ಹಬ್ಬಗಳಲ್ಲಿ ಗುಂಪು ಸೇರಲು ಅವಕಾಶವಿಲ್ಲ: ಡಿಸಿ

ದಾವಣಗೆರೆ ಅ.19-  ಧಾರ್ಮಿಕ ಆಚರಣೆಗಳಾದ ಹಬ್ಬಗಳನ್ನು ಮನೆಗಳಲ್ಲಿಯೇ ಶ್ರದ್ಧಾ – ಭಕ್ತಿಯಿಂದ ಆಚರಿಸೋಣ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ  ಕರೆ ನೀಡಿದರು.

ಜಿಲ್ಲಾ ಪೊಲೀಸ್ ಇಲಾಖೆಯಿಂದ ಇಲ್ಲಿನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯಲ್ಲಿ  ಇಂದು ಏರ್ಪಡಿಸಲಾಗಿದ್ದ ದಸರಾ, ದೀಪಾವಳಿ ಮತ್ತು ಈದ್ ಮಿಲಾದ್ ಆಚರಣೆ ಕುರಿತ ನಾಗರಿಕ ಶಾಂತಿ ಸೌಹಾರ್ದ ಸಭೆಯಲ್ಲಿ ಅವರು ಮಾತನಾಡಿದರು.

ಕೋವಿಡ್ ಮಾರ್ಗಸೂಚಿಗಳನ್ವಯ ಹಬ್ಬಗಳನ್ನು ಆಚರಿಸಬೇಕಿರುವುದರಿಂದ ಯಾವುದೇ ಕಾರಣಕ್ಕೂ ಸಾಮೂಹಿಕ ಪ್ರಾರ್ಥನೆ, ಮೆರವಣಿಗೆ, ಗುಂಪು ಸೇರಲು ಅವಕಾಶವಿಲ್ಲ ಎಂದು ಹೇಳಿದರು.

ಕೋವಿಡ್ ಮಾರ್ಗಸೂಚಿಯನ್ವಯ ಹಗಲು, ರಾತ್ರಿ ಪ್ರವಚನ ಕಾರ್ಯಕ್ರಮ, ಸಾಂಸ್ಕೃತಿಕ ಕಾರ್ಯಕ್ರಮ, ಸಭೆ, ಸಮಾರಂಭ ಮಾಡದಂತೆ ನಿಷೇಧಿಸಲಾಗಿದೆ. ಜಿಲ್ಲಾ ಮಟ್ಟದಲ್ಲಿ ಇದಕ್ಕೆ ಅವಕಾಶ ನೀಡಿದರೆ ನಮ್ಮ ಮೇಲೆ ಕ್ರಮ ಜರುಗಿಸಲಾಗುತ್ತದೆ. ಆದ್ದರಿಂದ ಜಿಲ್ಲಾಡಳಿತಕ್ಕೆ ಎಲ್ಲರೂ ಸಹಕಾರ ನೀಡಬೇಕು ಎಂದು ಅವರು ವಿವಿಧ ಸಮಾಜಗಳ ಮುಖಂಡರಿಗೆ ಮನವಿ ಮಾಡಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ಮಾತನಾಡಿ, ಅಕೋಬರ್ 31 ರೊಳಗೆ ಅರ್ಜಿ ಸಲ್ಲಿಸುವವರಿಗೆ ಮಾತ್ರ ನಗರದ ಬಾಲಕರ ಸರ್ಕಾರಿ ಪ್ರೌಢಶಾಲಾ ಮೈದಾನದಲ್ಲಿ ಪಟಾಕಿ ಅಂಗಡಿ ತೆರೆಯಲು ಅನುಮತಿ ನೀಡಲಾಗುವುದು. ಇದಕ್ಕೆ ನವೆಂಬರ್ 10 ರಿಂದ 17 ರ ತನಕ ಪರವಾನಿಗೆ ನೀಡಲಾಗುವುದು. ಅರ್ಜಿಗಳನ್ನು ಆಧರಿಸಿ ಅದರ ಆಧಾರದ ಮೇಲೆ ಜಾಗ ನೀಡಲಾಗುವುದು ಎಂದು ತಿಳಿಸಿದರು.

