ಮಲೇಬೆನ್ನೂರು, ಅ.21- 10 ವರ್ಷಗಳ ನಂತರ ಕೊಮಾರನಹಳ್ಳಿಯ ಹೆಳವನಕಟ್ಟೆ ಶ್ರೀ ಲಕ್ಷ್ಮಿರಂಗನಾಥ ಸ್ವಾಮಿಯ ಐತಿಹಾಸಿಕ ಕೆರೆ ಬುಧವಾರ ಭರ್ತಿಯಾಗಿ ಕೋಡಿ ಬಿದ್ದಿದೆ.
ಕೆರೆ ಭರ್ತಿಯಾಗಿರುವುದಕ್ಕೆ ಹರ್ಷ ವ್ಯಕ್ತಪಡಿಸಿರುವ ಗ್ರಾಮಸ್ಥರು ಕೆರೆ ಅಭಿವೃದ್ಧಿ ಪಡಿಸಿ ಪ್ರವಾಸಿ ತಾಣವನ್ನಾಗಿ ಮಾಡಲು ಸರ್ಕಾರ ಹಾಗೂ ಜನಪ್ರತಿನಿಧಿಗಳು ಕಾಳಜಿ ವಹಿಸುವಂತೆ ಮನವಿ ಮಾಡಿದ್ದಾರೆ.
2009-10ರಲ್ಲಿ ಈ ಕೆರೆ ಮಳೆ ನೀರಿನಿಂದಲೇ ಭರ್ತಿಯಾಗಿ ಕೋಡಿ ಬಿದ್ದಿತ್ತು. ಆಗ ಗ್ರಾಮಸ್ಥರು ಕೆರೆಯಲ್ಲಿ ಶ್ರೀ ಲಕ್ಷ್ಮೀರಂಗನಾಥ ಸ್ವಾಮಿಯ ತೆಪ್ಪೋತ್ಸವವನ್ನು ಆಗಿನ ಶಾಸಕರಾಗಿದ್ದ ಬಿ.ಪಿ. ಹರೀಶ್ ಅವರ ನೇತೃತ್ವದಲ್ಲಿ ಬಹಳ ಸಂಭ್ರಮದಿಂದ ನಡೆಸಿದ್ದರು.
ತದನಂತರ ಕೆರೆ ಮಳೆ ನೀರಿನಿಂದ ಭರ್ತಿಯಾಗಿರಲಿಲ್ಲ. ಇದನ್ನು ಮನ ಗಂಡ ಗ್ರಾಮಸ್ಥರು ಕಳೆದ ವರ್ಷ ಮತ್ತು ಈ ವರ್ಷ ಭದ್ರಾ ಕಾಲುವೆ ನೀರನ್ನು ಪಂಪ್ಸೆಟ್ಗಳ ಮೂಲಕ ಕೆರೆಗೆ ಹರಿ ಸಿದ್ದರು. ಹಾಗಾಗಿ ಕೆರೆಯಲ್ಲಿ ನೀರಿನ ಪ್ರಮಾಣ ಹೆಚ್ಚಾಗಿತ್ತು.
ಇತ್ತೀಚೆಗೆ ಸುರಿದ ಮಳೆಯಿಂದಾಗಿ ಕೆರೆ ಹಿಂಭಾಗದ ಗುಡ್ಡ-ಸರಗಳಿಂದ ನೀರು ಹರಿದು ಬಂದಿದ್ದರಿಂದ ಕೆರೆ ಭರ್ತಿಯಾಗಿ ಈ ಭಾಗದ ಜನರಿಗೆ ಹರ್ಷ ತಂದಿದೆ.
ಬಾಗಿನ : ಕೆರೆ ಭರ್ತಿಯಾಗಿ ಕೋಡಿ ಬಿದ್ದಿರುವ ವಿಷಯ ತಿಳಿದ ತಕ್ಷಣ ತಹಶೀಲ್ದಾರ್ ಕೆ.ಬಿ. ರಾಮಚಂದ್ರಪ್ಪ ಅವರು ಆಗಮಿಸಿ, ಗಂಗಾ ಪೂಜೆ ಮಾಡಿ ಕೆರೆಗೆ ಬಾಗಿನ ಅರ್ಪಿಸಿದರು.
ಈ ಸಂದರ್ಭದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಹರಿಹರ ತಾಲ್ಲೂಕಿನಲ್ಲಿಯೇ ಅತಿ ದೊಡ್ಡ ಕೆರೆ ಇದಾಗಿದ್ದು, 10 ವರ್ಷಗಳ ನಂತರ ಭರ್ತಿಯಾಗಿರುವುದು ನನಗೂ ಸಂತಸ ತಂದಿದೆ.
ಕೆರೆ ತುಂಬಿರುವುದರಿಂದ ಕೆರೆಯ ಸುತ್ತಮುತ್ತಲಿನ ಹತ್ತಾರು ಹಳ್ಳಿಗಳ ರೈತರಿಗೆ ಮತ್ತು ಪ್ರಾಣಿ, ಪಕ್ಷಿಗಳಿಗೆ, ಜಾನುವಾರುಗಳಿಗೆ ಅನುಕೂಲವಾಗಲಿದ್ದು, ಈ ಕೆರೆ ಪ್ರತಿ ವರ್ಷ ಭರ್ತಿಯಾಗಲಿ ಎಂದು ರಂಗನಾಥಸ್ವಾಮಿಯಲ್ಲಿ ಪ್ರಾರ್ಥಿಸಿದರು.
