ತಿಳುವಳಿಕೆ ಇಲ್ಲದ ರಾಜ್ಯ ಸರ್ಕಾರ: ಹೊರಟ್ಟಿ ತರಾಟೆ

ದಾವಣಗೆರೆ, ಅ. 17 – ತಿಳುವಳಿಕೆ ಇಲ್ಲದ ರಾಜ್ಯ ಸರ್ಕಾರದ ವಿದ್ಯಾಗಮ ದಿಂದಾಗಿ 250ಕ್ಕೂ ಹೆಚ್ಚು ಶಿಕ್ಷಕರಿಗೆ ಕೊರೊನಾ ಬಂದು, 70ಕ್ಕೂ ಹೆಚ್ಚು ಶಿಕ್ಷಕರ ಸಾವು ಸಂಭವಿಸಿದೆ ಎಂದು ಜೆಡಿಎಸ್‌ ಹಿರಿಯ ನಾಯಕ ಹಾಗೂ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ತರಾಟೆಗೆ ತೆಗೆದುಕೊಂಡಿದ್ದಾರೆ.

ಆಗ್ನೇಯ ಪದವೀಧರ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಚೌಡರೆಡ್ಡಿ ತೂಪಲ್ಲಿ ಅವರ ಪರವಾಗಿ ನಗರದ ಶ್ರೀ ಸದ್ಯೋಜಾತ ಶಿವಾಚಾರ್ಯ ಸ್ವಾಮೀಜಿ ಹಿರೇಮಠದಲ್ಲಿ ಇಂದು ಆಯೋಜಿಸಲಾಗಿದ್ದ ಪ್ರಚಾರ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು.

ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಮೌಲ್ಯಮಾಪನಗಳನ್ನು ಜಿಲ್ಲಾ ಮಟ್ಟದಲ್ಲೇ ನಡೆಸುವಂತೆ ಒತ್ತಾಯಿಸಿದ್ದೆವು. ಆದರೆ, ಬೆಂಗಳೂರು ಹಾಗೂ ಮೈಸೂರುಗಳಂತಹ ದೂರದ ಕೇಂದ್ರಗಳಿಗೆ ಶಿಕ್ಷಕರನ್ನು ಕಳಿಸಿ ಮೌಲ್ಯಮಾಪನ ಮಾಡಿಸಲಾಯಿತು. ಇದರಿಂದಾಗಿ ಶಿಕ್ಷಕರು ಕೊರೊನಾಗೆ ಸಿಲುಕುವಂತಾಯಿತು ಎಂದು ಆಕ್ಷೇಪಿಸಿದರು.

ಶಿಕ್ಷಣ ಕ್ಷೇತ್ರಕ್ಕಾಗಿ ಕಾಂಗ್ರೆಸ್ ಹಾಗೂ ಬಿಜೆಪಿಗಳು ಏನೂ ಮಾಡಿಲ್ಲ ಎಂದಿರುವ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ, ಜನತಾ ದಳದ ಸರ್ಕಾರಗಳು ಇದ್ದಾಗಲೇ ಶಿಕ್ಷಣದಲ್ಲಿ ಬದಲಾವಣೆಯಾಗುತ್ತಾ ಬಂದಿದೆ ಎಂದಿದ್ದಾರೆ.

2015ರಿಂದ ಖಾಲಿ ಇರುವ ಅನುದಾನಿತ ಶಾಲೆಗಳ ಶಿಕ್ಷಕರ ಹುದ್ದೆಗಳ ಭರ್ತಿಗೆ ಸರ್ಕಾರ ಹೋರಾಟ ಮಾಡಿದರೂ ಕ್ರಮ ತೆಗೆದುಕೊಳ್ಳುತ್ತಿಲ್ಲ. ನಾನು ಶಿಕ್ಷಣ ಸಚಿವನಾಗಿದ್ದಾಗ 48 ಸಾವಿರ ಶಿಕ್ಷಕರ ನೇಮಕ ಮಾಡಿದ್ದೆ ಎಂದು ಹೊರಟ್ಟಿ ಹೇಳಿದರು.

