ದಾವಣಗೆರೆ, ಅ.18- ಗ್ರಾಹಕರಿಗೆ ಅತ್ಯುತ್ತಮ ಸೇವೆಗಳನ್ನು ಒದಗಿಸುವುದರಲ್ಲಿ ಮುಂಚೂಣಿ ಯಲ್ಲಿರುವ ದಾವಣಗೆರೆ – ಹರಿಹರ ಅರ್ಬನ್ ಕೋ-ಆಪರೇಟಿವ್ ಬ್ಯಾಂಕು, ಸರ್ವಾಂಗೀಣ ಆರ್ಥಿಕ ಪ್ರಗತಿ ಯಲ್ಲಿ ಸಾಗಿದೆ ಎಂದು ಬ್ಯಾಂಕಿನ ಅಧ್ಯಕ್ಷ ಎನ್.ಎ. ಮುರುಗೇಶ್ ಹರ್ಷಿಸಿದರು.
ನಗರದ ತ್ರಿಶೂಲ್ ಕಲಾ ಭವನದಲ್ಲಿ ಇಂದು ಏರ್ಪಾಡಾಗಿದ್ದ ತಮ್ಮ ಬ್ಯಾಂಕಿನ ಸರ್ವ ಸದಸ್ಯರ 48ನೇ ವಾರ್ಷಿಕ ಮಹಾಸಭೆಯ ವೀಡಿಯೋ ಕಾನ್ಫರೆನ್ಸ್‌ನ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
2019-20ರ ಆರ್ಥಿಕ ವರ್ಷದಲ್ಲಿ 7.85 ಕೋಟಿ ರೂ. ಲಾಭ ಗಳಿಸಿದ್ದು, ಇದರಲ್ಲಿ ಆದಾಯ ತೆರಿಗೆ ಹಾಗೂ ಇತರೆ ಅವಕಾಶಗಳನ್ನು ಕಲ್ಪಿಸಿದ ನಂತರ 4.25 ಕೋಟಿ ರೂ.ಗಳ ನಿವ್ವಳ ಲಾಭ ಹೊಂದಿ ಅತ್ಯಂತ ಪ್ರಗತಿ ಪಥದಲ್ಲಿ ಮುನ್ನಡೆದಿದೆ ಎಂದು ಅವರು ಸಂತಸ ವ್ಯಕ್ತಪಡಿಸಿದರು.
ಲಿಂ. ಎನ್.ಎಂ.ಜೆ.ಬಿ. ಆರಾಧ್ಯ ಅವರು ತೋರಿದ್ದ ಮಾರ್ಗದರ್ಶನದಂತೆಯೇ ಬ್ಯಾಂಕು ಕಾರ್ಯ ನಿರ್ವಹಿಸುತ್ತಿದ್ದು, ಬ್ಯಾಂಕಿನ ಸದಸ್ಯರುಗಳಿಗೆ ಹೆಚ್ಚಿನ ಸೌಲಭ್ಯಗಳು ಸಿಗಬೇಕು, ಸದಸ್ಯರುಗಳು, ಉತ್ತಮ ಸಾಲಗಾರರು, ಠೇವಣಿದಾರರು, ಗ್ರಾಹಕರು ಬ್ಯಾಂಕ್‌ನ ಅಭಿವೃದ್ಧಿಯ ರೂವಾರಿಗಳು ಎಂದು ಅವರು ಹೇಳಿದರು.
