ದಾವಣಗೆರೆ, ಅ. 14- ಮಹಾನಗರ ಪಾಲಿಕೆಯ ನಕಲಿ ಸೀಲು, ಸಹಿ ಬಳಸಿ ಜನತೆಗೆ ವಂಚಿಸಿ, ಪಾಲಿಕೆಗೆ ಕೋಟ್ಯಾಂತರ ರೂ. ನಷ್ಟ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಈ ಸಂಬಂಧ ಮೂವರನ್ನು ಬಂಧಿಸಿದ್ದು, ತನಿಖೆ ನಡೆಯುತ್ತಿದೆ.
ಮಹಾನಗರ ಪಾಲಿಕೆ ಸಭಾಂಗಣದಲ್ಲಿ ಬುಧವಾರ ಸಂಜೆ ಪತ್ರಿಕಾಗೋಷ್ಠಿ ನಡೆಸಿ ಈ ವಿಷಯ ತಿಳಿಸಿದ ಮೇಯರ್ ಬಿ.ಜಿ. ಅಜಯ್ ಕುಮಾರ್, ಮೇಯರ್ ಆಗಿ ಅಧಿಕಾರ ವಹಿಸಿಕೊಂಡು 8 ತಿಂಗಳಿನಿಂದ ಜನತೆಗೆ ವಂಚಿಸುವವರ ಮೇಲೆ ಕಣ್ಣಿಟ್ಟಿದ್ದು, ಅವರನ್ನು ಹಿಡಿಯುವಲ್ಲಿ ಈಗ ಸಫಲರಾಗಿದ್ದೇವೆ ಎಂದರು.
ಶಾಮನೂರಿನ ಸರ್ವೇ ನಂ.208ರಲ್ಲಿ 20×30 ಅಳತೆಯ ನಿವೇಶನವನ್ನು ಆರ್.ನೇತ್ರಾವತಿ ಕೋಂ ಹನುಮಂತಪ್ಪ ಹಾಗೂ ರಾಜೇಶ್ವರಿ ಕೋಂ ವಿಜಯಕುಮಾರ್ ಇವರ ಹೆಸರಿಗೆ ನಕಲಿ ಮೊಹರು ಹಾಗೂ ನಕಲಿ ಕಂದಾಯ ಅಧಿಕಾರಿಗಳ ಸಹಿ ಮಾಡಿ ವಂಚನೆ ಮಾಡಲಾಗಿದೆ. ಈ ಬಗ್ಗೆ ಪಾಲಿಕೆ ನೀಡಿದ ದೂರಿನನ್ವಯ ಪೊಲೀಸರು, ಮಹೇಶ್ ಹಾಗೂ ಆತನಿಗೆ ಸಹಾಯಕರಾಗಿದ್ದ ಗುರುರಾಜ್ ಹಾಗೂ ವೆಂಕಟೇಶ್ ಎನ್ನುವವರನ್ನು ಬಂಧಿಸಿದ್ದಾರೆ ಎಂದು ವಿವರಿಸಿದರು.
ಕೆಲವು ಸರ್ಕಾರಿ ನೌಕರರು ಸೇರಿದಂತೆ ಅನೇಕರು ಈ ವಂಚನೆಯ ಜಾಲದಲ್ಲಿ ಶಾಮೀಲಾಗಿರುವ ಬಗ್ಗೆ ಮತ್ತು ಹಲವಾರು ವರ್ಷಗಳಿಂದ ಈ ರೀತಿ ಜನತೆಗೆ ವಂಚಿಸಿರುವ ಅನುಮಾನಗಳಿದ್ದು, ಪೊಲೀಸರ ತನಿಖೆಗೆ ಸಂಪೂರ್ಣ ಸಹಕಾರ ನೀಡಲಾಗುವುದು ಎಂದರು.
ಪಾಲಿಕೆಯಿಂದ ಖಾತೆ ಎಕ್ಸ್ಟ್ರಾಕ್ಟ್ ಮಾಡಿಸಿದವರು, ಕಂದಾಯ ಕಟ್ಟಿದವರು ಜೆರಾಕ್ಸ್ ಪ್ರತಿಗಳೊಂದಿಗೆ ಪಾಲಿಕೆ ಕಚೇರಿಗೆ ಬಂದು ಪರಿಶೀಲಿಸಿಕೊಳ್ಳಿ. ಏಕೆಂದರೆ ನೀವೂ ಸಹ ವಂಚಿತರಾಗಿರಬಹುದು. ಜೊತೆಗೆ ವಂಚಕರ ಬಗ್ಗೆಯೂ ನಮಗೆ ತಿಳಿಯಲು ಸಹಾಯಕವಾಗುತ್ತದೆ.
– ಬಿ.ಜಿ. ಅಜಯ್ ಕುಮಾರ್, ಮೇಯರ್.
