ದಾವಣಗೆರೆ, ಜು.16- ತಮಗೆ ಲಭಿಸಬೇಕಾದ ಶಿಷ್ಯ ವೇತನಕ್ಕೆ ಆಗ್ರಹಿಸಿ ನಗರದ ಜಜಮು ವೈದ್ಯಕೀಯ ಮಹಾವಿದ್ಯಾಲಯದ ಸ್ನಾತಕೋತ್ತರ ಮತ್ತು ಗೃಹ ವೈದ್ಯ ವಿದ್ಯಾರ್ಥಿಗಳು ಕೈಗೊಂಡಿರುವ ಅನಿರ್ದಿಷ್ಟಾವಧಿ ಮುಷ್ಕರವು ಇಂದು 17ನೇ ದಿನಕ್ಕೆ ಕಾಲಿಟ್ಟಿದ್ದು, ನಗರದ ಜಿಲ್ಲಾಡಳಿತ ಭವನದ ಮುಂದೆ ಮುಷ್ಕರ ನಡೆಸಲಾಯಿತು.
ಶ್ರೀ ಜಯದೇವ ಮುರುಘರಾಜೇಂದ್ರ ವೃತ್ತದಲ್ಲಿ ಮುಷ್ಕರ ನಡೆಸುತ್ತಿದ್ದ ವಿದ್ಯಾರ್ಥಿಗಳು ಇಂದು ಮುಷ್ಕರ ತೀವ್ರಗೊಳಿಸಿ, ಜಿಲ್ಲಾಡಳಿತ ಭವನದ ಸಭಾಂಗಣದ ಮೆಟ್ಟಿಲುಗಳ ಮೇಲೆ ಕುಳಿತು ಧರಣಿ ಮಾಡಿದರು. ಇಷ್ಟು ದಿನವಾದರೂ ಸರ್ಕಾರ ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರಲ್ಲದೇ, ಸಚಿವ ಡಾ. ಸುಧಾಕರ್ ಅವರು ನಮ್ಮ ಸಮಸ್ಯೆ ವಿಚಾರವಾಗಿ ಮಾತನಾಡುವವರೆಗೂ ನಾವುಗಳು
ಜಿಲ್ಲಾಧಿಕಾರಿ ಕಚೇರಿ ಆವರಣದಿಂದ ಹೊರ ಹೋಗುವುದಿಲ್ಲ ಎಂದು ಪ್ರತಿಭಟನಾ ನಿರತ ವಿದ್ಯಾರ್ಥಿಗಳು ಬಿಗಿಪಟ್ಟು ಹಿಡಿದಿದ್ದರು.
ವಿದ್ಯಾರ್ಥಿಗಳ ಮಾತಿಗೆ ಡಿಸಿ ಮುನಿಸು: ಮುಷ್ಕರದ ಸ್ಥಳಕ್ಕಾಗಮಿಸಿದ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅವರು ವಿದ್ಯಾರ್ಥಿಗಳ ಮನವೊಲಿ ಸಲು ಪ್ರಯತ್ನಿಸಿದರು. ವಿದ್ಯಾರ್ಥಿಗಳು ಆಡಿದ ಮಾತಿಗೆ ಮುನಿಸುಗೊಂಡ ಪ್ರಸಂಗವೂ ನಡೆಯಿತು.
ಮುಷ್ಕರ ತಾತ್ಕಾಲಿಕ ಹಿಂಪಡೆದ ವಿದ್ಯಾರ್ಥಿಗಳು : ಜೆಜೆಎಂ ವೈದ್ಯಕೀಯ ಕಾಲೇಜಿನ ಸ್ನಾತಕೋತ್ತರ ಮತ್ತು ಗೃಹ ವೈದ್ಯ ವಿದ್ಯಾರ್ಥಿಗಳ 16 ತಿಂಗಳ ಶಿಷ್ಯ ವೇತನ ನೀಡಲು ಸರ್ಕಾರ ಒಪ್ಪಿಗೆ ಸೂಚಿಸಿರುವ ಹಿನ್ನೆಲೆಯಲ್ಲಿ ವೈದ್ಯ ವಿದ್ಯಾರ್ಥಿಗಳು ತಮ್ಮ ಮುಷ್ಕರವನ್ನು ತಾತ್ಕಾಲಿಕವಾಗಿ ಹಿಂಪಡೆದಿದ್ದಾರೆ.