ಕೊರೊನಾ (ಕೋವಿಡ್-19) ಕಾಲಘಟ್ಟದ ಈ ಸಂದರ್ಭದಲ್ಲಿ ಸರ್ವ ಸದಸ್ಯರ ಆರೋಗ್ಯ ರಕ್ಷಣೆ ದೃಷ್ಟಿಯಿಂದ ವೆಬ್‌ಕಾಸ್ಟ್, ವೀಡಿಯೋ ಕಾನ್ಫರೆನ್ಸ್ ವಿಧಾನದಲ್ಲಿ ವಾರ್ಷಿಕ ಮಹಾಸಭೆಯನ್ನು ಏರ್ಪಡಿಸಿರುವ ಮೊದಲ ಬ್ಯಾಂಕ್ ಎಂಬ ಹೆಗ್ಗಳಿಕೆಗೆ ದಾವಣಗೆರೆ – ಹರಿಹರ ಅರ್ಬನ್ ಕೋ-ಆಪರೇಟಿವ್ ಬ್ಯಾಂಕು ಪಾತ್ರವಾಗಿದೆ ಎಂದರು.
ವೆಬ್‌ಕಾಸ್ಟ್, ವೀಡಿಯೋ ಕಾನ್ಫರೆನ್ಸ್ ವಿಧಾನದ ಮೂಲಕ ವಾರ್ಷಿಕ ಮಹಾಸಭೆಯಲ್ಲಿ ಸುಮಾರು ಒಂದು ಸಾವಿರಕ್ಕೂ ಹೆಚ್ಚು ಸದಸ್ಯರು ಪಾಲ್ಗೊಂಡಿರುವ ಬಗ್ಗೆ ಶ್ಲ್ಯಾಘಿಸಿದ ಮುರುಗೇಶ್, ಕೋವಿಡ್‌ಗೆ ಇನ್ಸೂರೆನ್ಸ್ ಮಾಡಿಸುವಂತೆ, ಮಕ್ಕಳ ವಿದ್ಯಾಭ್ಯಾಸಕ್ಕೆ ಸಾಲದ ಸೌಲಭ್ಯ ನೀಡುವಂತೆ, ಸದಸ್ಯರಿಗೆ ಶೇ. 17 ರಂತೆ ಲಾಭಾಂಶ ಕೊಡಬೇಕು ಎಂಬುದೂ ಸೇರಿದಂತೆ ಸದಸ್ಯರು ನೀಡಿದ ಸಲಹೆ ಮತ್ತು ಕೇಳಿದ ಪ್ರಶ್ನೆಗಳಿಗೆ ಸಮರ್ಪಕವಾಗಿ ಉತ್ತರಿಸಿದರು.
ವರ್ಷಾಂತ್ಯಕ್ಕ 11,619 ಸದಸ್ಯತ್ವ ಹೊಂದಿರುವ ಬ್ಯಾಂಕು ಷೇರು ಬಂಡವಾಳದಲ್ಲಿ ಏರಿಕೆ ಹೊಂದಿ 5.59 ಕೋಟಿ ರೂ. ಆಪದ್ಧನ ಮತ್ತು ನಿಧಿಗಳಲ್ಲಿ ಏರಿಕೆಹೊಂದಿ 41.5 ಕೋಟಿ ಠೇವಣಾತಿಗಳಲ್ಲಿ ಏರಿಕೆ ಹೊಂದಿ 242.93 ಕೋಟಿ ರೂ. ಹೊಂದಿದ್ದು, ಭಾರತೀಯ ರಿಸರ್ವ್ ಬ್ಯಾಂಕಿನ ನಿರ್ದೇಶನಗಳ ಅನ್ವಯ 194.98 ಕೋಟಿ ರೂ.ಗಳ ಸಾಲ ಮತ್ತು ಮುಂಗಡಗಳನ್ನು ನೀಡಲಾಗಿದೆ ಎಂದರು.
