ದತ್ತಿ ಉಪನ್ಯಾಸ , ಪುಸ್ತಕ ಲೋಕಾರ್ಪಣೆ, ಶ್ರೀ ಸಿದ್ಧಗಂಗಾ ಮಕ್ಕಳ ಲೋಕದ 11ನೇ ವಾರ್ಷಿಕೋತ್ಸವದಲ್ಲಿ ಕಸಾಪ ಜಿಲ್ಲಾಧ್ಯಕ್ಷ ಮಂಜುನಾಥ ಕುರ್ಕಿ
ದಾವಣಗೆರೆ, ಅ. 21- ಅವಶ್ಯಕತೆಗೆ ಅನುಗುಣವಾಗಿ ನಡೆಯುತ್ತಿರುವ ಜೀವನದಲ್ಲಿ ಮಕ್ಕಳಿಗೆ ಜ್ಞಾನದ ಜೊತೆ ಸಂಸ್ಕಾರ ಕಲಿಸುವ ತುರ್ತು ಅಗತ್ಯವಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಡಾ.ಹೆಚ್.ಎಸ್. ಮಂಜುನಾಥ ಕುರ್ಕಿ ಹೇಳಿದರು.
ನಗರದ ಕುವೆಂಪು ಕನ್ನಡ ಭವನದಲ್ಲಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಡಿಯಲ್ಲಿ ನಿನ್ನೆ ಹಮ್ಮಿಕೊಳ್ಳಲಾಗಿದ್ದ ದತ್ತಿ ಉಪನ್ಯಾಸ ಕಾರ್ಯಕ್ರಮ ಮತ್ತು ಪುಸ್ತಕ ಲೋಕಾರ್ಪಣೆ, ಶ್ರೀ ಸಿದ್ಧಗಂಗಾ ಮಕ್ಕಳ ಲೋಕದ 11ನೇ ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಸಂಬಂಧಗಳ ಕುರಿತು ಮಕ್ಕಳಿಗೆ ಪರಿಚಯ ಮಾಡಿಕೊಡಬೇಕಿದೆ. ಸಂಸ್ಕಾರದೊಟ್ಟಿಗೆ ಕೃತಜ್ಞತಾ ಮನೋಭಾವ ಬೆಳೆಸಬೇಕು. ಅಹಂಕಾರವಿಲ್ಲದ ಜ್ಞಾನವನ್ನು ಧಾರೆ ಎರೆದಲ್ಲಿ ಮಕ್ಕಳು ಸಮಾಜದ ಕೀರ್ತಿಗೆ ಪಾತ್ರರಾಗುತ್ತಾರೆ ಎಂದು ಸಲಹೆ ನೀಡಿದರು.
ಮೊಬೈಲ್ ಎಂಬ ಕೃತಕ ವಸ್ತುವನ್ನು ಬಳಸಬಾರದು ಎಂದು ಮಕ್ಕಳಿಗೆ ಹೇಳುತ್ತಿರುವ ಕಾಲಘಟ್ಟದಲ್ಲಿಯೇ ಶಿಕ್ಷಣಕ್ಕಾಗಿ ಅನಿವಾರ್ಯವಾಗಿ ಮಕ್ಕಳ ಕೈಯಲ್ಲಿ ಮೊಬೈಲ್ ಕೊಡುವ ಸನ್ನಿವೇಶ ಎದುರಾಗಿದೆ. ಮೊಬೈಲ್ ಕೇವಲ ಕಲಿಕೆಯ ಮಾಧ್ಯಮವಾಗಿ ಬಳಕೆಯಾಗಬೇಕು. ಇಲ್ಲದಿದ್ದರೆ ಮಕ್ಕಳು ಮೊಬೈಲ್ನಲ್ಲಿರುವುವೇ ನೈಜ ಜಗತ್ತು ಎಂದು ಭಾವಿಸಲಾರಂಭಿಸುತ್ತಾರೆ ಎಂದು ಎಚ್ಚರಿಸಿದರು.
ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ವಿರಕ್ತಮಠದ ಶ್ರೀ ಬಸವಪ್ರಭು ಸ್ವಾಮೀಜಿ ಮಾತನಾಡುತ್ತಾ, ನಿವೃತ್ತಿ ನಂತರ ಕೆಲವು ಲೇಖಕರು, ಬರಹಗಾರರು ರಾಜಕೀಯ ಸ್ಥಾನ ಮಾನ ಪಡೆಯಲು ಬಯಸುತ್ತಾರೆ. ಆದರೆ ಕೆ.ಎನ್. ಸ್ವಾಮಿ ಅವರು, ಶಿಕ್ಷಕ ವೃತ್ತಿಯಿಂದ ನಿವೃತ್ತರಾಗಿ, ಬಡ ಮಕ್ಕಳ ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಪ್ರಶಂಸಿಸಿದರು.
