ಜಗಳೂರು, ಅ.20- ಕೊರೊನಾ ಬಗ್ಗೆ ನಿರ್ಲಕ್ಷ್ಯ ಸಲ್ಲದು. ಪ್ರತಿ ಮನೆ ಮನೆಗೂ ಜಾಗೃತಿ ಮೂಡಿಸುವ ಕೆಲಸ ಮಾಡಬೇಕಿದೆ. ಕಡ್ಡಾಯವಾಗಿ ಮಾಸ್ಕ್ ಧರಿಸಿ ಸಾಮಾಜಿಕ ಅಂತರ ಕಾಪಾಡುವ ಮೂಲಕ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು ಎಂದು ಸಿವಿಲ್ ಪ್ರಥಮ ದರ್ಜೆ ನ್ಯಾಯಾಲಯದ ನ್ಯಾಯಾಧೀಶರಾದ ಜಿ. ತಿಮ್ಮಯ್ಯ ಹೇಳಿದರು.
ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ಕೊರೊನಾ ಜಾಗೃತಿ ಜಾಥಾ ವಾಹನಕ್ಕೆ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.
ಸಮಾಜದಲ್ಲಿ ಪ್ರತಿಯೊಬ್ಬ ನಾಗರಿಕರೂ ಸಹ ವಾರಿಯರ್‌ಗಳಾಗಿ ಕೊರೊನಾ ಬಗ್ಗೆ ಜಾಗೃತಿ ಮೂಡಿಸುವ ಮೂಲಕ ತಮ್ಮ ಮೂಲಭೂತ ಕರ್ತವ್ಯವನ್ನು ಮೆರೆಯಬೇಕು ಎಂದರು.
ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಹೆಚ್.ನಾಗರಾಜ್ ಮಾತನಾಡಿ, ತಾಲ್ಲೂಕಿನಲ್ಲಿ ಇದುವರೆಗೂ 1500 ಸಕ್ರಿಯ ಕೊರೊನಾ ಕೇಸ್‌ಗಳಿದ್ದು, ಅದರಲ್ಲಿ 1000 ಕ್ಕೂ ಹೆಚ್ಚು ಗುಣಮುಖರಾಗಿದ್ದು, ಈವರೆಗೆ 15 ಜನರು ಮೃತ ಪಟ್ಟಿದ್ದಾರೆ. ಗ್ರಾಮೀಣ ಭಾಗದಲ್ಲಿ ಇನ್ನು ಜಾಗೃತಿ ಅಗತ್ಯವಿದೆ ಎಂದರು.
ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಮಲ್ಲಾನಾಯ್ಕ ಮಾತನಾಡಿ, ಮಾಸ್ಕ್ ಧರಿಸದಿದ್ದರೆ ದಂಡ ಖಚಿತ. ಆದರೆ ದಂಡವೇ ಪರಿಹಾರವಲ್ಲ, ಪ್ರತಿಯೊಬ್ಬರು ತಮ್ಮ ಜವಾಬ್ದಾರಿ ಅರಿತು ಕೊರೊನಾ ಸಂಕಷ್ಟವನ್ನು ದೂರ ಮಾಡಬೇಕು ಎಂದರು.
ಈ ಸಂದರ್ಭದಲ್ಲಿ ವಕೀಲ ಸಂಘದ ಅಧ್ಯಕ್ಷ ಎಚ್. ಬಸವರಾಜಪ್ಪ, ಮಾಜಿ ಅಧ್ಯಕ್ಷ ಬಸವರಾ ಜಪ್ಪ. ಪೊಲೀಸ್ ಸಬ್ ಇನ್‌ಸ್ಪೆಕ್ಟರ್ ಉಮೇಶ್ ಬಾಬು, ಮೇಲ್ವಿಚಾರಕಿ ಶಶಿಕಲಾ ಶಾಂತಮ್ಮ ಸೇರಿದಂತೆ ವಕೀಲರ ಸಂಘದ ಕಾರ್ಯದರ್ಶಿ ತಿಪ್ಪೇಸ್ವಾಮಿ ಮತ್ತು ವಕೀಲರಾದ ಶ್ರೀನಿವಾಸ್, ಓಬಳೇಶ್, ಆರ್. ಲಕ್ಷ್ಮಣ್, ಕರಿಬಸಯ್ಯ, ಮಲ್ಲಿಕಾರ್ಜುನಪ್ಪ ಮತ್ತಿತರರು ಉಪಸ್ಥಿತರಿದ್ದರು.