ದಾವಣಗೆರೆ, ಅ. 15 – ಗ್ರಾಮ ಸ್ವರಾಜ್ಯದ ಬಗ್ಗೆ ಜಾಗೃತಿ ಮೂಡಿಸಲು ಮಾಜಿ ಶಾಸಕ ಹಾಗೂ ಜೆಡಿಯು ಮುಖಂಡ ಮಹಿಮಾ ಪಟೇಲ್ ಬೆಂಗಳೂರಿನಿಂದ ಆರಂಭಿಸಿರುವ ಪಾದಯಾತ್ರೆ ಗುರುವಾರದಂದು ಚನ್ನಗಿರಿ ತಾಲ್ಲೂಕಿನ ಕಾರಿಗನೂರಿಗೆ ತಲುಪಿದೆ.
ಒಟ್ಟು 2,000 ಕಿ.ಮೀ. ಪಾದಯಾತ್ರೆಯನ್ನು ಕೈಗೊಳ್ಳುತ್ತಿರುವ ಪಟೇಲ್, ಈಗ 350 ಕಿ.ಮೀ. ಕ್ರಮಿಸಿದ್ದಾರೆ. ಅ.2ರಂದು ಬೆಂಗಳೂರಿನಿಂದ ಆರಂಭಿಸಿರುವ ಯಾತ್ರೆಯ ಮೊದಲ ಭಾಗ ಕಾರಿಗನೂರು ತಲುಪುವುದರೊಂದಿಗೆ ಮುಕ್ತವಾ ಯವಾಗಿದೆ. ಕಾರಿಗನೂರು ಗ್ರಾಮ ಪಂಚಾಯ್ತಿಗೆ ಗ್ರಾಮ ಸ್ವರಾಜ್ಯದ ಆಶಯದ ಮನವಿ ಪತ್ರವನ್ನು ಮಹಿಮಾ ಪಟೇಲ್ ಅವರು ಸಲ್ಲಿಸಿದ್ದಾರೆ.
ಪಾದಯಾತ್ರೆಯ ಎರಡನೇ ಹಂತವನ್ನು ಬರುವ ನವೆಂಬರ್ 23ರಿಂದ ಆರಂಭಿಸ ಲಾಗುವುದು. ಡಿಸೆಂಬರ್ 12ರಂದು ಮಾಜಿ ಮುಖ್ಯಮಂತ್ರಿ ಜೆ.ಹೆಚ್. ಪಟೇಲ್ ಅವರ ಪುಣ್ಯಸ್ಮರಣೆಯ ದಿನದಂದು ಕೂಡಲಸಂಗಮ ತಲುಪಲಾಗುವುದು ಎಂದು ಪಟೇಲ್ ತಿಳಿಸಿದ್ದಾರೆ.
ದಾವಣಗೆರೆಗೆ ಆಗಮಿಸಿದ ಸಂದರ್ಭದಲ್ಲಿ ಪತ್ರಿಕೆಯೊಂದಿಗೆ ಮಾತನಾಡಿರುವ ಅವರು, ಗ್ರಾಮ ಸ್ವರಾಜ್ಯ ಎಂಬುದು ನಗರಗಳ ಜೊತೆ ನಡೆಸುವ ಸ್ಪರ್ಧೆಯಲ್ಲ. ಅದು ಗ್ರಾಮಗಳ ಸ್ವಾಲವಂಬನೆ ಹಾಗೂ ಸ್ವತಂತ್ರ ಅಸ್ತಿತ್ವಕ್ಕೆ ಸಂಬಂಧಿಸಿದ್ದು. ನಾಗರಿಕರಲ್ಲಿ ಸದ್ಭಾವನೆ ಮೂಡಿಸುವಂಥದ್ದು ಎಂದರು.