ಜಿಲ್ಲಾಡಳಿತ ಭವನದ ಮುಂದೆ ಇಂದು ಬೆಳಿಗ್ಗೆಯಿಂದ ಮುಷ್ಕರ ನಡೆಸುತ್ತಿದ್ದ ವಿದ್ಯಾರ್ಥಿಗಳು ಸಂಜೆ ಅಹೋರಾತ್ರಿ ಮುಷ್ಕರಕ್ಕೆ ನಿರ್ಧರಿಸಿ ರಾತ್ರಿ ಸುಮಾರು 9 ಗಂಟೆವರೆಗೂ ಬಿಗಿಪಟ್ಟು ಬಿಟ್ಟಿರಲಿಲ್ಲ. ನಂತರ ಪ್ರತಿಭಟನಾ ಸ್ಥಳಕ್ಕಾಗಮಿಸಿದ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ಅವರುಗಳು ಸರ್ಕಾರದ ನಿರ್ಧಾರವನ್ನು ಮೌಖಿಕವಾಗಿ ತಿಳಿಸಿ ಭರವಸೆ ನೀಡಿದ್ದಾರೆ.
ಶಿಷ್ಯ ವೇತನ ಸಿಗದಿದ್ದರೆ ಪುನಃ ಮುಷ್ಕರ : ಸರ್ಕಾರ ಜೂನ್ 2020ರವರೆಗೆ ಅಂದರೆ 16 ತಿಂಗಳ ಶಿಷ್ಯ ವೇತನ ಕೊಡಲು ಒಪ್ಪಿಗೆ ನೀಡಿದೆ. ನಮಗೆ ಲಿಖಿತವಾಗಿ ಅದು ದೊರಕಬೇಕು. ಮುಂದಿನ ಶಿಷ್ಯ ವೇತನ ಯಾರು ಕೊಡಬೇಕೆನ್ನುವ ವಿಚಾರವಾಗಿ ತಿಳಿದು ಬಂದಿಲ್ಲ. ಹೀಗಾಗಿ ಮುಷ್ಕರವನ್ನು ತಾತ್ಕಾಲಿಕವಾಗಿ ಕೈ ಬಿಟ್ಟಿದ್ದೇವೆ. ಬರುವ ಸೋಮವಾರದೊಳಗಾಗಿ ಈ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಸಿಗಬೇಕು. ಇಲ್ಲವಾದರೆ ಪುನಃ ಮುಷ್ಕರ ನಡೆಸಲಾಗುವುದು. ಅಲ್ಲಿಯ ತನಕ ಕೋವಿಡ್ ಸೇವೆ ಹೊರತುಪಡಿಸಿ ಒಪಿಡಿ ಹಾಗೂ ತುರ್ತು ಸೇವೆಗಳಿಂದ ದೂರ ಉಳಿಯುವುದಾಗಿ ವೈದ್ಯ ವಿದ್ಯಾರ್ಥಿ ಡಾ. ಹರೀಶ್ ತಿಳಿಸಿದ್ದಾರೆ.
ನಾನು ನಿಮ್ಮ ವಿಚಾರದಲ್ಲಿ ಪ್ರಾಮಾಣಿಕವಾಗಿ ಪ್ರಯತ್ನ ಮಾಡುತ್ತಿದ್ದೇನೋ ಇಲ್ಲವೋ ಎಂದು ಕೇಳಿದ ಜಿಲ್ಲಾಧಿಕಾರಿಗಳಿಗೆ ವಿದ್ಯಾರ್ಥಿಗಳು ನಿಮ್ಮ ಮೇಲೆ ನಂಬಿಕೆ ಇಲ್ಲ ಎಂದು ಹೇಳಿದರು.
