ಜಜಮು ವೈದ್ಯಕೀಯ ವಿದ್ಯಾಲಯದಲ್ಲಿ ಪರಿಸರ ಆರೋಗ್ಯ ನಿರ್ಮಾಣ

ದಾವಣಗೆರೆ, ಜು.13- ಹಿರಿಯ ಶಾಸಕ ಡಾ|| ಶಾಮನೂರು ಶಿವಶಂಕರಪ್ಪ ಅವರ 90ನೇ ಹುಟ್ಟುಹಬ್ಬವನ್ನು ನಗರದ ಜಜಮು ವೈದ್ಯಕೀಯ ಮಹಾವಿದ್ಯಾಲಯ ದಲ್ಲಿ  ವಿಶಿಷ್ಟವಾಗಿ ಆಚರಿಸಲಾಯಿತು. 

ಎಸ್ಸೆಸ್ ಅವರು ಬಿಲ್ವಪತ್ರಿಯ ಸಸಿ ನೆಡುವುದರೊಂದಿಗೆ ಕಾಲೇಜಿನ ಆವರಣದಲ್ಲಿ ಪರಿಸರ ಆರೋಗ್ಯ ನಿರ್ಮಾಣಕ್ಕೆ ಚಾಲನೆ ನೀಡಿದರು. 

ಎಸ್ಸೆಸ್ ಹುಟ್ಟುಹಬ್ಬದ ಪ್ರಯುಕ್ತ ಕಾಲೇಜಿನ ಆವರಣದಲ್ಲಿ 90 ಸಸಿಗಳನ್ನು ನೆಡುವ ಮೂಲಕ ಕಾಲೇಜಿನ ಪ್ರಾಂಶು ಪಾಲ ಡಾ|| ಎಸ್.ಬಿ.ಮುರುಗೇಶ್ ಅವರ ನೇತೃತ್ವದಲ್ಲಿ ಪರಿಸರ ಆರೋಗ್ಯದ ಜೊತೆಗೆ ಎಲ್ಲರ ಆರೋಗ್ಯ ವರ್ಧನೆಗೆ ನೆರವಾಗುವ ಔಷಧ ಗುಣಗಳುಳ್ಳ ಗಿಡಗಳನ್ನು ನೆಡಲಾಯಿತು. 

ಈ ಕಾರ್ಯಕ್ರಮಕ್ಕೆ ಬಾಪೂಜಿ ವಿದ್ಯಾಸಂಸ್ಥೆಯ ನಿರ್ದೇಶಕ ಡಾ|| ಎಂ.ಜಿ.ಈಶ್ವರಪ್ಪ, ವಲಯ ಅರಣ್ಯ ಸಂರಕ್ಷಣಾಧಿಕಾರಿ ಶ್ರೀನಿವಾಸ್ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಇದೇ ಸಂದರ್ಭದಲ್ಲಿ 2500 ಕ್ಕೂ ಅಧಿಕ ಮರಗಳನ್ನು ಬೆಳೆಸಿರುವ `ಸಾಲುಮರದ’ ವೀರಾಚಾರಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಕಾಲೇಜಿನ ಆಡಳಿತಾಧಿಕಾರಿ ಸತ್ಯನಾರಾಯಣ   ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ವಿದ್ಯಾಸಂಸ್ಥೆಯ ಎರಡು ದಂತ ವೈದ್ಯಕೀಯ ಕಾಲೇಜಿನ ಹಾಗೂ ಜಜಮು ವೈದ್ಯಕೀಯ ಮಹಾವಿದ್ಯಾಲಯ ಕಾಲೇಜಿನ `ಡಿ’ ವರ್ಗದ ಸಿಬ್ಬಂದಿಗಳಿಗೆ ಕೋವಿಡ್-19 ಆಹಾರ ಕಿಟ್ ಗಳನ್ನು ಎಸ್ಸೆಸ್‌ ವಿತರಿಸಿದರು. 

ಕಾಲೇಜಿನ ಪ್ರಾಂಶುಪಾಲ ಡಾ|| ಎಸ್.ಬಿ.ಮುರು ಗೇಶ್‌ ಸ್ವಾಗತಿಸಿದರು. ಸಮುದಾಯ ಆರೋಗ್ಯ ವಿಭಾಗದ ಡಾ|| ಅನುರೂಪ ವಂದಿಸಿದರು. ದೈಹಿಕ ಶಿಕ್ಷಣ ನಿರ್ದೇಶಕ ಗೋಪಾಲಕೃಷ್ಣ ನಿರೂಪಿಸಿದರು. ನೆಟ್ಟಿರುವ ಗಿಡಗಳಿಗೆ ಕಬ್ಬಿಣದ ಜಾಲರಿ ಅನ್ನು ಹಾಕಲಾಗಿದ್ದು, ಅದರ ಮೇಲೆ ಪರಿಸರ ಜಾಗೃತಿಯ ಘೋಷಣೆಗಳನ್ನು ಬರೆಸಲಾಗಿದೆ.

error: Content is protected !!