ಬರಹದಂತೆ ಬದುಕು ನಡೆಸುವ ಸಾಹಿತಿಗಳು ಮಾತ್ರ ಸಮಾಜದಲ್ಲಿ ದೊಡ್ಡ ವ್ಯಕ್ತಿಗಳಾಗಲು ಸಾಧ್ಯವಿದೆ. ಅಂತೆಯೇ ಮಾತು-ಕೃತಿ ಎರಡರಲ್ಲೂ ಒಂದಾಗಿರುವ ಸಜ್ಜನ ಸಾಹಿತಿ ಸ್ವಾಮಿ ಎಂದು ಬಣ್ಣಿಸಿದರು.
ಇದೇ ಸಂದರ್ಭದಲ್ಲಿ `ಕನ್ನಡ ಕುಲಭೂಷಣ ಕೆ.ಎನ್. ಸ್ವಾಮಿ’ ಪುಸ್ತಕ ಬಿಡುಗಡೆ ಮಾಡಲಾಯಿತು. ಕೃತಿಯ ಕುರಿತು ಮಾತನಾಡಿದ ಜಿಲ್ಲಾ ವರದಿಗಾರರ ಕೂಟದ ಅಧ್ಯಕ್ಷ ಜಿ.ಎಂ.ಆರ್. ಆರಾಧ್ಯ, ಎಲೆ ಮರೆಯ ಕಾಯಿಯಂತೆ 50 ವರ್ಷಗಳ ಸಾಮಾಜಿಕ ಸೇವೆಯಲ್ಲಿ ನಿರತರಾಗಿದ್ದರೂ ಪ್ರಚಾರ ಬಯಸದ ಕೆ.ಎನ್. ಸ್ವಾಮಿ ಅವರು ಎಲ್ಲರಿಗೂ ಮಾದರಿ ಎಂದರು.
`ಸಮಾಜ ಸೇವೆ’ ಕುರಿತು ಹಿರಿಯ ಸಾಹಿತಿ ಶ್ರೀಮತಿ ಹೆಚ್.ಕೆ. ಸತ್ಯಭಾಮ ಮಂಜುನಾಥ್ ಹಾಗೂ `ಶ್ರೀ ಸ್ವಾಮಿ ವಿವೇಕಾನಂದರು’ ಕುರಿತು ಶಿಕ್ಷಕಿ ಕು.ಜಿ.ಸಿ. ನಿರ್ಮಲ ದತ್ತಿ ಉಪನ್ಯಾಸ ನೀಡಿದರು.
ಶ್ರೀ ಸಿದ್ಧಗಂಗಾ ಮಕ್ಕಳ ಲೋಕದ ಸಂಸ್ಥಾಪಕ ಅಧ್ಯಕ್ಷ ಕೆ.ಎನ್. ಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕನ್ನಡ ಸಾಹಿತ್ಯ ಪರಿಷತ್ ದಾವಣಗೆರೆ ತಾಲ್ಲೂಕು ಅಧ್ಯಕ್ಷ ಬಿ.ವಾಮದೇವಪ್ಪ, ಸಿದ್ಧಗಂಗಾ ಮಕ್ಕಳ ಲೋಕದ ಗೌರವಾಧ್ಯಕ್ಷ ಡಾ.ಬಿ.ಎಸ್. ನಾಗಪ್ರಕಾಶ್,
ಶ್ರೀ ಸಿದ್ದಗಂಗಾ ವಿಜ್ಞಾನ ಪದವಿ ಪೂರ್ವ ಕಾಲೇಜು ನಿರ್ದೇಶಕ ಡಾ. ಡಿ.ಎಸ್. ಜಯಂತ್, ಪ್ರಾಂಶುಪಾಲರಾದ ಪ್ರಭಾವತಿ ಮತ್ತು ಇತರರು ಉಪಸ್ಥಿತರಿದ್ದರು. ಕೆ.ರಾಘವೇಂದ್ರ ನಾಯರಿ ಕಾರ್ಯಕ್ರಮ ನಿರೂಪಿಸಿದರು.