ಅರ್ಥಪೂರ್ಣ ರಾಜ್ಯೋತ್ಸವ

ಅರ್ಥಪೂರ್ಣ ರಾಜ್ಯೋತ್ಸವ - Janathavaniದಾವಣಗೆರೆ, ಅ.20- ಕೋವಿಡ್ ನಿಯಂತ್ರಣ ಮಾರ್ಗ ಸೂಚಿ ಹಾಗೂ ಚುನಾವಣಾ ಮಾದರಿ ನೀತಿ ಸಂಹಿತೆಯನ್ನು ಪಾಲಿಸಿಕೊಂಡು ಈ ಬಾರಿಯ ಕನ್ನಡ ರಾಜ್ಯೋತ್ಸವವನ್ನು ಜಿಲ್ಲೆಯಲ್ಲಿ ಸರಳ ಹಾಗೂ ಅರ್ಥಪೂರ್ಣವಾಗಿ ಆಚರಿಸ ಲಾಗುವುದು ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ತಿಳಿಸಿದರು.

ನಗರದ ಜಿಲ್ಲಾಡಳಿತ ಭವನದ ತುಂಗಭದ್ರಾ ಸಭಾಂಗಣದಲ್ಲಿ  ಇಂದು ಏರ್ಪಾಡಾಗಿದ್ದ ಕನ್ನಡ ರಾಜ್ಯೋತ್ಸವ ಆಚರಣೆಯ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಈ ಬಾರಿಯ ಕನ್ನಡ ರಾಜ್ಯೋತ್ಸವ ಪ್ರತಿಬಾರಿಗಿಂತ ಭಿನ್ನವಾಗಿರಲಿದೆ.  ಹೊರಾಂಗಣದಲ್ಲಿ ಏರ್ಪಡಿಸುವಂತಹ ಕಾರ್ಯಕ್ರಮಗಳಿಗೆ ಸಂಬಂಧಿಸಿದಂತೆ ಕೋವಿಡ್ ನಿಯಂತ್ರಣಕ್ಕಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಅನೇಕ ನಿಯಮಗಳನ್ನು ರೂಪಿಸಿ ಮಾರ್ಗಸೂಚಿ ಹೊರಡಿಸಿವೆ.

ಅಲ್ಲದೇ, ಆಗ್ನೇಯ ಪದವೀಧರ ಕ್ಷೇತ್ರಕ್ಕೂ ಚುನಾವಣೆ ಪ್ರಕ್ರಿಯೆ ನಡೆದಿರುವುದರಿಂದ ಚುನಾವಣಾ ಮಾದರಿ ನೀತಿ ಸಂಹಿತೆ ಜಾರಿಯಲ್ಲಿದ್ದು, ಇದನ್ನೂ ಪಾಲಿಸಬೇಕಿದೆ. ಹೀಗಾಗಿ ಆದಷ್ಟು ಮುಂಜಾಗ್ರತೆ ಕ್ರಮಗಳನ್ನು ಅನುಸರಿಸಿಕೊಂಡು ಕನ್ನಡ ತಾಯಿಯ ಹಬ್ಬವನ್ನು ನವೆಂಬರ್ 1ರಂದು ಸರಳ ಹಾಗೂ ಅರ್ಥಪೂರ್ಣವಾಗಿ ಆಚರಿಸಲಾಗುವುದು ಎಂದರು.

ಕಾರ್ಯಕ್ರಮ ನಿಮಿತ್ಯ ಅಂದು ಬೆಳಿಗ್ಗೆ 8 ಗಂಟೆಗೆ ಕನ್ನಡ ತಾಯಿ ಭುವನೇಶ್ವರಿ ದೇವಿಯ ಮೆರವಣಿಗೆ ಪ್ರಾರಂಭವಾಗಲಿದ್ದು, 6 ಕಲಾತಂಡಗಳು ಹಾಗೂ ಸಾಮಾಜಿಕ ಅಂತರ ಕಾಯ್ದುಕೊಂಡು ಮೆರವಣಿಗೆ ನಡೆಸಲಾಗುವುದು.  ಬೆಳಿಗ್ಗೆ 10 ಗಂಟೆಗೆ ಕ್ರೀಡಾಂಗಣದಲ್ಲಿ ರಾಷ್ಟ್ರ ಧ್ವಜಾರೋಹಣ ಸಮಾರಂಭ ನೆರವೇರಲಿದೆ.

