ದಾವಣಗೆರೆ, ಅ. 18 – ಬರುವ ಅಕ್ಟೋಬರ್ 31ರ ವಾಲ್ಮೀಕಿ ಜಯಂತಿ ಒಳಗೆ ಪರಿಶಿಷ್ಟ ಪಂಗಡಕ್ಕೆ ಶೇ.7.5ರ ಮೀಸಲಾತಿ ಪ್ರಕಟಿಸಬೇಕು. ಇಲ್ಲವಾದರೆ ಹೋರಾಟ ಉಗ್ರ ಸ್ವರೂಪ ಪಡೆಯಲಿದೆ ಎಂದು ವಾಲ್ಮೀಕಿ ಗುರುಪೀಠದ ಶ್ರೀ ಪ್ರಸನ್ನಾನಂದ ಸ್ವಾಮೀಜಿ ಎಚ್ಚರಿಕೆ ನೀಡಿದ್ದಾರೆ.
ಇಂದಿಲ್ಲಿ ತಮ್ಮನ್ನು ಭೇಟಿ ಮಾಡಿದ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರ ಪರಿಶಿಷ್ಟ ಪಂಗಡದವರಿಗೆ 7.5ರ ಮೀಸಲಾತಿ ನೀಡಿದೆ. ಅದೇ ರೀತಿ ರಾಜ್ಯ ಸರ್ಕಾರವೂ ಮೀಸಲಾತಿ ಯನ್ನು ಹೆಚ್ಚಿಸಬೇಕು ಎಂದವರು ಆಗ್ರಹಿಸಿದ್ದಾರೆ.
ನ್ಯಾಯಮೂರ್ತಿ ನಾಗಮೋಹನ್ ದಾಸ್ ಸಮಿತಿ ವರದಿ ಸಲ್ಲಿಸಿ ಮೂರು ತಿಂಗಳಾಗಿವೆ. ರಾಜ್ಯ ಸರ್ಕಾರ ಕೂಡಲೇ ಸಂಪುಟ ಸಭೆ ಕರೆದು ಮೀಸಲಾತಿ ಹೆಚ್ಚಿಸಬೇಕು ಎಂದು ಶ್ರೀಗಳು ಒತ್ತಾಯಿಸಿದರು. ಕಾಂಗ್ರೆಸ್ ಹಾಗೂ ಜೆಡಿಎಸ್‌ನವರಿಗೆ ನಾಯಕ ಸಮುದಾಯ ಈಗಾಗಲೇ ಬುದ್ಧಿ ಕಲಿಸಿದೆ. ಈಗಲೂ ಭರವಸೆ ಈಡೇರಿಸದೇ ಹೋದರೆ ಸಮುದಾಯ ನಿಮಗೂ ಬುದ್ಧಿ ಕಲಿಸಲಿದೆ ಎಂದು ಬಿಜೆಪಿ ನೇತೃತ್ವದ ಸರ್ಕಾರಕ್ಕೆ ಶ್ರೀಗಳು ಎಚ್ಚರಿಸಿದರು.
ಶಾಸಕರಿಂದಲೂ ಹೋರಾಟ : ಪರಿಶಿಷ್ಟ ಜಾತಿ ಹಾಗೂ ಪಂಗಡದಿಂದ ಆಯ್ಕೆಯಾದ 15 ಶಾಸಕರು ಹಾಗೂ ಇಬ್ಬರು ಸಂಸದರು ಸಮುದಾಯದ ವಿಚಾರ ಬಂದಾಗ ಎಲ್ಲ ತ್ಯಾಗಕ್ಕೂ ಸಿದ್ಧ ಎಂದು ಎಲ್ಲರ ಎದುರು ಮಾತು ಕೊಟ್ಟಿದ್ದಾರೆ.
ಸ್ವಾಮೀಜಿ ಕರೆ ನೀಡಿದಂತೆ ಬದ್ಧವಾಗಿರುವುದಾಗಿ ಹೇಳಿದ್ದಾರೆ. ಅ.21ರಿಂದ ಹೋರಾಟ ಕೈಗೆತ್ತಿಕೊಳ್ಳಲಿದ್ದು, ಅವರೂ ಪಾಲ್ಗೊಳ್ಳಲಿದ್ದಾರೆ. ಅಗತ್ಯ ಬಿದ್ದರೆ ರಾಜೀನಾಮೆಗೂ ಸಿದ್ಧವಾಗಿದ್ದಾರೆ. ಈ ಬಗ್ಗೆ ಅ.31ರವರೆಗೆ ಕಾದು ನೋಡುತ್ತೇವೆ ಎಂದು ಹೇಳಿದರು.