ಕೃಷಿಗಾಗಿ ರಾಸಾಯನಿಕ ವಿಷ ಸುರಿದು ರೈತರು ತಾವು ವಿಷ ಉಣ್ಣುವ ಜೊತೆಗೆ, ಆಹಾರದ ಮೂಲಕ ಜನರಿಗೆ ವಿಷ ತಲುಪಿಸುವಂತಾಗಿದೆ. ಇದನ್ನು ತಪ್ಪಿಸಿ ಸಹಜ ಬೇಸಾಯ, ಪಶು ಸಂಗೋಪನೆ, ಮಿಶ್ರ ಬೆಳೆಯೂ ಗ್ರಾಮ ಸ್ವರಾಜ್ಯದ ಭಾಗ ಎಂದವರು ಹೇಳಿದ್ದಾರೆ.
ಈಗ ಆಸ್ಪತ್ರೆಗಳು ತುಂಬುತ್ತಿವೆ. ಪೊಲೀಸ್ – ಕೋರ್ಟ್ಗಳ ಅಗತ್ಯ ಹೆಚ್ಚಾಗುತ್ತಿದೆ. ಯಾವ ಸಮಾಜದಲ್ಲಿ ಆಸ್ಪತ್ರೆ, ಪೊಲೀಸ್ ಹಾಗೂ ಕೋರ್ಟ್ಗಳ ಅಗತ್ಯ ಕಡಿಮೆ ಇರುತ್ತದೋ ಅಲ್ಲಿ ಗ್ರಾಮ ಸ್ವರಾಜ್ಯ ರೂಪುಗೊಳ್ಳುತ್ತದೆ ಎಂದು ಪಟೇಲ್ ತಿಳಿಸಿದ್ದಾರೆ.
ನಗರಗಳ ‘ಚಮಕ್’ ನೋಡಿ ಅದೇ ಉತ್ತಮ ಎಂದು ಅಲ್ಲಿಗೆ ಅರಸಿ ಹೋದವರಿಗೆ ನಿರಾಸೆಯಾಗಿದೆ. ಕೊರೊನಾ ಕಾಲದಲ್ಲಿ ಅವರು ಉದ್ಯೋಗ ಕಳೆದಕೊಂಡು ಗ್ರಾಮಗಳಿಗೆ ಮರಳಿದ್ದಾರೆ. ಇವರಲ್ಲಿ ಕೃಷಿ ಭೂಮಿ ಇರುವವರು, ಇಲ್ಲದವರಿಬ್ಬರೂ ಇದ್ದಾರೆ. ಇವರಿಗೆ ಗ್ರಾಮಗಳಲ್ಲಿ ಬದುಕು ಕಟ್ಟಿಕೊಳ್ಳಲು ಅವಕಾಶ ಕಲ್ಪಿಸಬೇಕಿದೆ ಎಂದವರು ತಿಳಿಸಿದರು.
ಪಾದಯಾತ್ರೆಯಲ್ಲಿ ಅವರ ಜೊತೆ ಜಿಲ್ಲಾ ಪಂಚಾಯ್ತಿ ಸದಸ್ಯ ತೇಜಸ್ವಿ ಪಟೇಲ್, ಚಂದ್ರಶೇಖರ್ ಗಂಗೂರು, ವಾಣಿ ಪಟೇಲ್, ಮಹಿಮಾ ಪಟೇಲ್ ಪತ್ನಿ ಶೈಲಜಾ ಪಟೇಲ್, ಸ್ವಾಮೀಜಿ, ಶಿವರಾಮ್, ರಮೇಶ್, ಬೆಣ್ಣೆಹಳ್ಳಿ ನಾಗರಾಜ್, ಕಲಾವತಿ, ಲಕ್ಷ್ಮಿ, ಸೂರ್ಯ ಪ್ರಕಾಶ್, ಶ್ರೀ ನಿರಂಜನ ದೇಶಿಕೇಂದ್ರ ಸ್ವಾಮೀಜಿ, ಧನಂಜಯ್, ಶ್ರೀನಿವಾಸ್ ಮತ್ತಿತರರು ಜೊತೆಯಾಗಿದ್ದರು.