ಪಾಲಿಕೆ ಸದಸ್ಯ ಸ್ವಾಗಿ ಶಾಂತಕುಮಾರ್ ಮಾತನಾಡಿ, ದೇವಸ್ಥಾನ, ಪ್ರಾರ್ಥನಾ ಮಂದಿರಗಳಿಗೆ ತೆರಳುವ ಭಕ್ತರು ಅಗತ್ಯ ಸುರಕ್ಷತಾ ಕ್ರಮಗಳನ್ನು ಅನುಸರಿಸಬೇಕು, ತಾಜ್ ಮಹಲ್ ಸೇರಿದಂತೆ, ಇತರೆ ಐತಿಹಾಸಿಕ ಸ್ಮಾರಕಗಳನ್ನು  ನೋಡಲು ಹೋಗುವವರ ಕಾಲಿಗೆ ಬಟ್ಟೆಯ ಚೀಲ ನೀಡುವಂತೆ ನಮ್ಮಲ್ಲೂ ವ್ಯವಸ್ಥೆ ಆಗಬೇಕು ಎಂದರು.

ಶ್ರೀ ದುರ್ಗಾಂಬಿಕಾ ದೇವಿ ದೇವಸ್ಥಾನದ ಧರ್ಮದರ್ಶಿ ಗೌಡ್ರ ಚನ್ನಬಸಪ್ಪ ಮಾತನಾಡಿ, ಕೊರೊನಾ ಹಿನ್ನೆಲೆಯಲ್ಲಿ ದುರ್ಗಾಂಬಿಕಾ ದೇವಿ ದೇವಸ್ಥಾನದಲ್ಲಿ ಸಾಂಪ್ರದಾಯಿಕ ಕಾರ್ಯಕ್ರಮಗಳನ್ನು ರದ್ದುಪಡಿಸಿ ಸರಳ ಆಚರಣೆ ಮಾಡಲಾಗುತ್ತಿದೆ ಎಂದು  ತಿಳಿಸಿದರು.

ಈದ್ ಮಿಲಾದ್ ಕಮಿಟಿ ಕಾರ್ಯದರ್ಶಿ ಯಾಸೀನ್ ಪೀರ್ ತಾಜ್,  ಕೊರೊನಾ ಹಿನ್ನೆಲೆಯಲ್ಲಿ ಸರ್ಕಾರದ ಮಾರ್ಗಸೂಚಿ ಅನ್ವಯವೇ ಹಬ್ಬ ಆಚರಿಸಲು ಸಮಾಜದ ಬಾಂಧವರು ಮುಂದಾಗಿದ್ದು, ಈ ಸಂಬಂಧ ಸಮಿತಿಯಲ್ಲಿ ತೀರ್ಮಾನಿಸಲಾಗುವುದು ಎಂದರು.

ಪಾಲಿಕೆ ಸದಸ್ಯರಾದ ಶಿವಪ್ರಕಾಶ್, ಚಮನ್ ಸಾಬ್, ಶಿರಾಜ್ ಅಹಮದ್, ಹಿಂದೂಪರ ಸಂಘಟನೆಯ ಸತೀಶ್ ಪೂಜಾರ್ ಮಾತನಾಡಿ, ಸರ್ಕಾರದ ಮಾರ್ಗಸೂಚಿಯನ್ನು ಎಲ್ಲರೂ ಒಪ್ಪಿಕೊಂಡು ಮನೆಗಳಲ್ಲಿಯೇ ಸರಳವಾಗಿ ಹಬ್ಬಗಳನ್ನು ಆಚರಿಸಲಾಗುವುದು ಎಂದರು.

ಸಭೆಯಲ್ಲಿ ಹೆಚ್ಚುವರಿ ಪೊಲೀಸ್ ರಕ್ಷಣಾಧಿಕಾರಿ ರಾಜೀವ್, ಪಾಲಿಕೆ ಆಯುಕ್ತ ವಿಶ್ವನಾಥ್ ಮುದಜ್ಜಿ ಸೇರಿದಂತೆ ವಿವಿಧ ಸಮಾಜಗಳ ಮುಖಂಡರು ಪಾಲ್ಗೊಂಡಿದ್ದರು.

error: Content is protected !!