ಬಯಲಾಟ ಅಕಾಡೆಮಿ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಡಾ.ಎಂ.ಜಿ. ಈಶ್ವರಪ್ಪ
ದಾವಣಗೆರೆ, ಅ. 22- ಮನರಂಜನೆ ನೀಡುವ ಜೊತೆಗೆ ಜನರ ವ್ಯಕ್ತಿತ್ವ ವಿಕಸನ ಮಾಡುವ ಶಕ್ತಿ ಜಾನಪದ ಕಲೆಗಳಲ್ಲಿದೆ ಎಂದು ಜಾನಪದ ವಿದ್ವಾಂಸ ಡಾ.ಎಂ.ಜಿ. ಈಶ್ವರಪ್ಪ ಪ್ರತಿಪಾದಿಸಿದರು.
ನಗರದ ಕುವೆಂಪು ಕನ್ನಡ ಭವನದಲ್ಲಿ ಗುರುವಾರ ಕರ್ನಾಟಕ ಬಯಲಾಟ ಅಕಾಡೆಮಿ, ಬಾಗಲಕೋಟೆಯ 2019ನೇ ಸಾಲಿನ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಯಾವುದೇ ವಿಶ್ವವಿದ್ಯಾಲಯದ ಪದವಿ ಪಡೆಯದಿದ್ದರೂ ಜಾನಪದ ಕಲಾವಿದರು ಬಹುದೊಡ್ಡ ವಿದ್ವಾಂಸರು. ಇಂದು ಇಬ್ಬರು ಕಲಾವಿದರಿಗೆ ಪ್ರಶಸ್ತಿ ಪ್ರದಾನ ಜೊತೆ ನೀಡುತ್ತಿರುವ ಪ್ರಮಾಣ ಪತ್ರ ಕೇವಲ ಸಾಂಕೇತಿಕ ಮಾತ್ರ ಎಂದು ಹೇಳಿದರು.
ಶಿಕ್ಷಣವೆಂದರೆ ಏನು ಎಂಬುದನ್ನು ಮಹಾತ್ಮ ಗಾಂಧೀಜಿಯವರು ಹೆಡ್, ಹಾರ್ಟ್ ಮತ್ತು ಹ್ಯಾಂಡ್ ಎಂಬ ಮೂರು `ಹೆಚ್’ಗಳ ಮೂಲಕ ವಿವರಿಸಿದ್ದರು. ಶಿಕ್ಷಣ ಪಡೆಯಲು ಮೆದುಳು ಮುಖ್ಯ. ಪಡೆದ ಶಿಕ್ಷಣ ಹೃದಯಕ್ಕೆ ತಟ್ಟಬೇಕು. ನಂತರ ಕೈ ಮುಟ್ಟಿ ಕೆಲಸ ಮಾಡಬೇಕು. ಆದರೆ ಇಂದಿನ ಶಾಲಾ-ಕಾಲೇಜುಗಳು ಕೈ ಮುಟ್ಟದೆಯೇ ಕೆಲಸ ಮಾಡುವುದನ್ನು ತೋರಿಸುತ್ತವೆ. ಕೈ ಮುಟ್ಟದೆ ಕೆಲಸ ಮಾಡುವವರಿಗೆ ಇಂದು ಮರ್ಯಾದೆ ಹೆಚ್ಚಿದೆ. ಆದರೆ ಅದು ತಪ್ಪು ಎಂದು ತಜ್ಞರು ಹೇಳುತ್ತಿದ್ದಾರೆ. ಕೈ ಮುಟ್ಟಿ ಕೆಲಸ ಮಾಡುವುದೇ ಶ್ರೇಷ್ಟ ಕೆಲಸ ಎಂದು ಈಶ್ವರಪ್ಪ ಅಭಿಪ್ರಾಯಿಸಿದರು.
ಕಲಾವಿದರಾದ ಜಗಳೂರು ತಾಲ್ಲೂಕು ಸಿದ್ದಮ್ಮನಹಳ್ಳಿ ಎನ್.ರಂಗನಾಥ್ ಹಾಗೂ ಚಳ್ಳಕೆರೆ ವರವು ಗ್ರಾಮದ ಸಣ್ಣ ಬೋರಯ್ಯ ಅವರುಗಳಿಗೆ ಪ್ರಶಸ್ತಿ ಪ್ರದಾನ
ಕೆಲ ಸಂಘ-ಸಂಸ್ಥೆಗಳು ಮೂರು ಹೆಸರಿನಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸೌಲಭ್ಯ ಪಡೆದುಕೊಳ್ಳುತ್ತಿವೆ. ಇಲಾಖೆಯ ಸಹಾಯಕ ನಿರ್ದೇಶಕರು ಅದನ್ನು ಪತ್ತೆ ಹಚ್ಚಿ, ಎಲ್ಲಾ ಸೌಲಭ್ಯಗಳನ್ನು ನೈಜ ಕಲಾವಿದರಿಗೆ ಸಿಗುವಂತೆ ಮಾಡಲಿ.