ಮಾದರಿ ನೀತಿ ಸಂಹಿತೆಯನ್ವಯ ಚುನಾವಣಾ ಆಯೋಗದ ಸೂಚನೆಗಳನ್ನು ಪಾಲಿಸುವ ನಿಟ್ಟಿನಲ್ಲಿ   ಸ್ತಬ್ಧ ಚಿತ್ರ ಪ್ರದರ್ಶನ ಹಾಗೂ ಅಭಿವೃದ್ಧಿಪರ ಭಾಷಣ ಇರುವುದಿಲ್ಲ. ಮಕ್ಕಳ ಪಾಲ್ಗೊಳ್ಳುವಿಕೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಇರುವುದಿಲ್ಲ. ರಾಜ್ಯೋತ್ಸವದಂದು ಹಾಗೂ ಇದರ ಮುನ್ನಾದಿನದಂದು ಜಿಲ್ಲೆಯ ಎಲ್ಲಾ ಸರ್ಕಾರಿ, ಅರೆ ಸರ್ಕಾರಿ ಕಟ್ಟಡಗಳು, ಹೋಟೆಲ್‍ಗಳು ಕನ್ನಡ ಪ್ರೇಮಿಗಳು ತಮ್ಮ ಕಟ್ಟಡಗಳಿಗೆ ಹಳದಿ ಹಾಗೂ ಕೆಂಪು ವಿದ್ಯುತ್ ದೀಪಾಲಂಕಾರ ಕೈಗೊಳ್ಳಬೇಕು ಎಂದು ಅವರು ಮನವಿ ಮಾಡಿದರು.

ನಗರದಲ್ಲಿನ ಎಲ್ಲ ಅಂಗಡಿ, ಸಂಸ್ಥೆಗಳ ನಾಮಫಲಕಗಳನ್ನು ಕಡ್ಡಾಯವಾಗಿ ಕನ್ನಡಮಯಗೊಳಿಸಬೇಕು. ಈ ನಿಟ್ಟಿನಲ್ಲಿ ನವೆಂಬರ್ ತಿಂಗಳಿನಲ್ಲಿಯೇ ಚಾಲನೆ ನೀಡಲು ಸೂಕ್ತ ಕ್ರಮ ಕೈಗೊಳ್ಳಬೇಕು. ಎಸ್‍ಎಸ್‍ಎಲ್‍ಸಿ ಪರೀಕ್ಷೆಯ ಕನ್ನಡ ವಿಷಯದಲ್ಲಿ 125ಕ್ಕೆ 125 ಅಂಕ ಗಳಿಸಿದವರನ್ನು ಗುರುತಿಸಿ ಅಂತಹವರನ್ನು ಜಿಲ್ಲಾಡಳಿತ ಸನ್ಮಾನ ಮಾಡಬೇಕು ಎಂದು ಕನ್ನಡ ಸಂಘಟನೆಯ ಪ್ರತಿನಿಧಿಗಳು ಒತ್ತಾಯಿಸಿದರು.   ಕನ್ನಡ ವಂಶದ ಮೊದಲ ದೊರೆ ಮಯೂರ ವರ್ಮನ ಪುತ್ಥಳಿಯನ್ನು ಜಿಲ್ಲಾ ಕೇಂದ್ರದಲ್ಲಿಯೇ ಸ್ಥಾಪಿಸಲು ಜಿಲ್ಲಾಡಳಿತ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಮನವಿ ಸಲ್ಲಿಸಿದರು.  ಇದಕ್ಕೆ ಸ್ಪಂದಿಸಿದ ಜಿಲ್ಲಾಧಿಕಾರಿಗಳು ಕನ್ನಡ ಸಂಘಟನೆಗಳ ಮನವಿಯನ್ನು ಪುರಸ್ಕರಿಸಲಾಗುವುದು ಎಂದರು.

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪದ್ಮಾ ಬಸವಂತಪ್ಪ, ಅಪರ ಜಿಲ್ಲಾಧಿಕಾರಿ ಪೂಜಾರ್ ವೀರಮಲ್ಲಪ್ಪ, ಉಪವಿಭಾಗಾಧಿಕಾರಿ ಮಮತಾ ಹೊಸಗೌಡರ್, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರಾದ ನಜ್ಮಾ, ನಗರಪಾಲಿಕೆ ಆಯುಕ್ತ ವಿಶ್ವನಾಥ್ ಮುದಜ್ಜಿ, ಡಿವೈಎಸ್ಪಿ ತಾಮ್ರಧ್ವಜ  ಮತ್ತಿತರರು ಭಾಗವಹಿಸಿದ್ದರು.

error: Content is protected !!