ದ್ವಿತೀಯ ಪಿಯು: ಶೇ.64.09 ಫಲಿತಾಂಶ

19ನೇ ಸ್ಥಾನಕ್ಕೇರಿದ ದಾವಣಗೆರೆ, ಕಲಾ ವಿಭಾಗದಲ್ಲಿ ಶೇ. 34.92 ಕಡಿಮೆ ಫಲಿತಾಂಶ

ದಾವಣಗೆರೆ, ಜು.14- ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಜಿಲ್ಲೆಗೆ ಶೇ. 64.09ರಷ್ಟು ಫಲಿತಾಂಶ ಬಂದಿದ್ದು, ರಾಜ್ಯದ ಪಟ್ಟಿಯಲ್ಲಿ 19ನೇ ಸ್ಥಾನ ಲಭಿಸಿದೆ.  

ಕಳೆದ ವರ್ಷ ಶೇ.62.53 ರಷ್ಟು ಫಲಿತಾಂಶ ಪಡೆಯುವ ಮೂಲಕ 22ನೇ ಸ್ಥಾನದಲ್ಲಿತ್ತು.  2018ರಲ್ಲಿ ಶೇ.63.29ರಷ್ಟು  ಫಲಿತಾಂಶದಿಂದ 23ನೇ ಸ್ಥಾನ ಪಡೆದಿತ್ತು. ಕಳೆದ ವರ್ಷ ಒಂದು ಸ್ಥಾನ ಏರಿಕೆ ಕಂಡಿದ್ದ ಜಿಲ್ಲೆ  ಈ ವರ್ಷ ಮತ್ತಷ್ಟು ಸುಧಾರಣೆ ಕಂಡಿದೆ.

ಪ್ರಸಕ್ತ ವರ್ಷ ಪರೀಕ್ಷೆಗೆ ಹಾಜರಾಗಿದ್ದ 16219 ವಿದ್ಯಾರ್ಥಿಗಳ ಪೈಕಿ 10395 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ವಿಜ್ಞಾನ ವಿಭಾಗದಲ್ಲಿ ಅತಿ ಹೆಚ್ಚು ಶೇ.82.82ರಷ್ಟು ಉತ್ತಮ ಫಲಿತಾಂಶ ಬಂದಿದ್ದರೆ,  ಕಲಾ ವಿಭಾಗದಲ್ಲಿ ಕೇವಲ ಶೇ.34.92ರಷ್ಟು ಫಲಿತಾಂಶ ಬಂದಿದೆ.

ಒಟ್ಟಾರೆ ಜಿಲ್ಲೆಯಲ್ಲಿ ಕಲಾ ವಿಭಾಗದಲ್ಲಿ, 4104 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು 1,433 ವಿದ್ಯಾರ್ಥಿಗಳು ಪಾಸಾಗಿದ್ದು ಶೇ.34.92 ಫಲಿತಾಂಶ ಲಭಿಸಿದೆ. ವಾಣಿಜ್ಯ ವಿಭಾಗದಲ್ಲಿ 4,589 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು 2,729 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇ.59.47 ಫಲಿತಾಂಶ ಲಭಿಸಿದೆ. ವಿಜ್ಞಾನ ವಿಭಾಗದ ಪರೀಕ್ಷೆ ಬರೆದ  7,526 ವಿದ್ಯಾರ್ಥಿಗ ಪೈಕಿ 6,233 ವಿದ್ಯಾರ್ಥಿಗಳು ಪಾಸಾಗಿದ್ದು ಶೇ.82.82 ಫಲಿತಾಂಶ ಲಭಿಸಿದೆ.

ಹುಡುಗಿಯರೇ ಮೇಲುಗೈ:  ಪರೀಕ್ಷೆ ಬರೆದ 8,997 ಹುಡುಗರಲ್ಲಿ 4,711 ಹುಡುಗರು ಉತ್ತೀರ್ಣರಾದರೇ 10,389 ಹುಡುಗಿಯರಲ್ಲಿ 6,580 ಜನರು ಉತ್ತೀ ರ್ಣರಾಗುವುದರ ಮೂಲಕ ಜಿಲ್ಲೆಯಲ್ಲಿ ಹುಡುಗಿಯರೇ ಮೇಲುಗೈ ಸಾಧಿಸಿದ್ದಾರೆ.

ನಗರ ಪ್ರದೇಶdಲ್ಲಿ  ಪರೀಕ್ಷೆ ಬರೆದ 13,286 ವಿದ್ಯಾರ್ಥಿಗಳಲ್ಲಿ 8,840 ವಿದ್ಯಾರ್ಥಿಗಳು ಉತ್ತೀರ್ಣರಾಗುವ ಮೂಲಕ ಶೇ.66.54ರಷ್ಟು ಫಲಿತಾಂಶ ಲಭಿಸಿದೆ.

ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ ಶೇ.53.02ರಷ್ಟು ಫಲಿತಾಂಶ ಬಂದಿದ್ದು, ಪರೀಕ್ಷೆ ಎದುರಿಸಿದ 2933 ವಿದ್ಯಾರ್ಥಿಗಳ ಪೈಕಿ  1555 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

ಅನುಷಾ, ಸಂಜನಾ, ಅಮಿನಾ ಟಾಪರ್ಸ್

ವಿಜ್ಞಾನ ವಿಭಾಗದಲ್ಲಿ ನಗರದ ಸರ್ ಎಂ.ವಿ. ವಿಜ್ಞಾನ ಕಾಲೇಜಿನ ಎಸ್. ಅನುಷಾ 589 ಅಂಕಗ ಳೊಂದಿಗೆ ಜಿಲ್ಲೆಗೆ ಪ್ರಥಮರಾಗಿದ್ದಾರೆ. 

ಭೌತಶಾಸ್ತ್ರ 100, ಜೀವಶಾಸ್ತ್ರ 100, ಗಣಿತ 100, ರಸಾಯನ ಶಾಸ್ತ್ರ 99, ಕನ್ನಡ 98 ಮತ್ತು ಇಂಗ್ಲಿಷ್‍ನಲ್ಲಿ 92 ಅಂಕ  ಅನುಷಾ  ಪಡೆದಿದ್ದಾರೆ. 

ನಗರದ ಆರ್.ಜಿ. ಪಿಯು ಕಾಲೇಜಿನ ಐ.ಪಿ. ಸಂಜನಾ 584 ಅಂಕ ಪಡೆದು ವಾಣಿಜ್ಯ ವಿಭಾಗದಲ್ಲಿ ಜಿಲ್ಲೆಗೆ ಮೊದಲಿಗರಾಗಿದ್ದಾರೆ.  ಇಂಗ್ಲೀಷ್ ವಿಷಯ ದಲ್ಲಿ 94, ಸಂಸ್ಕೃತ-100, ಅರ್ಥಶಾಸ್ತ್ರ-97, ವಾಣಿಜ್ಯ ಶಾಸ್ತ್ರ-97, ಲೆಕ್ಕಶಾಸ್ತ್ರ- 100, ಸಂಖ್ಯಾ ಶಾಸ್ತ್ರದಲ್ಲಿ 96 ಅಂಕ ಸೇರಿ ಒಟ್ಟು 584 ಅಂಕಗಳನ್ನು ಸಂಜನಾ ಪಡೆದಿದ್ದಾರೆ.

ಕಲಾ ವಿಭಾಗದಲ್ಲಿ ಜಗಳೂರು ನಳಂದ ಕಾಲೇಜಿನ ಸೈಯದ್ ಅಮಿನಾ 552 ಅಂಕ ಪಡೆಯುವ ಮೂಲಕ ಜಿಲ್ಲೆಗೆ ಪ್ರಥಮರಾಗಿದ್ದಾರೆ. ಉಳಿದಂತೆ  ಸಿದ್ದಗಂಗಾ ವಿಜ್ಞಾನ ಪದವಿ ಪೂರ್ವ ಕಾಲೇಜಿನ ವಿ. ನಾಗಸಾಯಿ, ಸರ್ ಎಂವಿ ಕಾಲೇಜಿನ ಆರ್. ಸುಮುಖ್, ಎಸ್.ಎಸ್. ಚಿರಂತನ್ ಅವರುಗಳು 588 ಅಂಕ ಪಡೆದು ದ್ವಿತೀಯ ಸ್ಥಾನ ಪಡೆದಿದ್ದಾರೆ.

ವಿ. ನಾಗಸಾಯಿ. ಕನ್ನಡ 96, ಇಂಗ್ಲೀಷ್ 94, ಭೌತಶಾಸ್ತ್ರ 99, ರಸಾಯನ ಶಾಸ್ತ್ರ 99, ಗಣಿತ 100, ಜೀವಶಾಸ್ತ್ರ 100 ಅಂಕ ಪಡೆದಿದ್ದಾರೆ.  ಆರ್. ಸುಮುಖ ಇಂಗ್ಲಿಷ್ 91, ಭೌತಶಾಸ್ತ್ರ 100, ರಸಾಯನ ಶಾಸ್ತ್ರ 99, ಗಣಿತ 100, ಜೀವಶಾಸ್ತ್ರ 99, ಸಂಸ್ಕೃತದಲ್ಲಿ 99 ಅಂಕ ಪಡೆದಿದ್ದಾರೆ. 

ಚಿರಂತನ್, ಇಂಗ್ಲೀಷ್ 94, ಕನ್ನಡ 97, ಭೌತಶಾಸ್ತ್ರ 99, ರಸಾಯನ ಶಾಸ್ತ್ರ 99, ಗಣಿತ 100, ಜೀವಶಾಸ್ತ್ರ 99 ಅಂಕಗಳೊಂದಿಗೆ ಉತ್ತೀರ್ಣರಾಗಿದ್ದಾರೆ. 

error: Content is protected !!