ದಾವಣಗೆರೆ, ಅ. 17- ಕೊರೊನಾ, ಪ್ರಕೃತಿ ವಿಕೋಪ, ಶತ್ರು ದಾಳಿಗಳನ್ನು ನಿವಾರಿಸಿ, ದೇಶದ ಬೆನ್ನೆಲುಬಾದ ರೈತರೂ ಸೇರಿದಂತೆ ಎಲ್ಲರಿಗೂ ಒಳಿತಾಗುವಂತೆ ಶ್ರೀ ದುರ್ಗಾದೇವಿಯನ್ನು ಪ್ರಾರ್ಥಿಸುವ ಮೂಲಕ ಶರನ್ನವರಾತ್ರಿ, ದಸರಾ ಹಬ್ಬವನ್ನು ಔಚಿತ್ಯಪೂರ್ಣವಾಗಿ ಆಚರಿಸೋಣ ಎಂದು ಆವರಗೊಳ್ಳ ಪುರವರ್ಗ ಮಠದ ಶ್ರೀ ಓಂಕಾರ ಶಿವಾಚಾರ್ಯ ಸ್ವಾಮೀಜಿ ಕರೆ ನೀಡಿದರು.
ವಿಶ್ವ ಹಿಂದೂ ಪರಿಷದ್, ಸಾರ್ವಜನಿಕ ವಿಜಯದಶಮಿ ಮಹೋತ್ಸವ ಸಮಿತಿ ವತಿಯಿಂದ ನಗರದ ಪಿ.ಬಿ. ರಸ್ತೆಯ ಶ್ರೀ ಬೀರಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ಶ್ರೀ ದುರ್ಗಾದೇವಿ ಮೂರ್ತಿಗೆ ಪೂಜೆ ಸಲ್ಲಿಸುವ ಮೂಲಕ ಶರನ್ನವರಾತ್ರಿ ಉತ್ಸವಕ್ಕೆ ಇಂದು ಚಾಲನೆ ನೀಡಿ ಶ್ರೀಗಳು ಆಶೀರ್ವಚನ ನೀಡಿದರು.
ದೇಶದಲ್ಲಿ ಎಲ್ಲರನ್ನೂ ಭಯಪಡಿಸಿರುವ ಮಹಾಮಾರಿ ಕೊರೊನಾವನ್ನು ತಾಯಿ ದುರ್ಗಾದೇವಿ ದೂರ ಮಾಡಲಿ. ಕಳೆದ ಮೂರು ವರ್ಷಗಳಿಂದಲೂ ರಾಜ್ಯದ ಹಲವೆಡೆ ಪ್ರಕೃತಿ ವಿಕೋಪದಿಂದ ಅತಿವೃಷ್ಟಿಯುಂಟಾಗಿ ದೇಶದ ಬೆನ್ನೆಲುಬಾದ ರೈತ ಸಂಕಷ್ಟಕ್ಕೀಡಾಗುತ್ತಿದ್ದಾನೆ. ಶ್ರೀ ದುರ್ಗೆ ಪ್ರಕೃತಿ ವಿಕೋಪಕ್ಕೆ ಎಡೆ ಮಾಡದೆ ರೈತರನ್ನು ರಕ್ಷಿಸಲಿ. ದೇಶದಲ್ಲಿ ಪರಕೀಯರ ಆಕ್ರಮಣ, ಭಯೋತ್ಪಾದಕತೆ ಹೆಚ್ಚಾಗುತ್ತಿದ್ದು, ಮಾತೆ ದುರ್ಗೆ ಸೈನಿಕರಿಗೆ ಶಕ್ತಿ ನೀಡಿ, ಶತ್ರುಗಳಿಂದ ದೇಶವನ್ನು ರಕ್ಷಿಸಲಿ, ದೇಶದ ಒಳಗೂ ಹಾಗೂ ಹೊರಗೂ ಇರುವ ರಾಕ್ಷಸರನ್ನು ಸಂಹರಿಸಲಿ ಎಂಬ ಸಂಕಲ್ಪದೊಂದಿಗೆ ಒಂಭತ್ತು ದಿನಗಳ ಕಾಲ ದುರ್ಗಾಮಾತೆಯನ್ನು ಪೂಜಿಸುವ ಮೂಲಕ ಹಬ್ಬ ಆಚರಿಸೋಣ ಎಂದು ಶ್ರೀಗಳು ನುಡಿದರು.
ಮಹಾನಗರ ಪಾಲಿಕೆ ಮೇಯರ್ ಬಿ.ಜಿ. ಅಜಯ್ ಕುಮಾರ್, ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಯಶವಂತರಾವ್ ಜಾಧವ್, ಪಾಲಿಕೆ ಸದಸ್ಯರಾದ ದೇವರಮನೆ ಶಿವಕುಮಾರ್, ಪ್ರಸನ್ನ ಕುಮಾರ್, ಶಿವನಗೌಡ ಪಾಟೀಲ್, ಮುಖಂಡ ವೈ.ಎನ್. ಮಲ್ಲೇಶ್, ಪಿ.ಸಿ. ಶ್ರೀನಿವಾಸ್, ಎಸ್.ಟಿ. ವೀರೇಶ್, ಎನ್. ರಾಜಶೇಖರ್, ಸತೀಶ್ ಪೂಜಾರಿ, ಜಯಮ್ಮ ಹಾಗು ಇತರರು ಉಪಸ್ಥಿತರಿದ್ದರು.