ದಾವಣಗೆರೆ, ಅ. 16- ನಗರದ ಥಿಯೇಟರ್ಗಳಲ್ಲಿ ಇಂದಿನಿಂದ ಚಿತ್ರಪ್ರದರ್ಶನ ಪುನರಾರಂಭಗೊಂಡಿದ್ದು, ಕೆಲವೇ ಜನರು ಮಾತ್ರ ಚಿತ್ರ ವೀಕ್ಷಿಸಿದ್ದಾರೆ.
ಚಿತ್ರ ವೀಕ್ಷಿಸಿಸಲು ಬಂದ ಪ್ರೇಕ್ಷಕರ ಹೆಸರು, ಮೊಬೈಲ್ ಸಂಖ್ಯೆ ಪಡೆದು, ಕೈಗಳಿಗೆ ಸ್ಯಾನಿಟೈಸರ್ ಹಾಕಿ, ಮಾಸ್ಕ್ ಇರುವುದನ್ನು ಪರಿಶೀಲಿಸಿಕೊಂಡು ಚಿತ್ರ ಮಂದಿರದ ಒಳಬಿಡಲಾಗುತ್ತಿತ್ತು.
ಟಿಕೆಟ್ ಕೌಂಟರ್ನಲ್ಲಿ ಪೂರ್ತಿ ಟಿಕೆಟ್ ನೀಡಿ, ಒಳ ಬಿಡುವಾಗ ಅರ್ಧ ಟಿಕೆಟ್ ಹರಿದು ಕೊಡುತ್ತಿದ್ದ ಪ್ರಕ್ರಿಯೆ ಬದಲಾಗಿ ನೇರವಾಗಿ ಅರ್ಧ ಟಿಕೆಟ್ ನೀಡಿಯೇ ಒಳ ಬಿಡಲಾಗುತ್ತಿತ್ತು.
ಇಂದಿನಿಂದ ಚಿತ್ರ ಪ್ರದರ್ಶನ ಆರಂಭಿಸಿದ್ದು, ಚಿರಂಜೀವಿ ಸರ್ಜಾ ನಟನೆಯ `ಶಿವಾರ್ಜುನ’ ಚಿತ್ರ ಪ್ರದರ್ಶನ ಮಾಡುತ್ತಿದ್ದೇವೆ. ಆದರೆ, ಚಿತ್ರ ವೀಕ್ಷಿಸಲು ಜನರು ಆಷ್ಟಾಗಿ ಆಸಕ್ತಿ ವಹಿಸಿಲ್ಲ ಎಂದು ಪುಷ್ಪಾಂಜಲಿ ಚಿತ್ರದ ಮ್ಯಾನೇಜರ್ ಅರುಣ್ ಕುಮಾರ್ ಪತ್ರಿಕೆಗೆ ತಿಳಿಸಿದರು.
ಪ್ರಥಮ ಪ್ರದರ್ಶನಕ್ಕೆ ಹದಿನೈದರಿಂದ ಇಪ್ಪತ್ತು ಜನ ಬಂದಿದ್ದರು. ಎರಡನೇ ಪ್ರದರ್ಶನಕ್ಕೆ ಕೇವಲ ಹದಿ ಮೂರು ಜನರು ಬಂದಿದ್ದರೆ ಮೂರನೇ ಪ್ರದರ್ಶನಕ್ಕೆ ಹದಿನೈದು ಜನರು ಮಾತ್ರ ಬಂದಿರುವುದಾಗಿ ಹೇಳಿದರು.
ಪ್ರತಿ ದಿನ ಪ್ರದರ್ಶನ ಮುಂದುವರೆಯಲಿದ್ದು, ಮುಂಬರುವ ದಿನಗಳಲ್ಲಿ ಪ್ರೇಕ್ಷಕರ ಸಂಖ್ಯೆ ಹೆಚ್ಚಾಗಬಹುದೆಂಬ ನಿರೀಕ್ಷೆ ಥಿಯೇಟರ್ ಮಾಲೀಕರದ್ದು. ಮತ್ತೊಂದೆಡೆ ನಗರದ ಎಸ್.ಎಸ್. ಮಾಲ್ನ ‘ಮೂವಿಟೈಮ್’ನಲ್ಲಿ ‘ಅವನೇ ಶ್ರೀಮನ್ನಾರಾಯಣ’ ಹಾಗೂ ‘ಲವ್ ಮಾಕ್ಟೇಲ್’ ಚಿತ್ರಗಳು ಪ್ರದರ್ಶನ ಕಂಡಿವೆ.