ಬಿಜೆಪಿಯ ಪರಿಷತ್ ಸದಸ್ಯ ನಾರಾಯಣ ಸ್ವಾಮಿ ಅವರು ಶಿಕ್ಷಕರ ಕುರಿತು ಸೇಡಿನ ರಾಜ ಕಾರಣ ಮಾಡುತ್ತಿದ್ದಾರೆ. ಇಂಥವರು ಶಿಕ್ಷಕರ ಪ್ರತಿನಿಧಿಯಾಗಲು ಯೋಗ್ಯರಲ್ಲ ಎಂದವರು ಇದೇ ಸಂದರ್ಭದಲ್ಲಿ ತರಾಟೆಗೆ ತೆಗೆದುಕೊಂಡರು.

ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಮಾಜಿ ಶಾಸಕ ಹೆಚ್.ಎಸ್. ಶಿವಶಂಕರ್, ಬಿಜೆಪಿ ಶಿಕ್ಷಕ ಕ್ಷೇತ್ರವನ್ನು ಮರೆತಿದೆ. ಶಿಕ್ಷಕರ ನೇಮಕ ಮಾಡುತ್ತಿಲ್ಲ. ಕಾಲ್ಪನಿಕ ಬಡ್ತಿಗೆ ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂದು ಆಕ್ಷೇಪಿಸಿದರು.

ಸಭೆಯಲ್ಲಿ ಉಪಸ್ಥಿತರಿದ್ದು ಮಾತನಾಡಿದ ಜೆಡಿಎಸ್ ಅಭ್ಯರ್ಥಿ ಚೌಡರೆಡ್ಡಿ ತೂಪಲ್ಲಿ, ಪ್ರತಿ ವರ್ಷ 2 ಕೋಟಿ ಉದ್ಯೋಗ ನೀಡುವುದಾಗಿ ಹೇಳಿದ್ದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಭರವಸೆ ಹುಸಿಯಾಗಿದೆ. ನೋಟು ರದ್ದತಿ ಹಾಗೂ ಜಿಎಸ್‌ಟಿಗಳಿಂದಾಗಿ ಇರುವ ಉದ್ಯೋಗವನ್ನೂ ಪದವೀಧರರು ಕಳೆದುಕೊಂಡಿದ್ದಾರೆ ಎಂದರು.

ಶ್ರೀ ಜಗದ್ಗುರು ಜಯವಿಭವ ವಿದ್ಯಾಸಂಸ್ಥೆಯ ಸಹ ಕಾರ್ಯದರ್ಶಿ  ಎಂ.ಕೆ. ಬಕ್ಕಪ್ಪ ಮಾತನಾಡಿ, ಶಾಲೆಗಳನ್ನು ತೆರೆಯಲು ಸರ್ಕಾರ ಮುಂದಾಗದೇ ಇರುವುದರಿಂದ ಮಕ್ಕಳ ಜೀವನದ ಮೇಲೆ ಪರಿಣಾಮವಾಗುತ್ತಿದೆ. ಮದ್ಯದಂಗಡಿ ತೆರೆಯಲು ಯಾರ ಅನುಮತಿಯನ್ನೂ ಕೇಳದ ಸರ್ಕಾರ, ಶಾಲೆ ತೆರೆಯಲು ಮಾತ್ರ ಅಭಿಪ್ರಾಯದ ನೆಪ ಹೇಳುತ್ತಿದೆ ಎಂದು ಆಕ್ಷೇಪಿಸಿದರು.

ಈ ಸಂದರ್ಭದಲ್ಲಿ ವೇದಿಕೆಯ ಮೇಲೆ ಜೆಡಿಎಸ್‌ ಕಾರ್ಯಾಧ್ಯಕ್ಷ ಗಣೇಶ ದಾಸಕರಿಯಪ್ಪ, ಮುಖಂಡರಾದ ಕೆ.ಬಿ. ಕಲ್ಲೇರುದ್ರೇಶ್, ಎ.ಕೆ. ನಾಗಪ್ಪ, ಅಮಾನುಲ್ಲಾ ಖಾನ್, ಶೀಲಾ ಕುಮಾರ್,  ಟಿ. ಅಸ್ಗರ್, ಸಂಗನಗೌಡ್ರು, ಕಡತಿ ಅಂಜಿನಪ್ಪ, ಎಂ.ಎನ್. ನಾಗರಾಜ್, ಎಸ್. ಓಂಕಾರಪ್ಪ ಮತ್ತಿತರರಿದ್ದರು.

error: Content is protected !!