ಕೊರೊನಾ ತಂದ ಆನ್‌ಲೈನ್‌ನ ಅತಂತ್ರ ಶಿಕ್ಷಣ !

ದಾವಣಗೆರೆ, ಜು. 10 – ಕೊರೊನಾ ವೈರಸ್ ಕಾರಣದಿಂದಾಗಿ ಅತ್ತ ಶಾಲೆಗಳು ಶುರುವಾಗುತ್ತಿಲ್ಲ, ಇತ್ತ ಆನ್‌ಲೈನ್ ತರಗತಿಗಳು ಎಲ್ಲರ ಕೈಗೆಟುಕುತ್ತಿಲ್ಲ. ಇದರಿಂದಾಗಿ ವಿದ್ಯಾರ್ಥಿಗಳು, ಮನೆಯಲ್ಲಿ  ಇರಲಾರೆ – ಶಾಲೆಗೆ ಹೋಗಲಾರೆ ಎಂದು ಪೇಚಾಡುವ ಸ್ಥಿತಿ ತಲುಪಿದ್ದಾರೆ.

ಜೂನ್ ವೇಳೆಗೆ ಆರಂಭವಾಗಬೇಕಿದ್ದ ಶಾಲೆಗಳು, ಜುಲೈಗೆ ಮುಂದೂಡಿಕೆಯಾದವು. ಈಗ ಆಗಸ್ಟ್‌ವರೆಗೆ ಆರಂಭವಾಗುವ ಸೂಚನೆಗಳಿಲ್ಲ. ಈ ನಡುವೆಯೇ, ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ಆಗಸ್ಟ್ ತಿಂಗಳ ಶಾಲಾರಂಭವೂ ಕಠಿಣವೇ ಆಗಿದೆ.

ಲಾಕ್‌ಡೌನ್ ಆರಂಭದ ವೇಳೆ ದೂರ ದಲ್ಲಿದ್ದ ಕೊರೊನಾ, ಜುಲೈ ವೇಳೆಗೆ ಅಕ್ಕ ಪಕ್ಕದ ಬೀದಿಗಳಲ್ಲೇ ಕಾಣಿಸಿಕೊಳ್ಳಲು ಆರಂಭಿಸಿದೆ. ಹೀಗಿರುವಾಗ ಮಕ್ಕಳನ್ನು ಶಾಲೆಗೆ ಕಳಿಸಲು ತಂದೆ – ತಾಯಿಗಳಿಗೆ ಎಂಟೆದೆಯೇ ಬೇಕು.

ಹೇಳಿ ಕೇಳಿ ಇದು ಮಾಹಿತಿ ತಂತ್ರಜ್ಞಾನದ ಯುಗ. ಮಕ್ಕಳು ಶಾಲೆಗೆ ಹೋಗದಿದ್ದರೆ ಏನಂತೆ, ಶಾಲೆಯನ್ನೇ ಮಕ್ಕಳ ಬಳಿಗೆ ತರುತ್ತೇವೆ ಎಂದು ಆನ್‌ಲೈನ್‌ ಶಿಕ್ಷಣ ಹೇಳುತ್ತಿದೆ. ಆದರೆ, ಆನ್‌ಲೈನ್ ಶಿಕ್ಷಣ ಬಯಸುವ ಗ್ಯಾಡ್ಜೆಟ್ ಹಾಗೂ ಜಿ.ಬಿ.ಗಟ್ಟಲೇ ಡಾಟಾ ಹೊಂದಿಸುವುದು ಸುಲಭವೇನಲ್ಲ.

ಆನ್‌ಲೈನ್ ಶಿಕ್ಷಣಕ್ಕೆ ಶಿಕ್ಷಣ ವ್ಯವಸ್ಥೆ, ಶಿಕ್ಷಕರು, ಶಾಲಾ ಆಡಳಿತ ಮಂಡಳಿ, ಪೋಷ ಕರು ಹಾಗೂ ವಿದ್ಯಾರ್ಥಿಗಳೆಲ್ಲರನ್ನೂ ಸಜ್ಜುಗೊ ಳಿಸುವುದು ಸುಲಭದ ಮಾತಲ್ಲ. ಇದೆಲ್ಲದರ ನಡುವೆ, ಬದಲಾಗಿಯೇ ಬಿಡೋಣ ಎಂದರೆ ವಾತಾವರಣವೇ ಅನಿಶ್ಚಿತ – ಅತಂತ್ರ. ಯಾವಾಗ ಕೊರೊನಾ ಮುಗಿಯುತ್ತೆ, ಯಾವಾಗ ನೇರ  ಶಾಲೆಗಳು ಆರಂಭವಾಗುತ್ತವೆ ಎಂಬುದರ ಬಗ್ಗೆ ಯಾರೂ ಸ್ಪಷ್ಟವಾಗಿ ಹೇಳುವಂತಿಲ್ಲ.

