ಶಾಲಾವರಣದಲ್ಲೇ ವಿದ್ಯಾಗಮ ನಡೆಸಲಿ

ದಾವಣಗೆರೆ, ಅ.14- ಕೊರೊನಾ ವಿಷಮ ಸಂದರ್ಭದಲ್ಲಿ ಮಕ್ಕಳಿಗೆ ಶಿಕ್ಷಣ ನೀಡಲು ಆರಂಭಿಸಿದ್ದ ಮಹತ್ವಾಕಾಂಕ್ಷಿ ವಿದ್ಯಾಗಮ ಯೋಜನೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿರುವುದನ್ನು ರದ್ದುಗೊಳಿಸಿ ಶಾಲೆ ಆವರಣದಲ್ಲೇ ಮುಂದುವರೆಸಬೇಕು. ಅಲ್ಲದೇ, ಖಾಸಗಿ ವಾಹಿನಿಗಳಲ್ಲಿ ನಿತ್ಯವೂ ಕನಿಷ್ಟ 4 ತಾಸು ಶೈಕ್ಷಣಿಕ ಪಾಠ ಪ್ರಸಾರಕ್ಕೆ ಆದೇಶಿಸುವಂತೆ ನಗರದಲ್ಲಿಂದು ಹಿರಿಯ ವಿದ್ಯಾರ್ಥಿಗಳು, ಪೋಷಕರು ಹಾಗೂ ವಿವಿಧ ಸಂಘಟನೆಗಳಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳನ್ನು ನಗರದಲ್ಲಿ ಇಂದು ಪ್ರತ್ಯೇಕವಾಗಿ ಆಗ್ರಹಿಸಲಾಯಿತು.

ಉಪವಿಭಾಗಾಧಿಕಾರಿಗಳ ಕಛೇರಿ ಬಳಿ ಜಮಾಯಿಸಿದ್ದ ಸಾರ್ವಜನಿಕ ಶಿಕ್ಷಣ ಜಾಗೃತಿ ವೇದಿಕೆಯ ನೇತೃತ್ವದಲ್ಲಿ ಶಾಲಾ ಮಕ್ಕಳ ಪೋಷಕರು, ಹಿರಿಯ ವಿದ್ಯಾರ್ಥಿಗಳ ಸಂಘ, ಶಾಲೆ ದಾನಿಗಳು ಹಾಗೂ  ಎಸ್‌ಡಿಎಂಸಿ ಸಮನ್ವಯ ವೇದಿಕೆ, ಕಾನೂನು ಸೇವಾ ಪ್ರಾಧಿಕಾರ, ಸುವರ್ಣ ಕರ್ನಾಟಕ ವೇದಿಕೆ ಸಹಯೋಗದಲ್ಲಿ ಉಪವಿಭಾಗಾಧಿಕಾರಿ ಮುಖಾಂತರ ಸರ್ಕಾರಗಳಿಗೆ ಮನವಿ ಸಲ್ಲಿಸಲಾಯಿತು.

ಮುಕ್ತವಾಗಿ ಶಾಲೆಗಳು ತೆರೆಯುವವರೆಗೂ ಶೈಕ್ಷಣಿಕ ತರಗತಿ ಪಠ್ಯಾಧಾರಿತ ವಿಷಯಗಳನ್ನು ಸರ್ಕಾರದ ಅಧೀನದಲ್ಲಿರುವ ದೂರದರ್ಶನದ ಚಂದನ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವಂತೆ ಖಾಸಗಿ ಸುದ್ದಿ ಮತ್ತು ಮನರಂಜನಾ ವಾಹಿನಿಗಳಲ್ಲಿಯೂ 5ನೇ ತರಗತಿಯಿಂದ ನಿತ್ಯ ಕನಿಷ್ಟ 4 ಗಂಟೆ ಸಮಯದಲ್ಲಿ ಶೈಕ್ಷಣಿಕ ಪಾಠಗಳನ್ನು ಶಿಕ್ಷಣ ಇಲಾಖೆ ಮಾರ್ಗದರ್ಶನದಲ್ಲಿ ಏಕರೂಪದಲ್ಲಿ ಪ್ರಸಾರ ಮಾಡುವಂತೆ ಸೂಕ್ತ ಆದೇಶ ನೀಡಬೇಕೆಂದು ಒತ್ತಾಯಿಸಲಾಯಿತು.

ಕೊರೊನಾ ಸೋಂಕು ವ್ಯಾಪಿಸುವ ಹಿನ್ನೆಲೆಯಲ್ಲಿ ಲಾಕ್‌ಡೌನ್ ತೆರವಾಗುತ್ತಿದ್ದಂತೆ ಶಾಲಾ ಮಕ್ಕಳಿಗೆ ವಿದ್ಯಾಭ್ಯಾಸದ ಆಸಕ್ತಿ ಕ್ಷೀಣಿಸದಂತೆ ಶಿಕ್ಷಣ ಇಲಾಖೆ ವತಿಯಿಂದ ಆರಂಭಿಸಿದ್ದ `ವಿದ್ಯಾಗಮ’ ಯೋಜನೆಯನ್ನು ಹಲವಾರು ವಲಯಗಳಿಂದ ಕೇಳಿ ಬಂದ ಕುಮ್ಮಕ್ಕಿನ ಒತ್ತಾಯದ ಮೇರೆಗೆ ಸರ್ಕಾರ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿರುವುದು ಸರಿಯಲ್ಲ ಎಂದು ಸಾರ್ವಜನಿಕ ಶಿಕ್ಷಣ ಜಾಗೃತಿ ವೇದಿಕೆ ಮುಖಂಡ ಹಾಗೂ ಪತ್ರಕರ್ತ ಆರ್.ಪರಮೇಶ್ವರಪ್ಪ ಆಕ್ರೋಶ ವ್ಯಕ್ತಪಡಿಸಿದರು.

ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಸೇರಿದಂತೆ ಬಹುತೇಕ ಶಾಲೆ ವಿದ್ಯಾರ್ಥಿಗಳು ಕಲಿಕೆ ಮುಂದುವರಿಕೆಗೆ ಆಶಾದಾಯಕ ಯೋಜನೆಯಾಗಿದ್ದ ವಿದ್ಯಾಗಮದಲ್ಲಿ ಶಿಕ್ಷಕರು, ಇಲಾಖೆ ಅಧಿಕಾರಿಗಳು ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ವಿಶಿಷ್ಟ ಪ್ರತಿಭೆಗಳೊಂದಿಗೆ ವಿದ್ಯಾರ್ಥಿಗಳ ಸಂಪರ್ಕದಲ್ಲಿದ್ದರು. ಯಾರದೋ ಕುಮ್ಮಕ್ಕಿನ ಆಕ್ಷೇಪದ ಮೇರೆಗೆ ನಿಲ್ಲಿಸಲಾಗಿದ್ದು, ಕೂಡಲೇ ಯೋಜನೆಯನ್ನು ಶಾಲೆ ಆವರಣದಲ್ಲೇ ಆರಂಭಿಸಿ ಮಕ್ಕಳಿಗೆ ಶಿಕ್ಷಣ ದೊರೆಯುವಂತೆ ಮಾಡಬೇಕೆಂದರು.

ಕೆಲಸ ಮಾಡಲು ಇಚ್ಛಿಸದ ಶಿಕ್ಷಕರಿಗೆ ವೇತನ ರಹಿತ ದೀರ್ಘ ರಜೆ ನೀಡಬೇಕು. ಆರ್‌ಡಿಪಿಆರ್ ಇಲಾಖೆಯು ರಚಿಸಿರುವ ಗ್ರಾಮ ಶಿಕ್ಷಣ ಪಡೆಯನ್ನು ಬಲವರ್ಧನೆಗೊಳಿಸಬೇಕು. ಅಗತ್ಯ ಮಾಸ್ಕ್, ಸ್ಯಾನಿಟೈಸರ್ ಅನ್ನು ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೆ ಪೂರೈಸಬೇಕು. 5 ನೇ ತರಗತಿಯಿಂದಲೂ ಚಂದನ ವಾಹಿನಿಯಲ್ಲಿ ಪಾಠಗಳನ್ನು ಪ್ರಸಾರ ಮಾಡಬೇಕು. 

ಕಾನೂನು ಸೇವಾ ಪ್ರಾಧಿಕಾರದ ರಾಜ್ಯ ಸಮಿತಿ ಸದಸ್ಯ ನ್ಯಾಯವಾದಿ ಎಲ್.ಹೆಚ್.ಅರುಣಕುಮಾರ್ ಮಾತನಾಡಿ, ಶಿಕ್ಷಣ ವ್ಯವಸ್ಥೆಯನ್ನು ಸ್ಥಗಿತಗೊಳಿಸುವುದರಿಂದ ಸೋಂಕು ನಿಯಂತ್ರಣವಾಗುತ್ತದೆ ಎಂಬ ಅವೈಜ್ಞಾನಿಕ ಕುಮ್ಮಕ್ಕಿನ ಆಕ್ಷೇಪಣೆಯನ್ನು ಪರಿಶೀಲಿಸಿ ಮಕ್ಕಳ ಪರವಾಗಿರುವ ಶೈಕ್ಷಣಿಕ ಕಾರ್ಯಕ್ರಮವನ್ನು ರಾಜ್ಯಾದ್ಯಂತ ಶಾಲಾ ಆವರಣದಲ್ಲೇ ಮುಂದುವರೆಸಬೇಕು ಎಂದು ಮನವಿ ಮಾಡಿದರು.

ಎಸ್‌ಡಿಎಂಸಿ ಸಮನ್ವಯ ವೇದಿಕೆಯ ಮತ್ತಿ ಗ್ರಾಮ ಪಂಚಾಯಿತಿ ಸದಸ್ಯ ಪಿ.ಎಂ. ಮಂಜುನಾಥ್, ಸುವರ್ಣ ಕರ್ನಾಟಕ ವೇದಿಕೆ ಸಂಸ್ಥಾಪಕ ಅಧ್ಯಕ್ಷ ಸಂತೋಷ್‌ಕುಮಾರ್, ಸಾಮಾಜಿಕ ಹೋರಾಟಗಾರ ವಿ.ಕೆ.ಶಾಸ್ತ್ರಿ, ಜಗದೀಶ್, ರಾಮಘಟ್ಟ ಶಶಿಕುಮಾರ್, ಉಚ್ಚಂಗಿದುರ್ಗ ವಿವೇಕಾನಂದ, ನಿಟುವಳ್ಳಿ ವಿಜಯಲಕ್ಷ್ಮಿ, ಎಲೆಬೇತೂರು ಹೆಚ್. ಹನುಮಂತಪ್ಪ, ಮಾಯಕೊಂಡ ಶರಣಪ್ಪ, ಕೊಮಾರನಹಳ್ಳಿ ವಸಂತ, ಕುಂಬಳೂರು ಆಂಜನೇಯ, ಕುಂದೂರು ರೇವಣಸಿದ್ದಪ್ಪ ಸೇರಿದಂತೆ ಇನ್ನಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

error: Content is protected !!