ನಗರದ ಜನತೆ ತಾವು ಕಂದಾಯ ಕಟ್ಟಿದ ರಶೀದಿ ಹಾಗೂ ಖಾತೆ ಎಕ್ಸ್ ಟ್ರಾಕ್ಟ್‌ಗಳನ್ನು ಪಾಲಿಕೆ ಕಚೇರಿಗೆ ತಂದು ಪರಿಶೀಲಿಸಿಕೊಳ್ಳಬೇಕು. ಯಾವುದೇ ಮಧ್ಯವರ್ತಿ ಗಳಿಗೆ ಹಣ ನೀಡದೆ ನೇರ ಕಚೇರಿಯಲ್ಲಿ ಹಣ ಪಾವತಿಸ ಬೇಕು ಎಂದು ಅಜಯ್ ಕುಮಾರ್ ಮನವಿ ಮಾಡಿದ್ದಾರೆ. ಪಾಲಿಕೆಯಲ್ಲಿ ಭ್ರಷ್ಟಾಚಾರ ಹಾಗೂ ಮಧ್ಯವರ್ತಿಗಳ ಹಾವಳಿ ತಡೆಯಲು ಎಲ್ಲಾ ಶಾಖೆಗಳಲ್ಲೂ ಸರ್ಕಾರಕ್ಕೆ ತಗಲುವ ಶುಲ್ಕ ಹಾಗೂ ಅಗತ್ಯವಾದ ದಾಖಲಾತಿಗಳ ವಿವರವನ್ನು ಜನರಿಗೆ ತಿಳಿಸಲು ನೋಟಿಸ್ ಬೋರ್ಡ್‌ನಲ್ಲಿ ಪ್ರಚಾರ ಪಡಿಸಲು ಕ್ರಮ ಕೈಗೊಳ್ಳಲಾಗಿದೆ. ಇನ್ನು ಮುಂದೆ ಪಾಲಿಕೆಯಲ್ಲಿ ಯಾವುದೇ ಮಧ್ಯವರ್ತಿಗಳಿಗೆ ಅವಕಾಶ ಕೊಡುವುದಿಲ್ಲ. ಸಾರ್ವಜನಿಕರಿಗೆ ವಂಚನೆಯಾಗಲು ಬಿಡುವುದಿಲ್ಲ ಎಂದು ಗುಡುಗಿದರು.
ಕಂದಾಯದ ಹಣದಲ್ಲಿಯೇ ಮಹಾನಗರ ಪಾಲಿಕೆಯು ಜನತೆಗೆ ಮೂಲ ಸೌಲಭ್ಯಗಳನ್ನು ಕಲ್ಪಿಸುತ್ತದೆ. ಈ ವಂಚಕರು ಪಾಲಿಕೆ ಕಂದಾಯಕ್ಕೆ ಕನ್ನ ಹಾಕಿದ್ದು, ಇದರಿಂದ ಅಭಿವೃದ್ಧಿ ಹೇಗೆ ಸಾಧ್ಯ? ಎಂದು ಪ್ರಶ್ನಿಸಿದರು. ಮುಂದಿನ ದಿನಗಳಲ್ಲಿ ಪಾಲಿಕೆಯ ಪೂರ್ತಿ ಆಡಳಿತ ವ್ಯವಸ್ಥೆಯನ್ನು ಕಂಪ್ಯೂಟರೀಕರಣಗೊಳಿಸುವ ಉದ್ದೇಶವಿದೆ ಎಂದು ಮೇಯರ್ ತಿಳಿಸಿದರು.
ಖೊಟ್ಟಿ ದಾಖಲೆ ಸೃಷ್ಟಿ; ವಿಸ್ತೃತ ತನಿಖೆಗೆ ಸೂಚನೆ: ಎಸ್ಪಿ
ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಖೊಟ್ಟಿ ದಾಖಲೆಗಳನ್ನು ಸೃಷ್ಟಿಸಿ, ಫೋರ್ಜರಿ ಸಹಿ ಮಾಡಿ ಪಾಲಿಕೆಗೆ ಬರಬೇಕಾದ ಕಂದಾಯಕ್ಕೆ ವಂಚನೆ ಮಾಡಿರುವ ಕುರಿತು ಪಾಲಿಕೆ ಅಧಿಕಾರಿಗಳು ನೀಡಿರುವ ದೂರಿನನ್ವಯ ಮೂವರನ್ನು ಬಂಧಿಸಿರುವುದಾಗಿ ಎಸ್ಪಿ ಹನುಮಂತರಾಯ ತಿಳಿಸಿದ್ದಾರೆ.
