ದಾವಣಗೆರೆ,ಅ.13 – ಅಕಸ್ಮಾತ್, ಅಪ್ಪಿತಪ್ಪಿ ಯಾರಾದರೂ ಬಾಯ್ತೆರೆದು ನಿಂತಿರುವ ಈ ಡಕ್‍ಗೆ ಕಾಲಿಟ್ಟರೆ ಮುಗಿಯಿತು, ಒಳಚರಂಡಿ ಒಳಗೆ ಸೇರಿ ಜೀವ ಕಳೆದುಕೊಳ್ಳುವುದಂತೂ ನಿಶ್ಚಯ. ರಾತ್ರಿ ಹೊತ್ತು ದ್ವಿಚಕ್ರ ವಾಹ ನಗಳು ಇದರಲ್ಲಿ ಸಿಕ್ಕು ಹಾಕಿಕೊಂಡರೆ ಬದುಕಿ ಬರುವ ಸಾಧ್ಯತೆಗಳಿಲ್ಲ.
ಇದು ಹೊಸ ಬಸ್ ನಿಲ್ದಾಣದ ಹಿಂಭಾಗ ನಿಟುವಳ್ಳಿಗೆ ಹೋಗುವ ರಸ್ತೆಯ ಆರಂಭದಲ್ಲೇ 5ನೇ ಕ್ರಾಸ್‍ನಲ್ಲಿ ಕಂಡು ಬರುವ ಅಪಾಯಕಾರಿ ದೃಶ್ಯ. ಗಣೇಶ ಲೇಔಟ್‍ನ 5ನೇ ಕ್ರಾಸ್ ನಾಗರಿಕರು ಈ ಬಾಯ್ತೆರೆದು ನಿಂತ ಡಕ್‍ಗೆ ಗಿಡ ಗಂಟಿಗಳನ್ನು ನೆಟ್ಟು, ಜನರು ಅದರಲ್ಲಿ ಬೀಳದಂತೆ ತಡೆಹಿಡಿದಿದ್ದಾರೆ. ಹೀಗಿದ್ದರೂ ರಾತ್ರಿ ಹೊತ್ತು ಯಾರಾದರೂ ಕುಡುಕರು ಅಪ್ಪಿತಪ್ಪಿ ಅದರಲ್ಲಿ ಬಿದ್ದರೆ ಬದುಕಿ ಉಳಿಯುವುದಂತೂ ಸಾಧ್ಯವೇ ಇಲ್ಲ.
ಈ ಡಕ್ ರಿಪೇರಿ ಮಾಡುವಂತೆ ಆ ಭಾಗದ ನಾಗರಿಕರು ನಗರ ಪಾಲಿಕೆಗೆ ಎರಡು ಬಾರಿ ಮನವಿ ಸಲ್ಲಿಸಿದ್ದಾರೆ. ಆ ಭಾಗದ ಕಾರ್ಪೊರೇಟರ್ ಗಮನಕ್ಕೂ ತಂದಿದ್ದಾರೆ. ಹೀಗಿದ್ದೂ ಅದು ರಿಪೇರಿ ಆಗಿಲ್ಲ. ಯಾರದ್ದಾದರೂ ಪ್ರಾಣ ಹೋಗುವ ಮೊದಲು ಮೇಯರ್, ಆಯುಕ್ತರು ಇತ್ತಕಡೆ ಗಮನ ಹರಿಸಿ ಡಕ್ ರಿಪೇರಿ ಮಾಡಿಸಿಕೊಡಲಿ ಎಂದು ಮನವಿ ಮಾಡಿದ್ದಾರೆ.
ಡಕ್ ಗಟ್ಟಿಮುಟ್ಟಾಗಿದೆ. ಅದರ ಕೆಳಭಾಗ ಬಾಕ್ಸ್ ಚರಂಡಿ ನಿರ್ಮಿಸಿದರೆ ಡಕ್‍ಗೆ ಭದ್ರತೆಯೂ ಸಿಗುತ್ತದೆ. ಉಳಿದ ಕಡೆ ಮಣ್ಣು ಭರ್ತಿ ಮಾಡಿ ರಸ್ತೆ ಸರಿಪಡಿಸಿದರೆ ಸಮಸ್ಯೆಗೆ ಪರಿಹಾರ ದೊರೆತಂತಾಗುತ್ತದೆ. ಈ ಕೆಲಸ ಬೇಗ ಆಗಲಿ ಎಂಬುದು ಜನತೆಯ ಆಶಯ.