ಹರಪನಹಳ್ಳಿ, ಅ. 22- ಕುಡಿಯುವ ನೀರಿನ ಸಮಸ್ಯೆ ನೀಗಿಸುವಂತೆ ಆಗ್ರಹಿಸಿ, ತಾಲ್ಲೂಕಿನ ಮತ್ತಿಹಳ್ಳಿಯಲ್ಲಿ ಸಾರ್ವಜನಿಕರು ಗ್ರಾಮ ಪಂಚಾಯ್ತಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ಮತ್ತಿಹಳ್ಳಿ ಗ್ರಾಮ ಪಂಚಾಯ್ತಿಯ ಎನ್. ಶೀರನಹಳ್ಳಿ, ಆಲದಹಳ್ಳಿ, ಹರಗಿಶೀರನಹಳ್ಳಿ, ಪುಣ್ಯನಗರ, ಮತ್ತಿಹಳ್ಳಿ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿ ಉಲ್ಬಣಗೊಂಡಿದೆ. ಮತ್ತಿಹಳ್ಳಿ ಗ್ರಾಮದಲ್ಲಿ 6 ರಿಂದ 8 ಸಾವಿರ ಜನಸಂಖ್ಯೆ ಇದ್ದು, 10 ಕೊಳವೆ ಬಾವಿಗಳಿದ್ದು, ಇದರಲ್ಲಿ ಕೇವಲ 4 ಕೊಳವೆ ಬಾವಿಗಳು ಮಾತ್ರ ಕಾರ್ಯ ನಿರ್ವಹಿಸುತ್ತಿವೆ. ಉಳಿದ 6 ಬೋರ್‌ವೆಲ್‌ಗಳು ಕಳೆದ 2 ತಿಂಗಳಿನಿಂದ ಸ್ಥಗಿತಗೊಂಡಿವೆ.
ಈ ಬಗ್ಗೆ ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಹಾಗು ಇತರೆ ಅಧಿಕಾರಿಗಳನ್ನು ಕುಡಿಯುವ ನೀರು ಕೊಡಿ ಎಂದು ಕೇಳಿದರೆ, ನಮ್ಮ ಪಂಚಾಯ್ತಿಯ 14ನೇ ಹಣಕಾಸು ಯೋಜನೆಯ ಅಕೌಂಟನ್ನು ಜಿ.ಪಂ. ಅಧಿಕಾರಿಗಳು ಲಾಕ್ ಮಾಡಿದ್ದಾರೆ. ಆದ್ದರಿಂದ ನಮಗೆ ಮೋಟಾರು, ಪಂಪ್ ದುರಸ್ತಿಗೆ ಯಾರೂ ಸಾಲ ಕೊಡುವುದಿಲ್ಲ ಎಂದು ಉತ್ತರಿಸುತ್ತಾರೆ ಎಂದು ಪ್ರತಿಭಟನಾಕಾರರು ಹೇಳುತ್ತಾರೆ.
ಗ್ರಾಮಪಂಚಾಯ್ತಿ ವ್ಯಾಪ್ತಿಯ 10 ಸಾವಿರ ಜನರಿಗೆ ಕುಡಿಯುವ ನೀರು ಸೇರಿದಂತೆ ಸ್ವಚ್ಛತೆ, ಬೀದಿ ದೀಪ ನಿರ್ವಹಣೆ, ಗ್ರಾಮಗಳ ಇತರೆ ಅಭಿವೃದ್ಧಿ ಕುಂಠಿತಗೊಂಡಿದೆ ಎಂದು ದೂರಿದರು.
ಗ್ರಾ.ಪಂ., ಜಿ.ಪಂ. ಅಧಿಕಾರಿಗಳ ಬೇಜವಾಬ್ದಾರಿಯಿಂದ ನಮ್ಮ ಪಂಚಾಯ್ತಿಗೆ ಈ ದುಸ್ಥಿತಿ ಬಂದಿದೆ. ಕಳೆದ ಎರಡು ತಿಂಗಳಿನಿಂದ ಈ ಸಂಬಂಧ ಗ್ರಾಮ ಪಂಚಾಯ್ತಿಗೆ, ತಾಲ್ಲೂಕು ಪಂಚಾಯ್ತಿಗೆ, ಜಿಲ್ಲಾ ಪಂಚಾಯ್ತಿಗೆ ಅಲೆದು ಅಲೆದು ಸಾಕಾಗಿ, ಅಂತಿಮವಾಗಿ ಪ್ರತಿಭಟನೆ ಹಮ್ಮಿಕೊಳ್ಳಬೇಕಾಗಿದೆ ಎಂದು ಪ್ರತಿಭಟನಾ ನಿರತರು ಹೇಳಿದ್ದಾರೆ.
ಒಂದೆರಡು ದಿನಗಳಲ್ಲಿ ಪಂಚಾಯ್ತಿಯ ಅಕೌಂಟ್ ಓಪನ್ ಮಾಡಿ ಕುಡಿಯುವ ನೀರು ಒದಗಿಸುವ ಮೋಟಾರುಗಳ ದುರಸ್ತಿ ಕಾರ್ಯ ಮಾಡದಿದ್ದರೆ, ಗ್ರಾಮ ಪಂಚಾಯ್ತಿಗೆ ಬೀಗ ಜಡಿದು ಉಗ್ರ ಹೋರಾಟ ಹಮ್ಮಿಕೊಳ್ಳ ಬೇಕಾಗುತ್ತದೆ ಎಂದು ಅವರು ಎಚ್ಚರಿಸಿದ್ದಾರೆ.
ನಿರ್ಗಮಿತ ಗ್ರಾ.ಪಂ. ಅಧ್ಯಕ್ಷೆ ಚೆನ್ನಮ್ಮ ರಾಮಣ್ಣ, ಮೈದೂರು ರಾಮಣ್ಣ, ಶೇಖರಪ್ಪ, ಎಂ. ಕೋಟೆಪ್ಪ, ಮರುಳಸಿದ್ದಪ್ಪ, ಸಿದ್ದಪ್ಪ, ಚಂದ್ರೇಗೌಡ, ಕೊಟ್ರೇಶ್, ಎರಿತಾತ ನಿಂಗಜ್ಜ, ಶಿವಣ್ಣ, ಕರಿಯವ್ವ, ಬಸಮ್ಮ, ಕೆ. ಸಿದ್ದಪ್ಪ, ಬಸವರಾಜ, ಶಿವಕುಮಾರ, ಕೊಟ್ರೇಶ, ಉಳ್ಳೆಳ್ಳೇರ ಕೊಟ್ರಪ್ಪ, ಕೆಂಚಪ್ಪ, ಹಾಲಪ್ಪ, ಮರಿಯಪ್ಪ ಹಾಗು ಇತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.