ಆರಾಧ್ಯ ಆಯುಷ್ಮಾನ್ ಯೋಜನೆಯಡಿಯಲ್ಲಿ ಅರ್ಹ 89 ಸದಸ್ಯರಿಗೆ 12.60 ಲಕ್ಷ ರೂ. ಪರಿಹಾರ ನೀಡಲಾಗಿದೆ. ಮೃತರಾದ 146 ಸದಸ್ಯರ ಕುಟುಂಬದವರಿಗೆ ನೆರವು ನೀಡುವ ನಿಟ್ಟಿನಲ್ಲಿ 14.60 ಲಕ್ಷ ರೂ.ಗಳನ್ನು ವಿತರಿಸಲಾಗಿದೆ.ಕೋವಿಡ್ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ತಮ್ಮ ಬ್ಯಾಂಕಿನಿಂದ 1.50 ಲಕ್ಷ ರೂ. ದೇಣಿಗೆ ನೀಡಲಾಗಿದೆ. ಆಶಾ ಕಾರ್ಯಕರ್ತೆಯರಿಗೆ ತಲಾ 3 ಸಾವಿರ ರೂ.ಗಳಂತೆ 10 ಜನರಿಗೆ 30 ಸಾವಿರ ರೂ.ಗಳನ್ನು ವಿತರಿಸಲಾಗಿದೆ ಎಂದು ಮುರುಗೇಶ್ ವಿವರಿಸಿದರು.
ಬ್ಯಾಂಕಿನ ಅನುತ್ಪಾದಕ ಆಸ್ತಿ ಪ್ರಮಾಣವು 4.87 ರಷ್ಟಿದ್ದು ಇದನ್ನು ಇನ್ನೂ ಕಡಿಮೆಗೊಳಿಸಿ ಶೂನ್ಯಕ್ಕೆ ಒಯ್ಯಲು ನಿಗಾ ವಹಿಸಲಾಗುತ್ತಿದೆ. ಬ್ಯಾಂಕಿನ ಹೂಡಿಕೆ ಮತ್ತು ಸಂಚಗಳು 76 ಕೋಟಿ 10 ಲಕ್ಷ ರೂ. ಇದ್ದು, ಇದರಲ್ಲಿ ಗರಿಷ್ಠ ಮೊತ್ತವನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರದ ಭದ್ರತೆಗಳಲ್ಲಿ ತೊಡಗಿಸಲಾಗಿದೆ. ಬ್ಯಾಂಕಿನ ಆಡಳಿತ ಕಛೇರಿಯು ಸೌರ ವಿದ್ಯುತ್ ಘಟಕ ವ್ಯವಸ್ಥೆ ಹೊಂದಿದ್ದು ವಿದ್ಯುತ್ ಶುಲ್ಕದಲ್ಲಿ ಉಳಿತಾಯ ಸಾಧಿಸಲಾಗಿದೆ. ಬ್ಯಾಂಕು `ಎ’ ಶ್ರೇಣಿಯಲ್ಲಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ಬ್ಯಾಂಕ್ ಅಭಿವೃದ್ಧಿ ಪಥದಲ್ಲಿ ಮುನ್ನಡೆಯಲು ಠೇವಣಿದಾರರ ವಿಶ್ವಾಸ ಎಷ್ಟು ಮುಖ್ಯವೋ ಅಷ್ಟೇ ಉತ್ತಮ ಸಾಲಗಾರರ ಸೇವೆಯೂ ಮುಖ್ಯ. ಈ ನಿಟ್ಟಿನಲ್ಲಿ ಬ್ಯಾಂಕಿನ ಸರ್ವತೋಮುಖ ಅಭಿವೃದ್ಧಿಗೆ ಸಹಕರಿಸುತ್ತಿರುವ ಠೇವಣಿದಾರರು, ಉತ್ತಮ ಸಾಲಗಾರರು, ಸದಸ್ಯರು, ಗ್ರಾಹಕರು, ಹಿತೈಷಿಗಳಿಗೆ ಕೃತಜ್ಞತೆ ಸಲ್ಲಿಸಿದರು.