ಈ ಮಾತಿನಿಂದ ಜಿಲ್ಲಾಧಿಕಾರಿಗಳು ಮುನಿಸುಗೊಂಡು ನಿಮ್ಮ ಮೇಲೆ ಕ್ರಮ ಕೈಗೊಳ್ಳುತ್ತೇನೆ ಎಂದು ಹೇಳಿ ತಮ್ಮ ಕಚೇರಿಯತ್ತ ಸಾಗಿದರು.
ವಾಗ್ವಾದ: ಜಿಲ್ಲಾಡಳಿತ ಭವನದ ಆವರಣದಲ್ಲಿ ಮುಷ್ಕರದ ವೇಳೆ ಪೊಲೀಸರು ಮತ್ತು ವಿದ್ಯಾರ್ಥಿಗಳ ನಡುವೆ ವಾಗ್ವಾದ ನಡೆಯಿತು. ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಬಂದು ಸಮಸ್ಯೆ ಆಲಿಸಲಿ ಎಂದು ವಿದ್ಯಾರ್ಥಿಗಳು ಭವನದ ಆವರಣದಲ್ಲಿ ಪ್ರತಿಭಟನೆಗೆ ಮುಂದಾದರು.
ಈ ವೇಳೆ ಕೆಲ ವಿದ್ಯಾರ್ಥಿಗಳನ್ನು ಗೇಟ್‌ನಿಂದ ಹೊರ ಬಿಡದ ಹಿನ್ನೆಲೆಯಲ್ಲಿ ಗೇಟ್ ಮುಂ ಭಾಗವೇ ಆ ವಿದ್ಯಾರ್ಥಿಗಳು ಪ್ರತಿಭಟನೆಗೆ ಕುಳಿತರು. ಆಗ ಪೊಲೀಸರು ಆಗಮಿಸಿದಾಗ ವಾಗ್ವಾದ ನಡೆಯಿತು. ಕೊನೆಗೆ ಜಿಲ್ಲಾಡಳಿತ ಭವನದ ಮೆಟ್ಟಲು ಗಳ ಮೇಲೆ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.
100ಕ್ಕೆ 100 ಶಿಷ್ಯ ವೇತನ: ಡಿಸಿ : ವೈದ್ಯ ವಿದ್ಯಾರ್ಥಿಗಳ ಸಮಸ್ಯೆಯ ಬಗ್ಗೆ ಅರಿವಿದೆ. ಸರ್ಕಾರಕ್ಕೆ ಅವರ ಸಮಸ್ಯೆ ತಿಳಿಸುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ.
100ಕ್ಕೆ 100 ರಷ್ಟು ಶಿಷ್ಯ ವೇತನ ದೊರಕಲಿದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ವಿಶ್ವಾಸ ವ್ಯಕ್ತಪಡಿಸಿದರು.
ತಮ್ಮನ್ನು ಭೇಟಿಯಾದ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಸರ್ಕಾರದ ಸೂಚನೆ ಮೇರೆಗೆ ಜೆಜೆಎಂ ವೈದ್ಯಕೀಯ ಕಾಲೇಜಿನ ಆಡಳಿತ ಮಂಡಳಿಯೊಂದಿಗೆ ಚರ್ಚೆ ಮಾಡಿದ್ದೇನೆ. ವೈದ್ಯಕೀಯ ಶಿಕ್ಷಣ ಸಚಿವರೊಂದಿಗೆ ಮಾತನಾಡಿದ್ದೇನೆ. ಅವರು ಆಡಳಿತ ಮಂಡಳಿ ಜೊತೆ ಚರ್ಚಿಸಿದ್ದಾರೆ ಎಂದು ತಿಳಿಸಿದರು.
ಪ್ರತಿಭಟನೆ ನಡೆಸುತ್ತಿರುವ ವಿದ್ಯಾರ್ಥಿಗಳ ವಿರುದ್ಧ ಕಾನೂನು ಕ್ರಮಕೈಗೊಳ್ಳಲು ಅವಕಾಶವಿದೆ. ಆದರೆ, ಅದು ಕೊನೆಯ ಕ್ರಮ. ಅಲ್ಲಿಯವರೆಗೆ ಹೋಗುವುದಿಲ್ಲ ಎಂದು ಜಿಲ್ಲಾಧಿಕಾರಿಗಳು ಸ್ಪಷ್ಟಪಡಿಸಿದರು.