ದೇವನಗರಿಯಲ್ಲಿ ಬೆಳಕು ಕಾಣದ ಬೆಳ್ಳಿ ಪರದೆ

ದಾವಣಗೆರೆ, ಅ. 15- ಚಿತ್ರಮಂದಿಗಳನ್ನು ಪುನರಾ ರಂಭಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಅನುಮತಿ ನೀಡಿದ್ದರೂ, ದಾವಣಗೆರೆಯ ಚಿತ್ರಮಂದಿರ ಗಳಲ್ಲಿನ ಬೆಳ್ಳಿ ಪರದೆ ಮೇಲೆ ಗುರುವಾರ ಬೆಳಕು ಕಾಣಲಿಲ್ಲ.

ಸರ್ಕಾರದ ಮಾರ್ಗಸೂಚಿ ಮಾಲೀಕರಿಗೆ ಬಿಸಿ ತುಪ್ಪವಾಗಿದೆ. ಅಲ್ಲದೆ ಹೊಸ ಚಿತ್ರಗಳ ಬಿಡುಗಡೆ ಸದ್ಯಕ್ಕೆ ಇಲ್ಲದಿರುವುದು ಹಾಗೂ ಕೊರೊನಾ ಭಯಕ್ಕೆ ಪ್ರೇಕ್ಷಕರು ಬಂದಾರೆಯೇ ? ಎಂಬ ಅನುಮಾನದಿಂದ ಮಾಲೀಕರು ಚಿತ್ರ ಪ್ರದರ್ಶಿಸುವಲ್ಲಿ ದ್ವಂದ್ವ ನಿಲುವಿನಲ್ಲಿದ್ದಾರೆ.

ಗುರುವಾರ ನಗರದ ಬಹುತೇಕ ಚಿತ್ರಮಂದಿರಗಳ ಗೇಟುಗಳು ತೆರೆಯಲಿಲ್ಲ. ಒಳಗಡೆ ಸಿಬ್ಬಂದಿಗಳು ಮಾತ್ರ ಮಾಮೂಲಿ ಎಂಬಂತೆ ಸ್ವಚ್ಛತಾ ಕಾರ್ಯದಲ್ಲಿ ನಿರತರಾಗಿದ್ದರು.

`ಜನತಾವಾಣಿ’ಯೊಂದಿಗೆ ಮಾತನಾಡಿದ ಪುಷ್ಪಾಂಜಲಿ ಚಿತ್ರ ಮಂದಿರದ ವ್ಯವಸ್ಥಾಪಕ ಅರುಣ್ ಕುಮಾರ್, ಶುಕ್ರವಾರದಿಂದ ಚಿತ್ರಪ್ರದರ್ಶನ ಆರಂಭಿಸಲು ನಿರ್ಧರಿಸಿದ್ದೇವೆ ಎಂದು ಹೇಳಿದರು.

ಸರ್ಕಾರದ ಮಾರ್ಗಸೂಚಿಯಂತೆ ಎಲ್ಲಾ ಸಿದ್ಧತೆ ಮಾಡಿಕೊಂಡಿದ್ದೇವೆ. ಆದರೆ ಹೊಸ ಚಿತ್ರಗಳಿಲ್ಲ. ಚಿರಂಜೀವಿ ಸರ್ಜಾ ಹಾಗೂ ಅಮೃತಾ ನಟಿಸಿರುವ ಶಿವಾರ್ಜುನ ಚಿತ್ರವನ್ನು ನಾಳೆ ಪ್ರದರ್ಶಿಸಲಾಗುವುದು. ಆದರೆ ಪ್ರೇಕ್ಷಕರು ಎಷ್ಟರ ಸಂಖ್ಯೆಯಲ್ಲಿ ಬರುತ್ತಾರೆ ಎಂದು ನೋಡಬೇಕಿದೆ. ಪ್ರೇಕ್ಷಕರು ಬಂದರೆ ಮಾತ್ರ ಪ್ರದರ್ಶನ ನಡೆಯುತ್ತದೆ ಎಂದು ಹೇಳಿದರು.

ಸ್ಟಾರ್ ನಟರ ಚಿತ್ರಗಳು ಸಂಕ್ರಾಂತಿ ವೇಳೆಗೆ ಬಿಡುಗಡೆಯಾಗಲಿವೆ ಎನ್ನಲಾಗಿದ್ದು, ಕೆಲವು ಮಾಲೀಕರು ಸಂಕ್ರಾಂತಿ ನಂತರವೇ ಪ್ರದರ್ಶನ ಆರಂಭಿಸಲು ನಿರ್ಧರಿಸಿದ್ದಾರೆ.

ಕಳೆದ ಏಳು ತಿಂಗಳಿನಿಂದ ಥಿಯೇಟರ್‌ ಸಿಬ್ಬಂದಿಗಳು ಜೀವನಕ್ಕಾಗಿ ಬೇರೇ ಬೇರೆ ಉದ್ಯೋಗ ಕಂಡುಕೊಂಡಿದ್ದಾರೆ. ಒಬ್ಬರು ಅಥವಾ ಇಬ್ಬರು ಆಗಾಗ್ಗೆ ಚಿತ್ರಮಂದಿರಗಳಿಗೆ ಬಂದು ಸ್ವಚ್ಛಗೊಳಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಮೊದಲಿನಂತೆ ಚಿತ್ರಪ್ರದರ್ಶನ ಆರಂಭವಾಗಿ ಹಳೆಯ ಉದ್ಯೋಗಕ್ಕಾಗಿ ಸಿಬ್ಬಂದಿಗಳು ಕಾತರರಾಗಿದ್ದಾರೆ.

error: Content is protected !!