ಕೊರೊನಾ ಸಂಪೂರ್ಣ ನಿಯಂತ್ರಣಕ್ಕೆ ಬಂದ ನಂತರ ತೆಪ್ಪೋತ್ಸವ ಮಾಡೋಣ ಎಂದು ಗ್ರಾಮಸ್ಥರಿಗೆ ಭರವಸೆ ನೀಡಿದರು.
ಕೆರೆಯ ಹಿನ್ನೀರಿನಲ್ಲಿ ಬೆಳೆಗಳು ಮುಳುಗಡೆ ಆಗಿದ್ದರೆ ಅಂತಹ ರೈತರು ನಾಡ ಕಛೇರಿಗೆ ಅರ್ಜಿ ಸಲ್ಲಿಸಿ, ಈ ಬಗ್ಗೆ ಜಿಲ್ಲಾಧಿಕಾರಿಗಳ ಜೊತೆ ಚರ್ಚಿಸಿ ಪರಿಹಾರ ಕೊಡಿಸಲು ಪ್ರಯತ್ನಿಸುತ್ತೇನೆಂದರು.
ರಥೋತ್ಸವಕ್ಕೆ ಸಮ್ಮತಿ : ನಾಡಹಬ್ಬ ದಸರಾ ಅಂಗವಾಗಿ ಕೊಮಾರನಹಳ್ಳಿಯಲ್ಲಿ ಇದೇ ದಿನಾಂಕ 26ರಂದು ಶ್ರೀ ಲಕ್ಷ್ಮಿ ರಂಗನಾಥ ಸ್ವಾಮಿಯ ರಥೋತ್ಸವ ಆಚರಿಸಲು ಒಪ್ಪಿಗೆ ನೀಡಿದ ತಹಶೀಲ್ದಾರ್ ರಾಮಚಂದ್ರಪ್ಪ ಅವರು ಷರತ್ತುಗಳನ್ನು ಹಾಕಿದರು. 100ಕ್ಕಿಂತ ಹೆಚ್ಚು ಜನ ಸೇರುವಂತಿಲ್ಲ. ಮಾಸ್ಕ್, ಸಾಮಾಜಿಕ ಅಂತರ ಕಡ್ಡಾಯವಾಗಿರಬೇಕು ಮತ್ತು ಹಬ್ಬ ಆಚರಣೆ ಸರಳವಾಗಿರಬೇಕೆಂದರು.
ಮೈ ಮರೆಯಬೇಡಿ : ಕೊರೊನಾ ಕಡಿಮೆ ಆಗಿದೆ ಎಂದು ಯಾರೂ ಮೈಮರೆಯಬೇಡಿ. ಫೆಬ್ರವರಿ ವೇಳೆಗೆ ಕೊರೊನಾ ಸಂಪೂರ್ಣ ಇಳಿಮುಖವಾಗಬಹುದೆಂದು ತಜ್ಞರು ಹೇಳಿದ್ದಾರೆ. ಅಲ್ಲಿಯವರೆಗೆ ಎಚ್ಚರಿಕೆಯಿಂದ ಇರಬೇಕೆಂದು ತಹಶೀಲ್ದಾರ್ ರಾಮಚಂದ್ರಪ್ಪ ಮನವಿ ಮಾಡಿದರು.
ಎಪಿಎಂಸಿ ಸದಸ್ಯ ಜಿ. ಮಂಜುನಾಥ್ ಪಟೇಲ್, ಉಪ ತಹಶೀಲ್ದಾರ್ ಆರ್. ರವಿ, ಕಂದಾಯ ನಿರೀಕ್ಷಕ ಸಮೀರ್, ಗ್ರಾಮ ಲೆಕ್ಕಾಧಿಕಾರಿ ಕೊಟ್ರೇಶ್ ಸುಭಾನಿ, ದೇವಸ್ಥಾನದ ಕಾರ್ಯದರ್ಶಿ ಧರ್ಮಾಚಾರ್, ಅರ್ಚಕರಾದ ಗುರುರಾಜಚಾರ್, ಮಂಜುನಾಥಚಾರ್, ಗ್ರಾಮದ ವೀರಬಸಪ್ಪ, ಯು. ಪರಮೇಶ್ವರಪ್ಪ, ಸಿಂಗಟಗೆರೆ ರಂಗಪ್ಪ, ಮಡಿವಾಳರ ಚಂದ್ರಪ್ಪ, ಪಟೇಲ್ ನವೀನ್, ಎನ್.ಪಿ. ಪರಮೇಶ್ವರನಾಯ್ಕ, ಐರಣಿ ಮೂರ್ತಿ, ಪಿ. ರಾಜಪ್ಪ, ಸತ್ಯಳ್ಳರ ಹಾಲೇಶ್, ಪಾರಿ ಮನೋಹರ್, ಟಿ. ಸಂತೋಷ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.