ಕಳೆದ ವಾರ್ಷಿಕ ಮಹಾಸಭೆಯ ನಡಾವಳಿ ವಾಚನ, ವಾರ್ಷಿಕ ವರದಿ ಪರಿಶೀಲನೆ ಮುಂತಾದ ಪ್ರಕ್ರಿಯೆಗಳನ್ನು ಬ್ಯಾಂಕಿನ ಪ್ರಧಾನ ವ್ಯವಸ್ಥಾಪಕ ಎಂ. ಶಿವಲಿಂಗಸ್ವಾಮಿ ನೆರವೇರಿಸಿ ಅನುಮೋದನೆ ಪಡೆದರು. ಲಾಭ-ನಷ್ಟ, ಅಢಾವೆ ಪತ್ರಿಕೆಗಳ ಮಂಡನೆ, ಲೆಕ್ಕ ಪರಿಶೋಧಕರ ವರದಿ ಮಂಡನೆ ಮಾಡಿದ ಉಪಾಧ್ಯಕ್ಷ ಕಿರುವಾಡಿ ವಿ.ಸೋಮಶೇಖರ್ ಅನುಮೋದನೆ ಪಡೆದರು.
ನಿರ್ದೇಶಕರುಗಳಾದ ರಮಣ್‌ಲಾಲ್ ಪಿ. ಸಂಘವಿ, ಹೆಚ್.ಕೆ. ವೀರಣ್ಣ, ಶ್ರೀಮತಿ ಜಯಮ್ಮ ಪರಶುರಾಮಪ್ಪ, ಶ್ರೀಮತಿ ಉಮಾ ಇಂದೂಧರ ನಿಶಾನಿಮಠ್, ಎಸ್.ಕೆ. ಪ್ರಭುಪ್ರಸಾದ್, ಕೆ.ಎಂ ಜ್ಯೋತಿ ಪ್ರಕಾಶ್, ನಾಗೇಂದ್ರಪ್ಪಾಚಾರ್, ಪಿ.ಹೆಚ್. ವೆಂಕಪ್ಪ, ಕೆ.ಹೆಚ್ ಶಿವಯೋಗಪ್ಪ, ಎಸ್.ಎಸ್. ಸಾಲಿಮಠ್, ಎಂ.ಎಸ್. ರಾಮಚಂದ್ರ ಶ್ರೇಷ್ಠಿ, ಎ.ಎಸ್. ಸಿದ್ಧರಾಮಣ್ಣ ಭಾಗವಹಿಸಿದ್ದರು.
ಸದಸ್ಯರುಗಳಾದ ಬಿ.ಹೆಚ್. ಪರಶುರಾಮಪ್ಪ, ಎನ್.ಜಿ. ಪುಟ್ಟಸ್ವಾಮಿ, ಬಕ್ಕೇಶ್ ನಾಗನೂರು ಮತ್ತಿತರರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.
ಸಂಗೀತಾ ರಾಘವೇಂದ್ರ ಪ್ರಾರ್ಥಿಸಿದರು. ನಿರ್ದೇಶಕ ಶಂಕರ್ ಖಟಾವ್‌ಕರ್ ಸ್ವಾಗತಿಸಿದರು. ಹಿರಿಯ ಪತ್ರಕರ್ತ ಎಚ್.ಬಿ. ಮಂಜುನಾಥ್ ಅವರು ವಿಡಿಯೋ ಕಾನ್ಫರೆನ್ಸ್ ವಿಧಾನದ ಮಹಾಸಭೆಯನ್ನು ನಿರೂಪಿಸಿದರು. ಬ್ಯಾಂಕಿನ ನಿರ್ದೇಶಕ ಎ.ಹೆಚ್. ಕುಬೇರಪ್ಪ ವಂದಿಸಿದರು.
ಸಹಕಾರ ಇಲಾಖೆಯ ಅಧಿಕಾರಿ ದಕ್ಷಿಣಾಮೂರ್ತಿ, ಜಿಲ್ಲಾ ಸಹಕಾರ ಯೂನಿಯನ್‌ನ ಸಿ.ಇ.ಓ. ಸಂತೋಷ್‌ಕುಮಾರ್, ಜಗದೀಶ್, ಸಹಕಾರ ಧುರೀಣ ಬಿ.ವಿ. ಚಂದ್ರಶೇಖರ್ ಮತ್ತಿತರರು ಆಗಮಿಸಿದ್ದರು.