ಮೂರೇ ತಿಂಗಳಲ್ಲಿ ಕನ್ನಡಕ : ಪಿಯುಸಿ ವಿದ್ಯಾರ್ಥಿನಿಯಾದ ಭಾರ್ಗವಿಗೆ ಆನ್‌ಲೈನ್‌ ಶಿಕ್ಷಣ ಆರಂಭವಾಗಿತ್ತು. ತಂದೆ ಹದಿನೈದು ಸಾವಿರದ ಮೊಬೈಲ್ ಕೊಡಿಸಿದ್ದರು. ಆದರೆ, ಮೂರು ತಿಂಗಳಲ್ಲೇ ಮಗಳ ಕಣ್ಣಿಗೆ ಕನ್ನಡಕ, ತಲೆಗೆ ನೋವು ಬಂತು. ಇದು ಯಾಕೋ ಸರಿಯಾಗುತ್ತಿಲ್ಲ ಎಂದು ಸೆಕೆಂಡ್ ಹ್ಯಾಂಡ್ ಕಂಪ್ಯೂಟರ್‌ಗೆ ಹಣ ಸುರಿದಿದ್ದಾಯಿತು.

ಎಂಬಿಎ ವಿದ್ಯಾರ್ಥಿನಿ ಜಯಶ್ರೀಗೆ ಹೆಡ್‌ಫೋನ್‌ ಕಾರಣದಿಂದ ಕಿವಿ ನೋವಾದರೆ, ಬೋರಾಗುವ ಆನ್‌ಲೈನ್‌ ತರಗತಿಗಳಿಂದ ಎಂಟನೇ ತರಗತಿಯ ಸುಹಾಸ್‌ಗೆ ನಿದ್ರಾತುರ! ಕಿಸೆಯಲ್ಲಿ ಒಂದಿಷ್ಟು ದುಡ್ಡಿದ್ದವರಿಗೇ ಆನ್‌ಲೈನ್‌ ಈ ಸಮಸ್ಯೆಗಳನ್ನು ತರುತ್ತಿದೆ.

ಇನ್ನು ಡಾಟಾ ಕಾಣದ ಗ್ರಾಮಾಂತರ ಪ್ರದೇಶಗಳು, ಲಾಕ್‌ಡೌನ್‌ ಕಾರಣದಿಂದಾಗಿ ತಿಂಗಳುಗಳಿಂದ ಹಣವನ್ನೇ ಕಾಣದ ಪೋಷಕರ ಜೇಬುಗಳು ಆನ್‌ಲೈನ್‌ ಶಿಕ್ಷಣದ ಹೊರೆ ಭರಿಸಲು ಶಕ್ತವಾಗಿಲ್ಲ.

ಪೋಷಕರೂ ಸಿದ್ಧರಾಗಬೇಕು : ಆನ್‌ಲೈನ್‌ ಶಿಕ್ಷಣಕ್ಕೆ ಮಕ್ಕಳಷ್ಟೇ ಅಲ್ಲ ಪೋಷಕರೂ ಸಿದ್ಧರಾಗಬೇಕಿದೆ. ಮೊಬೈಲ್ ಮೂಲಕ ಮಕ್ಕಳಿಗೆ ಆನ್‌ಲೈನ್‌ ತರಗತಿ ತೋರಿಸಲು ಹೋದರೆ ಮಕ್ಕಳ ಕಣ್ಣು ಬಳಲುತ್ತವೆ. ಒಂದು ಟ್ಯಾಬ್, ಲ್ಯಾಪ್‌ಟಾಪ್‌ ಇಲ್ಲವೇ ಕಂಪ್ಯೂಟರ್ ಆನ್‌ಲೈನ್‌ ತರಗತಿಗಳಿಗೆ ಉತ್ತಮ.

ಮಕ್ಕಳಿಗೆ ಆನ್‌ಲೈನ್‌ ತರಗತಿಯ ಅಗತ್ಯದ ಬಗ್ಗೆ ತಿಳಿಹೇಳುವ ಜೊತೆಗೆ ಆರೋಗ್ಯಕ್ಕೆ ಧಕ್ಕೆಯಾಗದ ರೀತಿಯಲ್ಲಿ  ಗ್ಯಾಡ್ಜೆಟ್‌  ಬಳಕೆ ತಿಳಿಸುವುದರಲ್ಲಿ ಪೋಷಕರ ಹೊಣೆಯೇ ಹೆಚ್ಚಾಗಿದೆ.

ಮಕ್ಕಳ ಅರಿಯಿರಿ : ನೇರ ಶಿಕ್ಷಣದಲ್ಲಿ ಮಕ್ಕಳು ಶಿಕ್ಷಕರ ಎದುರೇ ಇರುತ್ತಾರೆ. ಒಂದು ವೇಳೆ ಅವರು ಪಾಠ ಆಲಿಸಲು ಆಸಕ್ತಿ ತೋರದೇ ಇದ್ದರೆ ಶಿಕ್ಷಕರು ತಿದ್ದಿ ಬುದ್ದಿ ಹೇಳುತ್ತಾರೆ. ಆನ್‌ಲೈನ್‌ನಲ್ಲಿ ಅದಕ್ಕೆ ಅವಕಾಶವಿರಲ್ಲ. ಮಕ್ಕಳು ಯಾವ ರೀತಿ ಆನ್‌ಲೈನ್‌ನಲ್ಲಿ ಕಲಿಯಲು ಬಯಸುತ್ತಾರೆ ಎಂಬುದು ಬಹಳ ಮುಖ್ಯವಾಗಿದೆ.