– ಡಾ.ಹೆಚ್.ಎಸ್. ಮಂಜುನಾಥ ಕುರ್ಕಿ
ಬಯಲಾಟ ಬಹು ಜನರನ್ನು ಬೇಗ ಆಕರ್ಷಿಸುತ್ತದೆ. ಬಯಲಾಟದ ಕಲಾವಿದನಿಗೆ ಧ್ವನಿ ವರ್ಧಕದ ಅಗತ್ಯವಿಲ್ಲ. ದ್ವನಿಯೇ ವರ್ಧಕ, ಧ್ವನಿ ಹಾಗೂ ದೇಹಕ್ಕೆ ವ್ಯಾಯಾಮ ಮಾಡುವ ಅಗತ್ಯವೇ ಅವರಿಗಿರುವುದಿಲ್ಲ. ಈ ಕಲೆಯನ್ನು ಅವರು ಶಾಲಾ ಕಾಲೇಜುಗಳಲ್ಲಿ ಕಲಿತಿರುವುದಿಲ್ಲ. ಅವರ ಊರಿನ ಅಪ್ಪ, ಅಜ್ಜ, ಶಿಕ್ಷಕರ ಬಳುವಳಿಯಾಗಿರುತ್ತದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಡಾ.ಹೆಚ್.ಎಸ್. ಮಂಜುನಾಥ ಕುರ್ಕಿ, ಗ್ರಾಮೀಣ ಕಲೆಗಳನ್ನು ಉಳಿಸಿ, ಬೆಳೆಸಬೇಕಾದರೆ ಮೊದಲು ಕಲಾವಿದರನ್ನು ಉಳಿಸುವ ಜವಾಬ್ದಾರಿ ನಮ್ಮ ಮೇಲಿದೆ ಎಂದರು.
ಪ್ರಸ್ತುತ ದಿನಗಳಲ್ಲಿ ಕಲೆಗಳು ಶ್ರೀಮಂತವಾಗಿವೆ ಆದರೆ ಕಲಾವಿದರು ಬಡತನದ ಜೀವನ ನಡೆಸುತ್ತಿರುವ ದುಃಸ್ಥಿತಿ ಎದುರಾಗಿದೆ. ಕಲಾವಿದರು ಮಾತ್ರ ಜನಮಾನಸದಲ್ಲಿ ಉಳಿಯುತ್ತಾರೆಯೇ ಹೊರತು, ಶ್ರೀಮಂತ ವ್ಯಕ್ತಿ ಅಥವಾ ಅಧಿಕಾರಿಗಳಲ್ಲ ಎಂದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರವಿಚಂದ್ರ, ಕೊರೊನಾದಿಂದಾಗಿ ಕಲಾವಿದರು ಸಂಕಷ್ಟದಲ್ಲಿದ್ದಾರೆ. ಕಲಾವಿದರು ಉಳಿದರೆ ಮಾತ್ರ ಕಲೆ ಉಳಿಯುತ್ತದೆ. ಆದಷ್ಟು ಬೇಗ ಕೊರೊನಾ ಸಮಸ್ಯೆ ಬಗೆಹರಿಯಲಿ ಎಂದು ಆಶಿಸಿದರು.
ಸಾಹಿತಿ ಹೆಚ್.ಕೆ. ಸತ್ಯಭಾಮ, ನಾವೆಲ್ಲಾ ಕಲಾರೂಪಗಳನ್ನು ನೋಡಿಯೇ ಜೀವನ ರೂಪಿಸಿಕೊಳ್ಳುತ್ತಿದ್ದೆವು. ಇಂದಿನ ಮಕ್ಕಳಿಗೆ ಕಲಾ ಪ್ರಕಾರಗಳ ಅರಿವು ಅಗತ್ಯ ಎಂದರು.
ಸಾಹಿತಿ ಎನ್.ಟಿ. ಯರ್ರಿಸ್ವಾಮಿ, ಕಲಾವಿದರು ಭೌತಿಕ ಶ್ರೀಮಂತಿಕೆಗಿಂತ ಸಾಂಸ್ಕೃತಿಕ ಶ್ರೀಮಂತಿಕೆ ಸೃಷ್ಟಿ ಮಾಡಿಕೊಂಡಿದ್ದಾರೆ ಎಂದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಗೌರವ ಕಾರ್ಯದರ್ಶಿ ಬಿ.ದಿಳ್ಳೆಪ್ಪ, ಮೊಬೈಲ್, ಟಿವಿಗಳ ಹಾವಳಿಯಿಂದಾಗಿ ಕಲೆಗಳು ನಶಿಸುವ ಹಂತದಲ್ಲಿವೆ. ಸರ್ಕಾರ ವಿವಿಧ ಕಾರ್ಯಕ್ರಮಗಳಲ್ಲಿ ಕಲಾವಿದರಿಗೆ ಅವಕಾಶ ನೀಡುವ ಮೂಲಕ ಕಲೆ, ಕಲಾವಿದರನ್ನು ಪ್ರೋತ್ಸಾಹಿಸಬೇಕು ಎಂದರು. ಕನ್ನಡಪರ ಹೋರಾಟಗಾರ ಐರಣಿ ಬಸವರಾಜ್ ಮಾತನಾಡಿದರು. ಕರ್ನಾಟಕ ಬಯಲಾಟ ಅಕಾಡೆಮಿ ಸದಸ್ಯ ಸಂಚಾಲಕ ಎನ್.ಎಸ್. ರಾಜು ಕಾರ್ಯಕ್ರಮ ನಿರೂಪಿಸಿದರು.