16ನೇ ದಿನಕ್ಕೆ ಮುಂದುವರೆದ ವೈದ್ಯ ವಿದ್ಯಾರ್ಥಿಗಳ ಮುಷ್ಕರ

ದಾವಣಗೆರೆ, ಜು.14- ಶಿಷ್ಯ ವೇತನಕ್ಕೆ ಆಗ್ರಹಿಸಿ ನಗರದಲ್ಲಿ ಜೆಜೆಎಂ ಮೆಡಿಕಲ್ ಕಾಲೇಜಿನ ವೈದ್ಯ ವಿದ್ಯಾರ್ಥಿಗಳು ಕೈಗೊಂಡಿರುವ ಅನಿರ್ದಿಷ್ಟಾವಧಿ ಮುಷ್ಕರ ಇಂದು 16ನೇ ದಿನಕ್ಕೆ ಕಾಲಿಟ್ಟಿದೆ.

ನಗರದ ಶ್ರೀ ಜಯದೇವ ಮುರುಘರಾಜೇಂದ್ರ ವೃತ್ತದಲ್ಲಿ ಮುಷ್ಕರ ಹೂಡಿರುವ ವಿದ್ಯಾರ್ಥಿಗಳು, ಹೋರಾಟದ ತೀವ್ರ ಸ್ವರೂಪವಾಗಿ ಜಿಲ್ಲಾಸ್ಪತ್ರೆಯಲ್ಲಿ ಕಳೆದ ವಾರದಿಂದ ಕೋವಿಡ್ ಸೇವೆ ಹೊರತುಪಡಿಸಿ ಒಪಿಡಿ ಸೇವೆ ಸ್ಥಗಿತಗೊಳಿಸಿದ್ದಲ್ಲದೇ, ಇದೀಗ ತುರ್ತು ವೈದ್ಯಕೀಯ ಸೇವೆಗಳಿಂದಲೂ ದೂರ ಉಳಿದಿದ್ದಾರೆ.

ಕಾಲೇಜು ಆಡಳಿತ ಮಂಡಳಿಯೊಂದಿಗೆ ಚರ್ಚಿಸಿ ಸಮಸ್ಯೆ ಬಗೆಹರಿಸುವಂತೆ ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ಜಿಲ್ಲಾಧಿಕಾರಿ ಗಳಿಗೆ ಸೂಚಿಸಿರುವ ಮಧ್ಯೆಯೂ ವಿದ್ಯಾರ್ಥಿ ಗಳು ಹೋರಾಟ ಮುಂದುವರೆಸಿದ್ದಾರೆ.

ಕಳೆದ 16 ತಿಂಗಳಿನಿಂದ ಶಿಷ್ಯ ವೇತನ ಸಿಗದೇ ಮನೆಯಲ್ಲಿ ತುಂಬಾ ಸಮಸ್ಯೆಯಾಗಿದೆ. ದೈನಂದಿನ ಖರ್ಚಿಗೂ ಕಷ್ಟಪಡುವಂತಾಗಿದೆ. ಶಿಷ್ಯ ವೇತನ ನೀಡುವ ಬಗ್ಗೆ ಸಂಬಂಧಪಟ್ಟವರು ಲಿಖಿತವಾಗಿ ಭರವಸೆ ನೀಡುವವರೆಗೂ ನಮ್ಮ ಮುಷ್ಕರ ಕೈಬಿಡುವುದಿಲ್ಲ ಎಂದು ವಿದ್ಯಾರ್ಥಿಗಳು ಪಟ್ಟು ಹಿಡಿದಿದ್ದಾರೆ.

ಸೆಲೆಬ್ರಿಟಿಗಳ ಬೆಂಬಲ: ವೈದ್ಯ ವಿದ್ಯಾರ್ಥಿಗಳ ಈ ಹೋರಾಟಕ್ಕೆ ಚಿತ್ರನಟ ಚೇತನ್, ಕ್ರಿಕೆಟಿಗ ವಿನಯ್ ಕುಮಾರ್, ಸಂಗೀತ ನಿರ್ದೇಶಕ ರಘು ದೀಕ್ಷಿತ್ ಸೇರಿದಂತೆ ಹಲವರು ಬೆಂಬಲ ಸೂಚಿಸಿದ್ದಾರೆ. 

ನಮ್ಮ ಸಮಸ್ಯೆ ಸೆಲೆಬ್ರಿಟಿಗಳು ಹಾಗೂ ಜನಸಾಮಾನ್ಯರಿಗೆ ಅರ್ಥವಾಗುತ್ತಿದೆ. ಆಡಳಿತ ನಡೆಸುತ್ತಿರುವ ಸರ್ಕಾರಕ್ಕೆ ಮಾತ್ರ ಅರ್ಥವಾಗುತ್ತಿಲ್ಲ ಎಂದು ಪ್ರತಿಭಟನಾ
ನಿರತ ವಿದ್ಯಾರ್ಥಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

error: Content is protected !!