ಮಕ್ಕಳಿಗೆ ಆಸಕ್ತಿ ಬರುವ ರೀತಿಯಲ್ಲಿ ಪಾಠಗಳ ಬೋಧನೆ ಇರಬೇಕಾದರೆ, ಅವರ ಅಭಿಪ್ರಾಯಗಳನ್ನು ನಿರಂತರವಾಗಿ ಕೇಳುತ್ತಿರಬೇಕು. ಅದರಂತೆ ಆನ್‌ಲೈನ್‌ ಶಿಕ್ಷಣದಲ್ಲಿ ಬದಲಾವಣೆ ತರಲೇಬೇಕು. ಇಲ್ಲವಾದರೆ ಮೊಬೈಲ್ ಮೇಲೆ ಡಾಟಾ ಸುರಿದಂತೆ ಎಲ್ಲವೂ ವ್ಯರ್ಥವಾಗುತ್ತದೆ.

ಬೋರೋ ಬೋರು : ಝೂಮ್, ಗೂಗಲ್ ಮೀಟ್ ಇತ್ಯಾದಿ ಆಪ್‌ಗಳ ಮೂಲಕ ಕೆಲವರು ಪಾಠ ಮಾಡುತ್ತಿದ್ದಾರೆ. ಆದರೆ, ಅದು ಮಕ್ಕಳಿಗೆ ಬೋರಾಗುತ್ತಿದೆ ಎಂಬ ದೂರು ಹಲವು ಪೋಷಕರದ್ದು. ಏಕೆಂದರೆ ಮೇಷ್ಟ್ರುಗಳು ನೇರ ಪಾಠಕ್ಕೆ ಪರಿಣಿತರೇ ವಿನಃ ಆನ್‌ಲೈನ್ ಪಾಠಕ್ಕಲ್ಲ! 

ಶಿಕ್ಷಣದ ಹಲವಾರು ಆಪ್‌ಗಳು ಹಾಗೂ ಯೂಟ್ಯೂಬ್‌ನ ಪಾಠಗಳು ರಂಗು ರಂಗಾಗಿ ವಿದ್ಯಾರ್ಥಿಗಳ ಸೆಳೆಯುವಂತಿರುತ್ತವೆ. ಅಲ್ಲಿ ವಿಡಿಯೋ ರೂಪಿಸುವವರ ಹಾವ ಭಾವಗಳು ಆನ್‌ಲೈನ್‌ ಶಿಕ್ಷಣಕ್ಕೆ ಒಗ್ಗಿರುತ್ತವೆ. ಆದರೆ, ನಮ್ಮ ಕೆಲ ಬಡಪಾಯಿ ಶಿಕ್ಷಕರು ಆನ್‌ಲೈನ್‌ ಶಿಕ್ಷಣದಲ್ಲೂ ಕೋಲು ಹಿಡಿದು ಕರಿ ಬೋರ್ಡ್‌ ಮೇಲೆ ಪಾಠ ಬರೆದು ಮೊಬೈಲ್‌ ಮೂಲಕ ಮಕ್ಕಳಿಗೆ ಕಳಿಸುತ್ತಿದ್ದಾರೆ. ಇದು ನಿಜಕ್ಕೂ ಮಕ್ಕಳಿಗೆ ಬೋರೋ ಬೋರು.

ಬದಲಾವಣೆ ಬೇಕು : ಇವೆಲ್ಲ ಸಮಸ್ಯೆ ನೀಗಬೇಕಾದರೆ ಆನ್‌ಲೈನ್‌ ಶಿಕ್ಷಣದ ಮಿತಿಯನ್ನು ಅರಿತುಕೊಳ್ಳಲೇಬೇಕು. ಆನ್‌ಲೈನ್‌ ತಾತ್ಕಾಲಿಕ ಹಾಗೂ ಸೀಮಿತ. ಇದಕ್ಕೆ ಪೂರಕವಾಗಿ ನೇರ ಶಿಕ್ಷಣ ಬೇಕೇ ಬೇಕು. ಆನ್‌ಲೈನ್ ಹಾಗೂ ಸಾಮಾಜಿಕ ಅಂತರದ ನೇರ ಶಿಕ್ಷಣಗಳನ್ನು ರೂಪಿಸುವ ಬಗ್ಗೆ ಪರಿಣಿತರು ಮುಂದಾಗಬೇಕಿದೆ. ಇಲ್ಲವಾದರೆ ಅತ್ತ ಆನ್‌ಲೈನ್‌ಗೂ ಹಣ ಹಾಕಿ, ಇತ್ತ ನೇರ ಶಿಕ್ಷಣಕ್ಕೂ ಹಣ ಹಾಕಿ ಕೊನೆಗೆ ಎರಡೂ ಇಲ್ಲದೇ ಎಡಬಿಡಂಗಿತನಕ್ಕೆ ಹೋದಂತಾಗುತ್ತದೆ.

error: Content is protected !!