ದಾವಣಗೆರೆ, ಜು.9- ಎಟಿಎಂ ಕಾರ್ಡ್ ಬಳಕೆ ಗೊತ್ತಿಲ್ಲದವರ ಮೇಲೆ ಕಣ್ಣಿಟ್ಟು ಸಂಚು ರೂಪಿಸಿ ಹಣ ಬಿಡಿಸಿಕೊಡುವುದಾಗಿ ನಂಬಿಸಿ ನಕಲಿ ಎಟಿಎಂ ಕಾರ್ಡ್ ಗಳ ಮುಖೇನ ಕಾರ್ಡ್ ದಾರರ ಬ್ಯಾಂಕ್ ಖಾತೆಯಲ್ಲಿದ್ದ ಹಣ ದೋಚುತ್ತಿದ್ದ ಉತ್ತರ ಪ್ರದೇಶ ಮೂಲದ ಇಬ್ಬರು ಪೊಲೀಸರ ಅತಿಥಿಯಾಗಿದ್ದಾರೆ.
ಚಾಲಕ ವೃತ್ತಿಯ ಬ್ರಜ್ ಬನ್ ಸರೋಜ್, ಕಾಲ್ ಸೆಂಟರ್ ನಲ್ಲಿ ಕೆಲಸ ಮಾಡುವ ಹರಿಲಾಲ್ ಮಹಾರಾಣಿ ಡೀನ್ ಬಂಧಿತರು. ಈ ಇಬ್ಬರೂ ಉತ್ತರ ಪ್ರದೇಶದ ಪ್ರತಾಪ್ ಘರ್ ಜಿಲ್ಲೆಯವರು.
ದಾವಣಗೆರೆ, ಹರಿಹರ ಹಾಗೂ ಹರಪನಹಳ್ಳಿಯಲ್ಲಿ ಎಟಿಎಂ ಕಾರ್ಡ್ ಉಪಯೋಗಿಸಲು ಬಾರದವರನ್ನು ಗುರುತಿಸಿ ಹಣ ಬಿಡಿಸಿ ಕೊಡುವುದಾಗಿ ನೆಪ ಹೇಳಿ ಅದರಂತೆ ನಟಿಸಿ ಹಣ ಬಿಡಿಸಿಕೊಡುವುದು ಇಲ್ಲವೇ ಹಣ ಬರುತ್ತಿಲ್ಲವೆಂದು ಕುಂಟು ನೆಪ ಹೇಳಿ ಕಾರ್ಡ್ ದಾರರಿಗೆ ಕಾರ್ಡ್ ವಾಪಸ್ ನೀಡುತ್ತಿದ್ದರು. ಅಷ್ಟರೊಳಗೆ ಈ ನಡುವೆಯೇ ಕಾರ್ಡುದಾರರಿಗೆ ಗೊತ್ತಿಲ್ಲದಂತೆ ತಮ್ಮ ಕೈಯಲ್ಲಿದ್ದ ಕೀ ಬಂಚ್ ಮಾದರಿಯ ಸ್ವೈಪ್ ಯಂತ್ರದ ಮುಖೇನ ಎಟಿಎಂ ಕಾರ್ಡ್ ನ ಡಾಟಾವನ್ನು ಸ್ವೈಪ್ ಮಾಡಿಕೊಳ್ಳುತ್ತಿದ್ದರು. ಅಲ್ಲದೇ ಎಟಿಎಂ ಯಂತ್ರದಲ್ಲಿ ಕಾರ್ಡ್ ದಾರರು ತಮ್ಮ ಸೀಕ್ರೇಟ್ ಪಿನ್ ನಂಬರ್ ಟೈಪ್ ಮಾಡುವಾಗ ಅದರ ಮೇಲೂ ಈ ಕಳ್ಳರು ಕಣ್ಣಿಡುತ್ತಿದ್ದರು.
ನಂತರ ಅದೇ ನಂಬರ್ ವುಳ್ಳ ನಕಲಿ ಎಟಿಎಂ ಕಾರ್ಡ್ ಗಳನ್ನು ತಯಾರು ಮಾಡಿಕೊಂಡು ಕಾರ್ಡ್ ದಾರರ ಖಾತೆಯಲ್ಲಿನ ಹಣ ದೋಚಿ ವಂಚಿಸುತ್ತಿದ್ದರು. ಹೀಗೆ ವಂಚಿಸಿದ್ದ ಬಗ್ಗೆ ಹರಪನಹಳ್ಳಿಯ ಬಂಡಿ ರಾಜಪ್ಪ ಎಂಬಾತ ಮಾ.23, 2020ರಂದು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಪ್ರಕರಣದ ತನಿಖೆ ನಡೆಸಿ ಪೊಲೀಸರು ಆರೋಪಿಗಳಿ ಬ್ಬರನ್ನು ಸೆರೆ ಹಿಡಿದಿದ್ದಾರೆ.
ನಗರದ ಸಿಇಎನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಎರಡು ಪ್ರಕರಣಗಳು ದಾಖಲಾಗಿವೆ.