ಬೆಂಬಲ ಬೆಲೆಯಡಿ ಖರೀದಿ ವಿಳಂಬವಾದರೆ ದಾವೆ ಎಚ್ಚರಿಕೆ

ದಾವಣಗೆರೆ, ಅ.19- ಕೇಂದ್ರ ಸರ್ಕಾರವೇ ಘೋಷಿಸಿರುವಂತೆ 2020-21ರ ಕೃಷಿ ಉತ್ಪನ್ನ ಬೆಂಬಲ ಬೆಲೆಯಡಿ ಮೆಕ್ಕೆಜೋಳ, ಭತ್ತ ಸೇರಿದಂತೆ ರೈತರ ಇನ್ನಿತರೆ ಬೆಳೆಗಳನ್ನು ಮಾರುಕಟ್ಟೆಗಳಲ್ಲಿ ಖರೀದಿಸುವಂತೆ ಶೀಘ್ರವೇ ಅನುಷ್ಠಾನಗೊಳ್ಳಬೇಕು. ಇಲ್ಲದಿದ್ದರೆ ಉಚ್ಚ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ದಾವೆ ಹೂಡುವುದಾಗಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಜಿಲ್ಲಾಡಳಿತಕ್ಕೆ ಎಚ್ಚರಿಕೆ ನೀಡಿದೆ.

ಕೃಷಿ ಉತ್ಪನ್ನ ಬೆಂಬಲ ಬೆಲೆಯಡಿ ರೈತರ ಬೆಳೆಗಳನ್ನು ಖರೀದಿಸುವಂತೆ ಆಗ್ರಹಿಸಿ ಮಾಯಕೊಂಡದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯಿಂದ ನಿರಂತರ ಧರಣಿ ಸತ್ಯಾಗ್ರಹ ಕೈಗೊಂಡಿದ್ದ ವೇಳೆ ಧರಣಿ ಸ್ಥಳಕ್ಕಾಗಮಿಸಿದ್ದ ಮಾಯಕೊಂಡ ಶಾಸಕ ಪ್ರೊ. ಲಿಂಗಣ್ಣ ಸಭೆ ನಡೆಸುವುದಾಗಿ ತಿಳಿಸಿದ್ದರು. ಅಂತೆಯೇ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅವರು ಇಂದು ರೈತ ಸಂಘಟನೆ ಮುಖಂಡರೊಡನೆ ಸಭೆ ನಡೆಸಿದರು.

2020-21ರ ಕೃಷಿ ಉತ್ಪನ್ನ ಬೆಂಬಲ ಬೆಲೆಯನ್ನು ಕೇಂದ್ರ ಸರ್ಕಾರವು ನಿಗದಿಪಡಿಸಿ, ಆದೇಶ ಹೊರಡಿಸಿದ್ದರೂ ಸಹ ಜಿಲ್ಲೆಯಲ್ಲಿ ಇನ್ನೂ ಅನುಷ್ಠಾನಗೊಂಡಿಲ್ಲ. ಪ್ರಧಾನ ಮಂತ್ರಿ ಅವರು ಕೃಷಿ ಉತ್ಪನ್ನ ಬೆಂಬಲ ಬೆಲೆ ನಿಗದಿ ಮಾಡಿರುವುದು ಕಾನೂನಾತ್ಮಕವಾಗಿ ಜಾರಿಯಾಗಿದೆಯೇ?. ಅನುಷ್ಠಾನವಾಗಿದ್ದರೆ ಅದನ್ನು ದೃಢೀಕರಿಸಬೇಕು. ಪ್ರಧಾನ ಮಂತ್ರಿ ಅವರು ಅನುಷ್ಠಾನ ಮಾಡಿರುವುದು ಸತ್ಯವೋ ಅಥವಾ ಸುಳ್ಳೋ ಬಹಿರಂಗಪಡಿಸುವಂತೆ ಸಭೆಯಲ್ಲಿ ರೈತ ಸಂಘಟನೆ ರಾಜ್ಯ ಕಾರ್ಯದರ್ಶಿ ಬಲ್ಲೂರು ರವಿಕುಮಾರ್ ತಿಳಿಸಿದರು.

ಕೇಂದ್ರ ಸರ್ಕಾರವು ಮೆಕ್ಕೆಜೋಳಕ್ಕೆ 1850 ಬೆಂಬಲ ಬೆಲೆ ನಿಗದಿಪಡಿಸಿದೆ. ಆದರೆ ಮಾರುಕಟ್ಟೆಯಲ್ಲಿ ಮೆಕ್ಕೆಜೋಳ 900 ರಿಂದ 1300 ವರೆಗೆ ಮಾತ್ರ ಮಾರಾಟವಾಗುತ್ತಿದೆ. ಇನ್ನು ಸಾಮಾನ್ಯ ಮತ್ತು ಉತ್ತಮ ಭತ್ತಕ್ಕೆ 1868 ರಿಂದ 1888 ಬೆಂಬಲ ಬೆಲೆ ಇದೆ. ಆದರೆ ಮಾರುಕಟ್ಟೆಯಲ್ಲಿ 1400 ರಿಂದ 1550 ರೂ.ಗೆ ಮಾತ್ರ ಮಾರಾಟವಾಗುತ್ತಿದೆ ಎಂದು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರು.

ಕೇಂದ್ರ ಸರ್ಕಾರದ ಕೃಷಿ ಉತ್ಪನ್ನ ಬೆಂಬಲ ಬೆಲೆಗಿಂತ (ಎಂಎಸ್ ಪಿ) ಕಡಿಮೆಯಾಗಿ ಮಾರುಕಟ್ಟೆಗಳಲ್ಲಿ ಖರೀದಿ ಮಾಡದಂತೆ ಆದೇಶ ನೀಡಬೇಕು ಎಂದು ಮನವಿ ಮಾಡಿದರಲ್ಲದೇ, ಒಂದು ವೇಳೆ ವಿಳಂಬವಾದರೆ ಕಾನೂನು ಅನುಷ್ಠಾನವಾಗದ ಪ್ರಯುಕ್ತ ಉಚ್ಚ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ದಾವೆ ಹೂಡಲಾಗುವುದು ಎಂದು ಎಚ್ಚರಿಸಿದರು. 

ಖರೀದಿದಾರರ ಸಭೆ ಕರೆದು ಈ ಬಗ್ಗೆ ಸೂಕ್ತ ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ. ಮೂರು ದಿನಗಳೊಳಗಾಗಿ ಸಭೆ ನಡೆಸಿ ಕೇಂದ್ರ ಸರ್ಕಾರದ ಆದೇಶದಂತೆ ಬೆಂಬಲ ಬೆಲೆ ಅನುಷ್ಠಾನಗೊಳಿಸಲು ರೈತ ಮುಖಂಡರು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದಾರೆ.

ಸಭೆಯಲ್ಲಿ ಸಂಘಟನೆಯ ಜಿಲ್ಲಾಧ್ಯಕ್ಷ ಕೆ.ಎಸ್. ಪ್ರಸಾದ್, ಇಟಗಿ ಬಸವರಾಜಪ್ಪ, ಅಣಬೇರು ಕುಮಾರಸ್ವಾಮಿ, ಗೌಡರ ಅಶೋಕ್ ಮಾಯಕೊಂಡ, ಪ್ರತಾಪ್, ಲಿಂಗರಾಜ್ ಪಾಮೇನಹಳ್ಳಿ ಸೇರಿದಂತೆ ಇತರರು ಇದ್ದರು.

error: Content is protected !!