ಇಲ್ಲಿನ ಬಡಾವಣೆ ಪೊಲೀಸ್ ಠಾಣೆಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಹೊನ್ನಾಳಿ ತಾಲ್ಲೂಕಿನ ಮಾಸಡಿ ಗ್ರಾಮದ ಮಹೇಶ್ ಬಿನ್ ಬಸಪ್ಪ ಹಾಗೂ ಆತನಿಗೆ ಸಹಾಯಕರಾಗಿದ್ದ ಆನೆಕೊಂಡ ಬಸವೇಶ್ವರ ದೇವಸ್ಥಾನದ ಬಳಿಯ ಗುರುರಾಜ್ ಎ. ಬಿನ್ ಬಸಪ್ಪ, ಅದೇ ಗ್ರಾಮದ ಎ.ಕೆ. ಕಾಲೋನಿಯ ವಾಸಿ, ಪಾಲಿಕೆ ಬಳಿ ಫಾರಂ ಬರೆಯುವ ಕೆಲಸ ಮಾಡುತ್ತಿದ್ದ ವೆಂಕಟೇಶ ಎ.ಆರ್. ಬಿನ್ ರೇವಣಸಿದ್ದಪ್ಪ ಎಂಬುವವರನ್ನು ಬಂಧಿಸಿರುವುದಾಗಿ ತಿಳಿಸಿದರು.
ಇವರು ಪಾಲಿಕೆಯ ಸೀಲ್ಗಳು, ಚಲನ್ಗಳನ್ನು ನಕಲಿ ಸೃಷ್ಟಿಸಿ ಪಾಲಿಕೆ ಬ್ಯಾಂಕ್ ಖಾತೆಗೆ ಸಂದಾಯ ಮಾಡದೆ ಸ್ವಂತಕ್ಕೆ ಉಪಯೋಗಿಸಿಕೊಂಡು ಮೋಸ ಮಾಡಿರುವುದು ಪ್ರಾಥಮಿಕ ತನಿಖೆಯಲ್ಲಿ ತಿಳಿದಿದೆ. ವಶ ಪಡಿಸಿಕೊಂಡ ಸೀಲುಗಳು ಹಲವಾರು ವರ್ಷಗಳ ಹಳೆಯವಾಗಿದ್ದರಿಂದ ಅನೇಕ ವರ್ಷಗಳಿಂದ ವಂಚನೆ ಮಾಡಿರುವ ಮಾಹಿತಿ ಇದ್ದು, ವಿಸ್ತೃತ ತನಿಖೆಗೆ ಆದೇಶಿಸಲಾಗಿದೆ ಎಂದರು.
ಪ್ರಕರಣದ ಪತ್ತೆಗೆ ಶ್ರಮಿಸಿದ ದಕ್ಷಿಣ ವೃತ್ತದ ಸಿಪಿಐ ಹೆಚ್.ಗುರುಬಸವರಾಜ್, ಪಿಎಸ್ಐ ಚಿದಾನಂದಪ್ಪ, ಎಎಸ್ಐ ಕೆ.ಎಲ್. ತಿಪ್ಪೇಸ್ವಾಮಿ, ಸಿಬ್ಬಂದಿ ರಾಜು, ಲೋಕಾನಾಯ್ಕ, ಚಂದ್ರಪ್ಪ ಅವರ ಕಾರ್ಯವನ್ನು ಇದೇ ಸಂದರ್ಭದಲ್ಲಿ ಎಸ್ಪಿಯವರು ಶ್ಲ್ಯಾಘಿಸಿದರು.
ಜಗಳೂರು ಕೊಲೆ ಶಂಖೆ ತನಿಖೆ : ಜಗಳೂರು ಪಟ್ಟಣದ ಬಿದರಕೆರೆ ರಸ್ತೆಯಲ್ಲಿ ನಾಗರಾಜ್ (40) ವ್ಯಕ್ತಿಯ ಶವ ಪತ್ತೆಯಾಗಿದ್ದು, ಕೊಲೆ ಶಂಕೆ ಹಿನ್ನೆಲೆಯಲ್ಲಿ ತನಿಖೆ ನಡೆಸಲಾಗಿದೆ.
ಎಗ್ ರೈಸ್ ಅಂಗಡಿ ಇಟ್ಟುಕೊಂಡಿದ್ದ ಈ ವ್ಯಕ್ತಿಯ ಕತ್ತು ಸೀಳಿ ಕೊಲೆ ಮಾಡಲಾಗಿದ್ದು, ಇದೊಂದು ಅಮಾನುಷ ಕೃತ್ಯ ಎಂದು ಎಸ್ಪಿ ಹನುಮಂತರಾಯ ತಿಳಿಸಿದ್ದಾರೆ. ಮೃತನ ಸಂಬಂಧಿಗಳು ನೀಡಿರುವ ದೂರಿನನ್ವಯ ತನಿಖೆ ಕಾರ್ಯ ಮುಂದುವರೆದಿದೆ ಎಂದು ಎಸ್ಪಿ ಹೇಳಿದರು.
ಪಾಲಿಕೆ ಆಯುಕ್ತ ವಿಶ್ವನಾಥ ಮುದಜ್ಜಿ ಹಾಗೂ ಪೊಲಿಸ್ ಅಧಿಕಾರಿಗಳು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.