ದಾವಣಗೆರೆ, ಜ. 10- ಕೊರೊನಾ ಸಾಂಕ್ರಾಮಿಕ ರೋಗದಿಂದ ತತ್ತರಿಸಿದ್ದ ಭಾರತದ ಆರ್ಥಿಕತೆ ನರೇಂದ್ರ ಮೋದಿ ಅವರು ಘೋಷಿಸಿದ ಆತ್ಮ ನಿರ್ಭರ್ ಭಾರತ ಪ್ಯಾಕೇಜ್‍ನಿಂದಾಗಿ ವೃದ್ಧಿಯತ್ತ ಸಾಗಿದೆ ಎಂದು ಲೋಕಸಭಾ ಸದಸ್ಯ ಜಿ.ಎಂ. ಸಿದ್ದೇಶ್ವರ ಹೇಳಿದ್ದಾರೆ.
ಭಾರತದ ಆರ್ಥಿಕತೆಯ ವಿಷಯದಲ್ಲಿ ಆತ್ಮ ನಿರ್ಭರ್ ಪ್ಯಾಕೇಜ್ ಅತ್ಯಂತ ಪ್ರಮುಖ ಪಾತ್ರ ವಹಿಸಿರುವುದು ಮಾತ್ರವಲ್ಲ, ನವಭಾರತ ನಿರ್ಮಾಣಕ್ಕೆ ಭದ್ರ ಬುನಾದಿಯಾಗಿದೆ. ಇಂದು ಇಡೀ ಜಗತ್ತು ಭಾರತವನ್ನು ವಿಶೇಷ ದೃಷ್ಟಿಯಿಂದ ನೋಡುವಂತಾಗಿದೆ. ಇದಕ್ಕೆ ಕಾರಣ ಸರ್ಕಾರದ ನೇತೃತ್ವ ವಹಿಸಿರುವ ನರೇಂದ್ರ ಮೋದಿ ಹಾಗೂ ಅವರ ಸಮರ್ಥ ನಾಯಕತ್ವ ಎಂದು ಪತ್ರಿಕಾ ಪ್ರಕಟಣೆಯಲ್ಲಿ ಅವರು ವಿಶ್ಲೇಷಿಸಿದ್ದಾರೆ.
ಆತ್ಮ ನಿರ್ಭರ್ ಪ್ಯಾಕೇಜ್‍ನಡಿ ಒಂದು ಕಡೆ ಸಣ್ಣ, ಸತಿಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಕಲ್ಯಾಣಕ್ಕಾಗಿ 16 ಯೋಜನೆಗಳ ಘೋಷಣೆ, ಇನ್ನೊಂದು ಕಡೆ ಬಡವರಿಗಾಗಿ, ಶೋಷಿತರಿಗಾಗಿ, ಕೂಲಿ ಕಾರ್ಮಿಕರಿಗಾಗಿ, ರೈತರಿಗಾಗಿ ಹತ್ತು ಹಲವು ಘೋಷಣೆ ಗಳನ್ನು ಅನುಷ್ಠಾನಗೊಳಿಸಿದ್ದಾರೆ.
ನರೇಂದ್ರ ಮೋದೀಜಿಯವರ ವೋಕಲ್ ಫಾರ್ ಲೋಕಲ್ ಅಂಡ್ ಮೇಕ್ ಇಟ್ ಗ್ಲೋಬಲ್ ಆಂದೋಲನ ಪ್ರತಿಯೊಂದು ವಲಯದಲ್ಲೂ ಕೂಡ ಭಾರತವನ್ನು ಸ್ವಾವಲಂಬಿಯಾಗಿಸುವತ್ತ ಕೊಂಡೊ ಯ್ಯುತ್ತಿದೆ. ಈ ಒಂದು ಆಂದೋಲನ ಸ್ಥಳೀಯ ಉದ್ದಿಮೆದಾರರನ್ನು ಸಬಲಗೊಳಿಸಲಿದೆ.
ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಯೋಜನೆಯ ಮೂಲಕ ರೂ.1.70 ಲಕ್ಷ ಕೋಟಿ ಪ್ಯಾಕೇಜ್ ಘೋಷಣೆ ಮಾಡಿದ ನಂತರ ಇದಕ್ಕೆ ಪೂರಕವಾಗಿ ಕೊರೊನಾ ವೈರಸ್‍ನಿಂದ ನಲುಗಿದ ಭಾರತದ ಆರ್ಥಿಕತೆಯನ್ನು ಸರಿದಾರಿಗೆ ತರುವ ನಿಟ್ಟಿನಲ್ಲಿ ಸ್ವಾವಲಂಬಿ ಭಾರತದ ನಿರ್ಮಾಣಕ್ಕಾಗಿ 20 ಲಕ್ಷ ಕೋಟಿ ರೂ ಮೊತ್ತದ ಬೃಹತ್ ಪ್ಯಾಕೇಜ್ ಘೋಷಣೆ ಮಾಡಿದರು. ಇದರಲ್ಲಿ 5.94 ಲಕ್ಷ ಕೋಟಿ ರೂ.ಗಳನ್ನು ಜನರಿಗೆ ಹೆಚ್ಚು ಉದ್ಯೋಗ ಒದಗಿಸುವ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳು, ರಿಯಲ್ ಎಸ್ಟೇಟ್ ವಲಯ ಮತ್ತು ವಿದ್ಯುತ್ ವಿತರಣಾ ಕ್ಷೇತ್ರಕ್ಕೆ ಮೀಸಲಿಡಲಾಗಿದೆ. 3.16 ಲಕ್ಷ ಕೋಟಿಗಳನ್ನು ರೈತರು, ಗ್ರಾಮೀಣ ಆರ್ಥಿಕತೆ, ವಲಸೆ ಕಾರ್ಮಿಕರು, ನಗರದ ಬಡವರು, ಮಧ್ಯಮ ವರ್ಗದವರ ಮನೆ ಖರೀದಿದಾರರಿಗೆ ಮೀಸಲಿಡಲಾಗಿದೆ. ಬೀದಿ ಬದಿ ವ್ಯಾಪಾರಿಗಳಿಗೆ 10 ಸಾವಿರ ಸುಲಭ ಸಾಲ ಸಿಗಲಿದೆ.
ದೇಶಾದ್ಯಂತ ವಿಮಾನ ನಿಲ್ದಾಣ, ಬಂದರು ನಿರ್ಮಾಣ ಸೇರಿದಂತೆ ಮೂಲಸೌಕರ್ಯ ಅಭಿವೃದ್ದಿಗೆ 1 ಲಕ್ಷ ಕೋಟಿ ಮೀಸಲಿಡಲಾಗಿದೆ. ಅತಿಸಣ್ಣ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ರೂ.3.00 ಲಕ್ಷ ಕೋಟಿ ಕೊಲ್ಯಾಟರಲ್ ಫ್ರೀ ಸಾಲ ನೀಡುವ ಯೋಜನೆಯಡಿ ಇಲ್ಲಿಯವರೆಗೆ 30 ಲಕ್ಷ ಕೈಗಾರಿಕೆಗಳಿಗೆ ಅಂದಾಜು 1.10 ಲಕ್ಷ ಕೋಟಿ ಸಾಲ ವಿತರಣೆ ಮಾಡಲಾಗಿದೆ. ರೂ.200 ಕೋಟಿಗಿಂತ ಕಡಿಮೆ ಮೊತ್ತದ ಟೆಂಡರ್‍ಗಳಲ್ಲಿ ಗ್ಲೋಬಲ್ ಟೆಂಡರ್‍ದಾರರ ಪಾಲ್ಗೊಳ್ಳುವಿಕೆಯನ್ನು ರದ್ದುಗೊಳಿಸಲಾಗಿದೆ. ಇದರಿಂದ ಸ್ಥಳೀಯ ಕೈಗಾರಿಕೆಗಳು ಬಲಿಷ್ಟಗೊಳ್ಳಲಿವೆ. ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಯೋಜನೆಯಡಿ 80 ಕೋಟಿ ಜನರಿಗೆ ನವೆಂಬರ್ 2020 ರವರೆಗೆ ಉಚಿತ ಪಡಿತರ ವಿತರಣೆಗೆ ಕ್ರಮಕೈಗೊಳ್ಳಲಾಗಿದೆ. ಉಜ್ವಲ ಯೋಜನೆಯಡಿ ನವೆಂಬರ್ 2020 ರವರೆಗೆ ಉಚಿತ ಗ್ಯಾಸ್ ಸಿಲಿಂಡರ್ ವಿತರಣೆಗೆ ಕ್ರಮಕೈಗೊಳ್ಳಲಾಗಿದೆ. ಜೂನ್ 2020 ರವರೆಗೆ 36 ಕೋಟಿ ಬ್ಯಾಂಕ್ ಖಾತೆಗಳಿಗೆ ರೂ.64,500 ಕೋಟಿ ಹಣವನ್ನು ನೇರ ವರ್ಗಾವಣೆ ಮಾಡಲಾಗಿದೆ. ವಲಸೆ ಕಾರ್ಮಿಕರಿಗೆ ಅನುಕೂಲ ಮಾಡಿಕೊಡುವ ದೃಷ್ಟಿಯಿಂದ ಪಡಿತರ ಚೀಟಿ ಹೊಂದಿರುವ ಯಾವುದೇ ಕಾರ್ಮಿಕ ಅವನು ಬಯಸಿದ ರಾಜ್ಯದ ಯಾವುದೇ ಪಡಿತರ ಅಂಗಡಿಯಲ್ಲಿ ಪಡಿತರ ಪಡೆಯಬಹುದು. 2020-21 ನೇ ಸಾಲಿನಲ್ಲಿ ಉದ್ಯೋಗ ಖಾತ್ರಿ ಯೋಜನೆಗಾಗಿ ರೂ.61,000 ಕೋಟಿ ಅನುದಾನ ಮೀಸಲಿಡಲಾಗಿತ್ತು, ಲಾಕ್ ಡೌನ್ ಆದ ಪರಿಣಾಮ ಇದಕ್ಕೆ ಹೆಚ್ಚುವರಿಯಾಗಿ 40,000 ಕೋಟಿ ಅನುದಾನವನ್ನು ಒದಗಿಸಲಾಗಿದೆ. ದಿನಗೂಲಿಯನ್ನು ಹೆಚ್ಚಿಸಲಾಗಿದೆ. 70 ಲಕ್ಷ ಕಿಸಾನ್ ಕ್ರೆಡಿಟ್ ಕಾರ್ಡ್‍ಗಳನ್ನು ವಿತರಿಸಲಾಗಿದೆ. ಆತ್ಮ ನಿರ್ಭರ್ ಭಾರತ ಯೋಜನೆಯಡಿ 2 ಲಕ್ಷ ಕೋಟಿ ರಿಯಾಯಿತಿ ದರದಲ್ಲಿ 62,000 ಕೋಟಿ ಕೃಷಿ ಸಾಲ ವಿತರಣೆ ಮಾಡಲಾಗಿದೆ. ಕೃಷಿ ಮೂಲಸೌಕರ್ಯಕ್ಕಾಗಿ 1 ಲಕ್ಷ ಕೋಟಿ ಒದಗಿಸಲಾಗಿದೆ. ಪಶು ಸಂಗೋಪನಾ ಮೂಲಸೌಕರ್ಯ ಅಭಿವೃಧ್ದಿಗೆ 15,000 ಕೋಟಿ ಒದಗಿಸಲಾಗಿದೆ. ರೈತರನ್ನು ಎ.ಪಿ.ಎಂ.ಸಿ. ಗಳಿಂದ ಮುಕ್ತಗೊಳಿಸಲಾಗಿದೆ. 2020-21 ನೇ ಸಾಲಿನಲ್ಲಿ 14 ಮುಂಗಾರು ಬೆಳೆಗಳಿಗೆ ಕನಿಷ್ಟ ಬೆಂಬಲ ಬೆಲೆಯನ್ನು ಹೆಚ್ಚಿಸಲಾಗಿದೆ. ರಕ್ಷಣಾ ಕ್ಷೇತ್ರ ಮತ್ತು ಅಂತರಿಕ್ಷ ವಲಯದಲ್ಲಿ ಸ್ವಾವಲಂಬನೆಯನ್ನು ಸಾಧಿಸಲು ಹಲವಾರು ಕ್ರಮಗಳನ್ನು ಕೈಗೊಳ್ಳಲಾಗಿದೆ.
ಭಾರತದ ಮುಂದಿರುವ ಅನೇಕ ಸವಾಲುಗಳನ್ನು ನಮ್ಮ ಸರ್ಕಾರ ಮುಂದಿನ ನಾಲ್ಕು ವರ್ಷಗಳಲ್ಲಿ ಸಮರ್ಥವಾಗಿ ಎದುರಿಸಲಿದೆ, ಸವಾಲುಗಳಿಗೆ ಸಮರ್ಪಕ ಪರಿಹಾರ ಕಂಡುಕೊಂಡು ಭಾರತದ ಶಕ್ತಿ ಮತ್ತು ವರ್ಚಸ್ಸನ್ನು ಮತ್ತಷ್ಟು ಹೆಚ್ಚಿಸಿಕೊಳ್ಳಲಿದೆ. ಇದಕ್ಕೆ ಪೂರಕವಾಗಿ ಕೇಂದ್ರ ಸರ್ಕಾರ ಸಕ್ರಿಯವಾಗಿರಲಿದೆ ಎಂದು ಸಿದ್ದೇಶ್ವರ ಹೇಳಿದ್ದಾರೆ.