ, ರಸಗೊಬ್ಬರ ಹಾಗೂಇತರೆ ವಸ್ತುಗಳ ಪೂರೈಕೆಯಲ್ಲಿ ಲೋಪ ಬಾರದಂತೆ ಕ್ರಮ ವಹಿಸುವಂತೆ ಹೇಳಿದರು.